ಕುಮಟಾ : ತಾಲೂಕಿನಲ್ಲಿ ಗಾಂಜಾ ಸೇವನೆ ಅವ್ಯಾಹತವಾಗಿ ನಡೆಯುತ್ತಿದ್ದು ಈ ಜಾಲಕ್ಕೆ ಹದಿಹರೆಯದ ಮಕ್ಕಳೇ ಟಾರ್ಗೆಟ್ ಎಂದು ತಿಳಿದುಬಂದಿದೆ. ಗಾಂಜಾ ಸೇವನೆಯ ಸಮಯದಲ್ಲಿ ಗಾಂಜಾ ಎಲೆಯನ್ನು ತಿಕ್ಕಿ ನಿರುಪಯುಕ್ತ ಬೀಜವನ್ನು ಬಿಸಾಡುವುದರಿಂದ ಕೆಲವು ಕಡಲತೀರದ ಗಾಳಿಮರದ ಕೆಳಗೆ ಗಾಂಜಾ ಗಿಡ ಬೆಳೆದಿದೆ ಎಂಬ ಸುದ್ದಿ ವೈರಲ್ ಆಗಿದೆ.
ಈ ಗ್ಯಾಂಗ್ ಗಾಂಜಾ ಸೇವನೆಗೆ ಶಾಲಾ ಕಾಲೇಜುಗಳು ಹತ್ತಿರವಿರುವ ಕಡಲತೀರವನ್ನೇ ಆಯ್ಕೆ ಮಾಡಿಕೊಳ್ಳುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ತಾಲೂಕಿನ ವನ್ನಳಿ ಕಡಲತೀರ , ಮಣಕಿ ಮೈದಾನ , ಗುಡೇಅಂಗಡಿ ಕಡಲತೀರ , ಬಾಡ ಕಾಲೇಜು ಹತ್ತಿರದ ಕಡಲತೀರ , ಕಿರ್ಬೇಲಿ ಕೋಟೆ ಸೇರಿದಂತೆ ಅನೇಕ ನಿರ್ಜನ ಪ್ರದೇಶದಲ್ಲಿ ಗಾಂಜಾ ಸೇವನೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸ್ಥಳೀಯರು ಪ್ರಜ್ಞಾವಂತರು ಜಾಗೃತರಾಗಬೇಕಿದ್ದು ಊರಿನಲ್ಲಿ
ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ತೊಡೆತಟ್ಟಬೇಕಿದೆ. ಸಾಧನೆಯ ಹಾದಿ ಹುಡುಕಬೇಕಿದ್ದ ಯುವಜನತೆ ಗಾಂಜಾದಂತಹ ಮಾದಕವಸ್ತುವಿನ ದಾಸರಾಗುತ್ತಿರುವದು ಆಘಾತಕಾರಿ ಸಂಗತಿಯಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಹಾದಿತಪ್ಪುತ್ತಿರುವ ಯುವಕರನ್ನು ರಕ್ಷಿಸಬೇಕಿದೆ.
ಕುಮಟಾದಲ್ಲಿ ಗಾಂಜಾ ಸರಬರಾಜು ಮಾಡುತ್ತಿರುವ ವ್ಯಕ್ತಿಗಳ ವಿವರಗಳ ಬಗ್ಗೆ ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ತಿಳಿಯದ ವಿಷಯ ಏನಲ್ಲ..ಪೋಲೀಸ್ ಇಲಾಖೆ ಸಿಬ್ಬಂದಿಗಳೂ ಕೂಡ ಸಮಾಜಘಾತಕರ ವಿರುದ್ಧ ಕ್ರಮಕಗೊಳ್ಳುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆಯಬೇಕಿದೆ.