ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಹಳೆ ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ನೇತೃತ್ವದ ತಂಡ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಿದ್ದು, ಶ್ರೀಗಳು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೂ ಮತ್ತೆ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬಂದಿದೆ. ಈಗ ಶ್ರೀಗಳಿಗೆ ಕೃತಕ ಉಸಿರಾಟ ನೀಡಲಾಗುತ್ತಿದೆ.

ಆದರೆ ಶ್ರೀಗಳಿಗಳಿಗೆ ನಿಶ್ಯಕ್ತಿ ಹೆಚ್ಚಾಗಿದ್ದು, ನಿನ್ನೆ ಆರ್ಯುವೇದಿಕ್ ಚಿಕಿತ್ಸೆ ನೀಡಲಾಗಿದೆ. ಈಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿ, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

RELATED ARTICLES  ಉಡುಪಿ: ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ – ವಿದ್ಯಾರ್ಥಿನಿ ಆತ್ಮಹತ್ಯೆ

ಇನ್ನು ಶ್ಗೀಗಳ ಆರೋಗ್ಯದಲ್ಲಿ ಏರುಪೇರು ವಿಚಾರ ತಿಳಿಯುತ್ತಿದ್ದಂತೆಯೇ ಮಠದತ್ತ ರಾಜಕೀಯ ಗಣ್ಯರು ದೌಡಾಯಿಸುತ್ತಿದ್ದು, ಪ್ರಸ್ತುತ ಮೈಸೂರಿನಲ್ಲಿ ಸಿಎಂ ಕುಮಾರಸ್ವಾಮಿ ಅವರು ತುಮಕೂರಿಗೆ ಆಗಮಿಸುತ್ತಿದ್ದಾರೆ. ಅಂತೆಯೇ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರೂ ಕೂಡ ಮಠದತ್ತ ದೌಡಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ತಡರಾತ್ರಿಯಲ್ಲಿ ಶ್ರೀಗಳು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಶ್ರೀಗಳಿಗೆ ನಿಶ್ಯಕ್ತಿ ಹೆಚ್ಚಾಗಿದ್ದು ಅವರಿಗೆ ಆಯುರ್ವೇದಿಕ್ ಚಿಕಿತ್ಸೆ ನೀಡಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.ಇನ್ನು ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ಶ್ರೀ ಮಠಕ್ಕೆ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ. ಅಂತೆಯೇ ತಾತ್ಕಾಲಿಕವಾಗಿ ಭಕ್ತರಿಗೆ ಶ್ರೀಗಳ ದರ್ಶನ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಶ್ರೀಗಳ ಆರೋಗ್ಯ ಏರಾಪೇರಾದ ದಿನದಿಂದಲೂ ಮಠಕ್ಕೆ ಆಗಮಿಸುತ್ತಿದ್ದ ಭಕ್ತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಬಗ್ಗೆ ವಿಷಯ ತಿಳಿದು ಮಠಕ್ಕೆ ದೊಡ್ಡ ಪ್ರಮಾಣದ ಭಕ್ತರು ಮತ್ತು ಮಕ್ಕಳು ಆಗಮಿಸುತ್ತಿದ್ದಾರೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ಸಿದ್ದಗಂಗಾ ಮಠಕ್ಕೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.ಅಂತೆಯೇ ಮಠದ ಮುಖ್ಯದ್ವಾರದಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದ್ದು. ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಿಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಮಠಕ್ಕೆ ನಿಯೋಜನೆ ಮಾಡಲಾಗಿದೆ.