ತುಮಕೂರು: ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ ಶಿವನ ಸನ್ನಿಧಿ ಸೇರಿದರು. ಆ ಮೂಲಕ ಕನ್ನಡ ನಾಡಿನ ಅನೇಕರಿಗೆ ಬಾಳಿನ ಬೆಳಕಾಗಿದ್ದ ನಂದಾ ದೀಪವೊಂದು ಆರಿದಂತಾಗಿದೆ.
ತುಮಕೂರಿನ ಸಿದ್ಧಗಂಗಾ ಸ್ವಾಮೀಜಿ ಸಾಧನೆಗಳ ಭಂಡಾರವನ್ನು ನಮ್ಮೆಲ್ಲರಿಗೆ ಬಿಟ್ಟು ಅಗಲಿದ್ದಾರೆ. 111 ವರ್ಷ ವಯಸ್ಸಾದರೂ ಚಟುವಟಿಕೆಯಿಂದಲೇ ಇದ್ದ ಸ್ವಾಮೀಜಿ ನಮ್ಮೊಂದಿಗೆ ಇಲ್ಲ ಎಂಬುದನ್ನು ಸದ್ಯಕ್ಕೆ, ಸುಲಭಕ್ಕೆ ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ.
ಚೆನ್ನೈನಲ್ಲಿ ಚಿಕಿತ್ಸೆ ಪಡೆದು ಸ್ವಾಮೀಜಿ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳು ಕಂಡು ಬಂದಿತ್ತು. ತುಮಕೂರಿನ ಸಿದ್ದಗಂಗಾ ಮಠಕ್ಕೂ ದಾಖಲಿಸಲಾಗಿತ್ತು. ಆದರೆ, ಮಠಕ್ಕೆ ಮರಳಿದ ನಂತರ ಆರೋಗ್ಯ ಸಾಕಷ್ಟು ಸುಧಾರಿಸಿ, ಶಿವ ಪೂಜೆಯಲ್ಲಿಯೂ ಪಾಲ್ಗೊಂಡಿದ್ದರು. ಇದು ಭಕ್ತರಲ್ಲಿ ಸಾಕಷ್ಟು ಭರವಸೆಯನ್ನು ಹುಟ್ಟು ಹಾಕಿತ್ತು. ಆದರೆ, ದೀಢೀರ್ ಆರೋಗ್ಯದಲ್ಲಿ ಏರುಪೇರು ಕಂಡಿದ್ದು, ಬಹು ಅಂಗಾಂಗ ವೈಫಲ್ಯದಿಂದ ಶ್ರೀಗಳು ಲಿಂಗೈಕ್ಯರಾದರು.
1 ಏಪ್ರಿಲ್ 1907ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಜನಿಸಿದ್ದ ಸ್ವಾಮೀಜಿ ಅವರಿಗೆ ಇಡೀ ಪ್ರಪಂಚದಾದ್ಯಂತ ಭಕ್ತರಿದ್ದಾರೆ. ಖುದ್ದು ಪ್ರಧಾನ ಮಂತ್ರಿ, ರಾಷ್ಟ್ರಪತಿಗಳಾದಿಯಾಗಿ ಎಲ್ಲರೂ ಶ್ರೀಗಳು ಇದ್ದಲ್ಲಿಗೆ ಬಂದು ದರ್ಶನ ಪಡೆದುಕೊಂಡು ಹೋದ ಉದಾಹರಣೆಗಳಿವೆ.
ಕರ್ನಾಟಕ ರತ್ನ ಡಾ. ಶ್ರೀ.ಶಿವಕುಮಾರ ಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದೇ ಎಲ್ಲರೂ ಸಂಬೋಧಿಸುತ್ತಾರೆ. ಅವರ ಸಾಧನೆ ಮತ್ತು ಕೊಡುಗೆಯನ್ನು ಅಕ್ಷರಗಳ ಮುಖೇನ ಕಟ್ಟಿಕೊಡುವುದು ಕಷ್ಟ. ಅಕ್ಷರ, ಜ್ಞಾನ ಮತ್ತು ಅನ್ನ ದಾಸೋಹದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಲ್ಲಿ ಹೊಸ ಬೆಳಕನ್ನು ಮೂಡಿಸಿದ ಸೂರ್ಯ ಮರೆಯಾಗಿದೆ.
ಚೆನ್ನೈನಲ್ಲಿ ಚಿಕಿತ್ಸೆ:
ಕೆಲ ದಿನಗಳ ಹಿಂದಷ್ಟೇ ಪಿತ್ತಕೋಶ ಮತ್ತು ಯಕೃತ್ತಿನ ಸೋಂಕು ಕಾಣಿಸಿಕೊಂಡಿದ್ದ ಶ್ರೀಗಳನ್ನು ಚೆನ್ನೈನ ರೆಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 13 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡ ಸ್ವಾಮೀಜಿ ಮಠಕ್ಕೆ ಹಿಂದಿರುಗಿ ತಮ್ಮ ಎಂದಿನ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದರು. ರೆಲಾ ಆಸ್ಪತ್ರೆಯಲ್ಲಿದ್ದಾಗ ಶ್ರೀಗಳ ಒತ್ತಾಯದ ಮೇರೆಗೆ ಐಸಿಯುನಲ್ಲೇ ಅವರಿಗೆ ಇಷ್ಟಲಿಂಗ ಪೂಜೆ ನೆರವೇರಿಸಲೂ ಅವಕಾಶ ಕಲ್ಪಿಸಲಾಗಿತ್ತು. ಶ್ರೀಗಳಿಗೆ ವಿಶ್ರಾಂತಿ ಅಗತ್ಯ ಇದ್ದ ಕಾರಣ ಡಿಸ್ಚಾರ್ಜ್ ಆದ ಮೇಲೆ 2 ವಾರಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯವಿರಲಿಲ್ಲ.
ಇದಾದ ಕೆಲವು ದಿನಗಳಲ್ಲೇ ಶ್ರೀಗಳ ಶ್ವಾಸಕೋಶದಲ್ಲಿ ಮತ್ತೆ ನೀರು ತುಂಬಿಕೊಂಡು ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಶ್ರೀಗಳ ತಪಾಸಣೆ ನಡೆಸಿದ್ದ ವೈದ್ಯರು ಆರಂಭದಲ್ಲಿ ಶ್ವಾಸಕೋಶದಲ್ಲಿ ತುಂಬಿಕೊಳ್ಳುತ್ತಿದ್ದ ನೀರು ಹೊಟ್ಟೆಗೂ ವ್ಯಾಪಿಸಲಾರಂಭಿಸಿದೆ. ಚಿಕಿತ್ಸೆ ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣುತ್ತಿಲ್ಲ, ಶ್ರೀಗಳಿಗೆ ಉಸಿರಾಡಲೂ ಕಷ್ಟವಾಗುತ್ತಿರುವುದರಿಂದ ವೆಂಟಿಲೇಟರ್‌ನಲ್ಲಿಡಲಾಗಿದೆ, ಎಂದು ಮಾಹಿತಿ ನೀಡಿದ್ದರು. ಆದರೆ, ಶ್ರೀಗಳ ಇಚ್ಛೆಯಂತೆ ಮಠಕ್ಕೆ ಕರೆ ತಂದು, ಆಸ್ಪತ್ರೆಯಂತೆಯೇ ಚಿಕಿತ್ಸೆ ಮುಂದುವರಿಸಲಾಗಿತ್ತು.
ಮಠಕ್ಕೆ ಕರೆ ತಂದ ಬಳಿಕ ಶ್ರೀಗಳ ರೋಗ್ಯದಲ್ಲಿ ಚೇತರಿಕೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸಲು ಆರಂಭಿಸಿದ್ದರು. ಇದು ವೈದ್ಯ ಲೋಕದ ವಿಸ್ಮಯವೆಂದೇ ಹೇಳಲಾಗಿತ್ತು. ಇದು ಭಕ್ತ ವರ್ಗಕ್ಕೂ ನೆಮ್ಮದಿ ನೀಡಿತ್ತು. ಆದರೆ ಭಾನುವಾರ ರಾತ್ರಿಯಿಂದ ಮತ್ತೆ ಶ್ರೀಗಳ ಆರೋಗ್ಯ ಗಂಭೀರಗೊಂಡಿದ್ದು, ಬಹು ಅಂಗಾಂಗ ವೈಫಲ್ಯದಿಂದ ಸೋಮವಾರ ಲಿಂಗೈಕ್ಯರಾದರು. ಶ್ರೀಗಳ ಅಗಲುವಿಕೆಯಿಂದ ಭಕ್ತಗಣದಲ್ಲಿ ಶೋಕ ಮಡುಗಟ್ಟಿದೆ. ಶ್ರೇಷ್ಠ ಮೌನ ಹುಣ್ಣಿಮೆಯಂದೇ ಶ್ರೀಗಳು ಶಿವನ ಪಾದ ಸೇರಿರುವುದು ಮಾತ್ರ ಕಾಕತಾಳೀಯ.
ಮಾಹಿತಿಗಾಗಿ ಧನ್ಯವಾದ : ಏಶಿಯಾನೆಟ್.