ಕುಮಟಾ: ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾಂಬಾ ಆವರಣದಲ್ಲಿ ನಡೆದ ಮಕ್ಕಳ ಎರಡನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಸಂಪನ್ನವಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ
ಮಕ್ಕಳು ಪ್ರಾರಂಭಿಕ ಹಂತದಿಂದಲೇ ದಿನಪತ್ರಿಕೆಗಳನ್ನು ಓದುವದು ಹಾಗೂ ಸಣ್ಣಪುಟ್ಟ ಕಥೆ ಕವನಗಳನ್ನು ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸಾಹಿತ್ಯ ಸಮ್ಮೇಳನ ಓದುಗರನ್ನು ಹುಟ್ಟುಹಾಕುವ ವೇದಿಕೆಯಾಗಬೇಕು. ಮಕ್ಕಳಿಗೆ ಸಾಹಿತಿಕ ಜವಾಬ್ದಾರಿ ನೀಡಿ ಬೆಳೆಸುವ ಪ್ರಯತ್ನ ಮಕ್ಕಳ ಸಾಹಿತ್ಯ ಸಮ್ಮೇಳನದ್ದಾಗಿದೆ. ಮಕ್ಕಳು ಸಾಹಿತಿಗಳಾಗಿ ಕನ್ನಡಕ್ಕೆ ಕನ್ನಡ ನಾಡಿಗೆ ಕೊಡುಗೆ ನೀಡಬೇಕು. ಕಣ್ಣಿನಿಂದ ಕಂಡಿದ್ದನ್ನು ಬರೆದರೆ ಬರಹಗಾರರಾಗಿ ಹೊರಹೊಮ್ಮಲು ಸಾಧ್ಯ. ಇದರಿಂದ ಕನ್ನಡಕ್ಕೆ ಸೇವೆ ಗೈಯ್ಯಲು ಅವಕಾಶವೂ ಲಭಿಸುತ್ತದೆ ಎಂದರು.
ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯದ ಬೇರುಗಳು ಗಟ್ಟಿಯಾಗಿ ಊರುತ್ತಿವೆ. ನಮ್ಮಲ್ಲಿ ಕನ್ನಡದ ಶ್ರೀಮಂತಿಕೆ ಇದೆ. ಮಕ್ಕಳು ಸಾಹಿತ್ಯ ರಚಿಸಲು ಸಾಮಥ್ರ್ಯ ಪಡೆಯಲು ಇಂತಹ ಸಮ್ಮೇಳನಗಳು ತುಂಬಾ ಸಹಕಾರಿಯಾಗುತ್ತವೆ. ಕನ್ನಡ ಭಾಷೆಯಲ್ಲಿ ಸತ್ವವಿದೆ. ಇದನ್ನು ಬೆಳೆಸುವ ಕಾಯಕವನ್ನು ಎಲ್ಲರೂ ನಡೆಸಬೇಕು ಎಂದು ಅತಿಥಿಯಾಗಿ ಆಗಮಿಸಿದ್ದ ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕ ಅಭಿಪ್ರಾಯ ಪಟ್ಟರು.
ಪುಸ್ತಕ ಮಳಿಗೆ ಉದ್ಘಾಟಿಸಿದ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ ಮಾತನಾಡಿ ಮಕ್ಕಳ ಸುಪ್ತ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದು. ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚಿನ ರೀತಿಯಲ್ಲಿ ತೊಡಗಿಕೊಂಡಾಗ ಮಾತ್ರವೇ ಸಮಾಜಮುಖಿಯಾಗಿ ಬೆಳೆಯಲು ಸಾಧ್ಯ ಎಂದರು.
ಸಮ್ಮೇಳನಾಧ್ಯಕ್ಷೆ ಕುಮಾರಿ ಅರ್ಚನಾ ಎಂ ಹೆಗಡೆ ಮಾತನಾಡಿದರು.ವೇದಿಕೆಯಲ್ಲಿ ಹೆಗಡೆ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಪಟಗಾರ, ಎಪಿಎಂಸಿ ಅಧ್ಯಕ್ಷ ಧೀರು ಶಾನಭಾಗ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ, ವೆಂಕಟೇಶ ನಾಯ್ಕ, ಉಪನ್ಯಾಸಕರಾದ ಸಿ ಜಿ ಗುಣಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಕುಮಾರಿ ನಿತ್ಯಾ ಅವಧಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಧರ ಗೌಡ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಎಂ ನಾಯ್ಕ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೆಗಡೆ ಪಂಚಾಯತದ ಎದುರಿನಿಂದ ಆರಂಭಗೊಂಡು ಶಾಂತಿಕಾಂಬಾ ರಥಬೀದಿಯ ಮೂಲಕ ತೆರಳಿ ಶಾಂತಿಕಾಂಬಾ ದೇವಸ್ಥಾನದ ಎದುರು ಕೊನೆಗೊಂಡಿತು.