ನಡೆದಾಡುವ ದೇವರೆಂದೇ ನಾಡಿನಾದ್ಯಂತ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ ಸಂತ ಸಿದ್ದಗಂಗಾಮಠದ ಡಾ. ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಗಳು ಇಂದು ಲಿಂಗೈಕ್ಯರಾಗಿರುವುದು ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಲಿಂಗೈಕ್ಯರಾದ ಪರಮಪೂಜ್ಯರ ಆತ್ಮಕ್ಕೆ ಪರಮಶಾಂತಿ ಲಭಿಸಲಿ ಎಂದು ಶ್ರೀರಾಮಚಂದ್ರಾಪುರಮಠ ಹಾರೈಸುತ್ತದೆ.
ಸಿದ್ದಗಂಗಾ ಮಠದ ಪೂಜ್ಯ ಶ್ರೀಗಳು ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಜೊತೆಗೆ ಆತ್ಮೀಯವಾದ ಒಡನಾಟ ಹೊಂದಿದ್ದರು. ಶ್ರೀಮಠದ ಗೋಸಂರಕ್ಷಣೆಯ ಕಾರ್ಯಗಳಿಗೆ ಸದಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದ ಸಿದ್ದಗಂಗಾ ಶ್ರೀಗಳು, *ರಾಮಚಂದ್ರಾಪುರಮಠದ ಗೋಸಂರಕ್ಷಣಾ ಕಾರ್ಯಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು.
ಸಿದ್ದಗಂಗಾ ಶ್ರೀಗಳಿಗೆ ಗೋಕರ್ಣದ “ಸಾರ್ವಭೌಮ” ಪ್ರಶಸ್ತಿ:
ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಪ್ರತಿವರ್ಷ ಕೊಡಮಾಡುವ “ಸಾರ್ವಭೌಮ” ಪ್ರಶಸ್ತಿಯನ್ನು ಕಳೆದ ವರ್ಷ ಪೂಜ್ಯ ಶ್ರೀಶ್ರೀ ಶಿವಕುಮಾರ ಸ್ವಾಮಿಗಳಿಗೆ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳು ನೀಡಿ ಗೌರವಿಸಿದ್ದರು.
ಸಿದ್ದಗಂಗಾ ಶ್ರೀ ಹೆಸರಲ್ಲಿ 110 ಲೋಡು ಮೇವು
2017 ರ ಭೀಕರ ಬರಗಾಲದಲ್ಲಿ ಶ್ರೀರಾಮಚಂದ್ರಾಪುರಮಠದಿಂದ ‘ಗೋಪ್ರಾಣಭಿಕ್ಷಾ’ ಆಂದೋಲನ ಕೈಗೊಂಡು ಲಕ್ಷಾಂತರ ಗೋವುಗಳಿಗೆ ಮೇವು ನೀಡಲಾಗಿತ್ತು. ಆ ಸಂದರ್ಭದಲ್ಲಿ ಸಿದ್ದಗಂಗಾ ಶ್ರೀಗಳ ಗೌರವಾರ್ಥ 110 ಲೋಡು ಮೇವನ್ನು ಮಲೆಮಹದೇಶ್ವರ ಬೆಟ್ಟದ ಗೋವುಗಳಿಗೆ ನೀಡಿ, ಶತಾಯುಷಿಗೆ ಅರ್ಥಪೂರ್ಣವಾದ ಗೌರವ ಸೂಚಿಸಲಾಗಿತ್ತು.
“ಅಭಯಾಕ್ಷರ” ಕ್ಕೆ ಸಹಿ ; ಗೋಸಂರಕ್ಷಣೆಗೆ ಸಿದ್ದಗಂಗಾ ಶ್ರೀ ಹಕ್ಕೊತ್ತಾಯ
ಶ್ರೀರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರದಿಂದ ನಡೆದ ‘ಅಭಯಾಕ್ಷರ’ ಆಂದೋಲನಕ್ಕೆ ತಮ್ಮ ಬೆಂಬಲ ಸೂಚಿಸಿದ್ದ ಪೂಜ್ಯ ಶಿವಕುಮಾರ ಸ್ವಾಮಿಗಳು, ಅಭಯಾಕ್ಷರಕ್ಕೆ ಸಹಿ ಮಾಡಿ ; ಸಮಗ್ರ ದೇಶದಲ್ಲಿ ಸಂಪೂರ್ಣ ಗೋಹತ್ಯೆಯನ್ನು ನಿಷೇಧಿಸುವಂತೆ ತಮ್ಮ ಹಕ್ಕೊತ್ತಾಯ ಸಲ್ಲಿಸಿದ್ದರು.
‘ಅಭಯಾಕ್ಷರ’ ಅಭಿಯಾನದಲ್ಲಿ ಸಂಗ್ರಹಿತವಾದ ಸುಮಾರು ಒಂದು ಕೋಟಿ ಅರ್ಜಿಗಳನ್ನು ಇಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ದಿನವೇ ಪೂಜ್ಯರು ಲಿಂಗೈಕ್ಯರಾಗಿರುವುದು ಕಾಕತಾಳೀಯವೇ ಆಗಿದೆ. ಪೂಜ್ಯರ ಗೌರವಾರ್ಥ ಅಭಯಾಕ್ಷರ ಸಲ್ಲಿಕೆಯನ್ನು ರಾಜ್ಯಾದ್ಯಂತ ಮುಂದೂಡಲಾಗಿದ್ದು, ಸಂತಾಪ ಸಭೆಯನ್ನು ನಡೆಸುವ ಮೂಲಕ ಗೋಪ್ರೇಮಿ ಸಂತಶ್ರೇಷ್ಠರಿಗೆ ಭಾರತೀಯ ಗೋಪರಿವಾರ ಹಾಗೂ ಶ್ರೀಮಠದ ಕಾಮದುಘಾ ವಿಭಾಗ ಶ್ರದ್ಧಾಂಜಲಿ ಸಲ್ಲಿಸಿದೆ.
ಕಾಯಕಯೋಗಿ ಶ್ರೀಶ್ರೀ ಶಿವಕುಮಾರ ಸ್ವಾಮಿಗಳು ನಾಡಿಗೆ ಸಲ್ಲಿಸಿದ ಸೇವೆ – ತ್ಯಾಗ – ಅನುಪಮ ಕಾರ್ಯಗಳು ನಾಡಿನ ಜನತೆಗೆ ಆದರ್ಶವಾಗಲಿ, ಶ್ರೀ ಸೀತಾರಾಮಚಂದ್ರ – ಚಂದ್ರಮೌಳೀಶ್ವರ – ರಾಜರಾಜೇಶ್ವರ್ಯಾದಿ ದೇವತಾನುಗ್ರಹದಿಂದ ಪೂಜ್ಯರ ಆತ್ಮಕ್ಕೆ ಪರಮಶಾಂತಿ ಲಭಿಸಲಿ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಆಶಿಸಿದ್ದಾರೆ.