ತುಮಕೂರು: ಸಿದ್ದಗಂಗಾ ಶ್ರೀಗಳ ಲಿಂಗಶರೀರ ಗದ್ದುಗೆ ಬಂದು ತಲುಪಿದೆ. ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಲಕ್ಷಾಂತರ ಭಕ್ತರು ಅಂತಿಮ ದರ್ಶನ ಪಡೆದ ಬಳಿಕ ಶ್ರೀಗಳ ಲಿಂಗ ಶರೀರದ ಮೆರವಣಿಗೆ ನಡೆಯಿತು.
ಲಿಂಗ ಶರೀರವನ್ನ ರುದ್ರಾಕ್ಷಿ ಮಂಟಪದಲ್ಲಿ ಕೂರಿಸಿಕೊಂಡು ಹಳೇ ಮಠದ ಕ್ರಿಯಾ ಸಮಾಧಿವರೆಗೆ ಮೆರವಣಿಗೆ ಮಾಡಲಾಯಿತು. ಸದ್ಯ ಲಿಂಗಶರೀರ ಕ್ರಿಯಾ ಸಮಾಧಿ ಬಳಿ ತಲುಪಿತು. ಬಳಿಕ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಶ್ರೀಗಳ ಲಿಂಗಶರೀರಕ್ಕೆ ರಾಷ್ಟ್ರಧ್ವಜವನ್ನ ಹೊದಿಸಿ ಕುಶಾಲ ತೋಪುಗಳನ್ನ ಹಾರಿಸಲಾಯಿತು. ಇನ್ನೇನು ಕೆಲವೇ ಹೊತ್ತಿನಲ್ಲಿ ಅಂತಿಮ ವಿಧಾನ ಆರಂಭವಾಗಲಿದೆ.
ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಡಿಸಿಎಂ ಡಾ.ಜಿಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಸಚಿವರಾದ ಡಿಕೆ ಶಿವಕುಮಾರ್, ಸಾರಾ ಮಹೇಶ್, ಆರ್ವಿಡಿ, ವೆಂಕಟರಾವ್ ನಾಡಗೌಡ, ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಡಿಸಿಎಂ ಆರ್.ಅಶೋಕ್, ಶಾಸಕರಾದ ವಿ.ಸೋಮಣ್ಣ, ಸುರೇಶ್ ಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವ ಜನಾರ್ದನ್ ರೆಡ್ಡಿ, ಬಸವರಾಜ್ ಹೊರಟ್ಟಿ, ಸಂಸದೆ ಶೋಭಾ ಕರಂದ್ಲಾಜೆ, ವೀರಪ್ಪ ಮೊಯ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಯೋಗ ಗುರು ಬಾಬಾ ರಾಮ್ದೇವ್, ಆದಿಚುಂಚನಗಿರಿ ಮಠ ಶ್ರೀ ನಿರ್ಮಲಾನಂದ ಸ್ವಾಮೀಜಿ, ಸುತ್ತೂರು ಶ್ರೀಗಳು ಸೇರಿದಂತೆ ಹಲವು ಗಣ್ಯರು, ಸ್ವಾಮೀಜಿಗಳಿಂದ ಅಂತಿಮ ನಮನ ಸಲ್ಲಿಸಿದರು.