ಕಾರವಾರ: ಕಾರವಾರ ಸಮೀಪದ ಕೂರ್ಮಗಡ ಜಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ದೋಣಿ ಮುಳುಗಿ ಮೃತಪಟ್ಟ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಹೊಸೂರು ಗ್ರಾಮದ 8 ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರ ರಾತ್ರಿ ನಡೆಯಿತು. ದುರಂತದಿಂದಾಗಿ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.
ಶವಗಳನ್ನು ತಂದಾಗ ಕುಟುಂಬದವರ ಆಕ್ರಂದನ ಹೇಳತೀರದಾಗಿತ್ತು. ಅವರ ನೋವು ಎಂತಹ ಕಲ್ಲು ಹೃದಯವೂ ಕರಗಿಸುವಂತ್ತಿತ್ತು. ಹೊಸೂರಿನ ಪರಶುರಾಮ ಹಾಗೂ ಸೋಮಪ್ಪ ಬೆಳವಲಕೊಪ್ಪ ಸಹೋದರರು. ಕಾರವಾರದಲ್ಲಿದ್ದ ಬೀಗರು ನರಸಿಂಹ ದೇವರ ಜಾತ್ರೆಗೆ ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ ಎರಡೂ ಕುಟುಂಬದವರು ಜಾತ್ರೆಗೆ ತೆರಳಿದರು.
ಪರಶುರಾಮ ಬೆಳವಲಕೊಪ್ಪ (38), ಈತನ ಹೆಂಡತಿ ಭಾರತಿ (28), ಮಕ್ಕಳಾದ ಸಂಜೀವಿನಿ (14), ಸೌಜನ್ಯ (13), ಸಂದೀಪ (12), ಗಣೇಶ (08), ಸೋಮಪ್ಪ ಪತ್ನಿ ನಿರ್ಮಲಾ ಬೆಳವಲಕೊಪ್ಪ (24), ಮಕ್ಕಳಾದ ಕಿರಣ (5), ಅರುಣ (2), ಕೀರ್ತಿ (6) ಕಾರವಾರಕ್ಕೆ ಹೋಗಿದ್ದರು. ಆದರೆ, ಹತ್ತು ಮಂದಿಯಲ್ಲಿ 8 ವರ್ಷದ ಗಣೇಶ್ ಮತ್ತು ಸೋಮಪ್ಪ ಮಾತ್ರ ಬದುಕುಳಿದಿದ್ದಾರೆ.
ಉಳಿದ 10 ಮಂದಿಯ ಬದುಕು ದುರಂತ ಅಂತ್ಯಕಂಡಿದೆ. ಕೀರ್ತಿ ಮತ್ತು ಸಂದೀಪ ಅವರ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.