ಭಟ್ಕಳ -ಇಂದು ಯುವ ಕಲಾವಿದರು ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡರೂ ಸಹ ಗುರುಕುಲ ಪದ್ಧತಿಯ ಉತ್ತಮಾಂಶಗಳನ್ನೂ ಬಿಡದೇ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಸಂಸ್ಕಾರವಿಲ್ಲದ ಯಾವ ವಿದ್ಯೆ ಕಲೆ ಸಕಾಲದಲ್ಲಿ ನಮ್ಮ ಕೈ ಹಿಡಿಯಲಾರದು.ಹಾಗಾಗಿ ಅವುಗಳ ಲಾಭ ನಮಗೆ ದಕ್ಕಬೇಕಾದರೆ ಸಂಸ್ಕಾರ ಅತ್ಯಗತ್ಯ ಎಂದು ಜಿಲ್ಲೆಯ ಭಾವಕವಿ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ನುಡಿದರು.
ಅವರು ಇತ್ತೀಚೆಗೆ ಝೇಂಕಾರ ಕಲಾ ಸಂಘ ಅವರು ಆಯೋಜಿಸಿದ ಕರ್ನಾಟಕ ಸಂಗೀತ ನೃತ್ಯ ಕಾರ್ಯಾಗಾರದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವ್ಯಕ್ತಿಗೆ ಗೌರವ ವಯಸ್ಸಿನ ಆದಾರದಲ್ಲಿ ಬರುವಂತದ್ದು ಅಲ್ಲ. ಯೋಗ್ಯತೆಯ ಆಧಾರದ ಮೇಲೆ ಗೌರವ ತಾನಾಗಿಯೇ ಬರುತ್ತದೆ. ಅಂತಹ ಮಾರ್ಗ ನಮ್ಮದಾಗಿಸೋಣ.
ಝೇಂಕಾರ್ ಮೆಲೋಡೀಸ್ ತುಂಬ ವಿಶಿಷ್ಟವಾಗಿ ತನ್ನ ಹಾದಿ ತುಳಿಯುತ್ತಿರುವುದು ನನ್ನ ಕುತೂಹಲ ಹೆಚ್ಚಿಸಿದೆ. ಈ ತಂಡ ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಪರಿ ಖುಷಿಕೊಡುತ್ತದೆ. ಇಂದು ಅಣಬೆಗಳಂತೆ ಹುಟ್ಟಿಕೊಳ್ಳುವ ಎಷ್ಟೋ ಆಕ್ಕೆಸ್ಟ್ರಾ ತಂಡಗಳಿಗಿಂತ ಈ ಝೇಂಕಾರ್ ತನ್ನ ಇರುವಿಕೆಯನ್ನುಸಮುದಾಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವುದು ಭಟ್ಕಳದ ಓರ್ವ ಸಂಗೀತ ವಿದ್ಯಾರ್ಥಿಯಾಗಿ ಹೆಮ್ಮೆ ಪಡುತ್ತೇನೆ.
ಭಟ್ಕಳದಲ್ಲಿ ನಾವೆಲ್ಲ ಸಂಗೀತಾಸಕ್ತರು ಸೇರಿ ಒಂದು ಸಂಗೀತ ಭವನ ಮಾಡಲು ಪ್ರಯತ್ನಿಸುವ ಅಗತ್ಯವಿದೆ. ಇವೆಲ್ಲವುಗಳ ಬಗ್ಗೆ ಸರಕಾರದಿಂದ ಪಡೆಯಲು ಒಂದು ಸಾಂಘಿಕ ಪ್ರಯತ್ನ ಬೇಕಾಗಿದೆ. ಎಲ್ಲರೂ ಸೇರಿ ಈ ಬಗ್ಗೆ ಗಮನ ಹರಿಸೋಣ ಎಂದು ಮುಂಡಳ್ಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾ ಸಂಘದ ಅಧ್ಯಕ್ಷ ಪ್ರಸನ್ನ ಪ್ರಭು ಮಾತನಾಡಿ ವಿದ್ಯಾರ್ಥಿಗಳ ಮನೋವಿಕಾಸ ಹೆಚ್ಚಿಸಿ ಜಾಗೃತಿ ಮೂಡಿಸುವ ಸಲುವಾಗಿ ನಾವು ಇಂತ ಕಾರ್ಯಾಗಾರವನ್ನು ಆಯೋಜಿಸುವುದಾಗಿ ತಿಳಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಅಶೋಕ ಕುಮಾರ್ ಹೆಗ್ಗೋಡು ಆಗಮಿಸಿದ್ದರು. ವೇದಿಕೆಯಲ್ಲಿ ಸಂಗೀತ ಶಿಕ್ಷಕರಾದ ವೆಂಕಟೇಶ ಭಟ್, ಉದ್ಯಮಿ ಶಿವಾನಂದ ದೈಮನೆ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಗಿರಿಜಾ ದೇವಾಡಿ, ಶಿರಾಲಿಯ ವೈದ್ಯರಾದ ರಮೇಶ ಷರಾಪ್ ಇದ್ದರು. ಶಿಕ್ಷಕ ಸಂಜಯ ಗುಡಿಗಾರ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ೨೫೦ ಕ್ಕೂ ಅಧಿಕ ಮಕ್ಕಳ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.