ಕುಮಟಾ: ತಾಲೂಕಿನ ಮೂರೂರಿನ ಹೊಸಾಡದಲ್ಲಿರುವ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೋಪ್ರೇಮಿಗಳ ವಾರ್ಷಿಕ ಗೋ ಸ್ನೇಹ ಕೂಟ ಹಾಗೂ ಬೆಳದಿಂಗಳ ಊಟ ಕಾರ್ಯಕ್ರಮವು 26/01/2019 ರ ಶನಿವಾರ ಸಂಜೆ ಐದು ಗಂಟೆಯಿಂದ ನಡೆಯಲಿದೆ.
ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾ ಅನುಗ್ರಹದೊಂದಿಗೆ ನಡೆಯುತ್ತಿರುವ ಅಮೃತಧಾರಾ ಗೋಶಾಲೆಯಲ್ಲಿ ಪ್ರತಿ ವರ್ಷ ಗೋವಿತ್ತ ನಮ್ಮ ಚಿತ್ತ ಎನ್ನುವ ಶೀರ್ಷಿಕೆಯಡಿ ಗೋ ಸಂಧ್ಯಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಗೋ ಪ್ರೇಮಿಗಳೆಲ್ಲ ಒಂದೆಡೆ ಸೇರಿ ಆ ದಿನವನ್ನು ಸಂಪೂರ್ಣ ಗೋವಿನೊಂದಿಗೆ ಕಳೆಯುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ .
ಗೋ ಪ್ರೇಮಿಗಳ ವಾರ್ಷಿಕ ಗೋಸ್ನೇಹ ಕೂಟದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತಧಾರಾ ಗೋಶಾಲೆಯ ಹೊಸಾಡದ ಗೌರವಾಧ್ಯಕ್ಷರಾದ ಶ್ರೀಮತಿ ಭಾರತಿ ಪಾಟೀಲ್ ವಹಿಸಿಕೊಳ್ಳಲಿದ್ದಾರೆ . ಅಂದಿನ ಸಭೆಯ ಮುಖ್ಯ ಅತಿಥಿಗಳಾಗಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿ, ಉದ್ಯಮಿಗಳು ಹಾಗೂ ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ, ಕಾರವಾರದ ಪಹರೆ ವೇದಿಕೆಯ ಅಧ್ಯಕ್ಷರಾದ ಶ್ರೀ ನಾಗರಾಜ್ ನಾಯ್ಕ್ ಬಾಸ್ಗೋಡ್, ಕುಮಟಾ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಸಂತೋಷ್ ಶೆಟ್ಟಿ ಆಗಮಿಸಲಿದ್ದಾರೆ .
ಮಕ್ಕಳಿಗೆ ಗೋವಿನೊಂದಿಗೆ ಒಡನಾಟ.
ಆಕಳ ಕರು ಎಂದರೆ ಮಕ್ಕಳಿಗೆ ಬಲು ಪ್ರೀತಿ ಎಂಬುದನ್ನು ಮನಗಂಡು ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗೋ ಹಾಗೂ ಕರುಗಳೊಡನೆ ಒಡನಾಟ ಬೆಳೆಸುವ ವ್ಯವಸ್ಥೆ ಮಾಡಲಾಗಿದೆ. ಕರುಗಳ ಸ್ವಚ್ಛಂದ ಓಡಾಟದ ಜೊತೆಗೆ ಮಕ್ಕಳಿಗೆ ಆ ಕರುಗಳ ಜೊತೆ ಒಡನಾಡುವ ಅವಕಾಶ ಇಲ್ಲಿದೆ.
ವೇದಿಕೆಯಲ್ಲಿ ನಡೆಯಲಿದೆ ದಾನಿಗಳ ಸ್ಮರಣೆ .
ಕಳೆದ ಒಂದು ದಶಕದಿಂದ ಗೋಶಾಲೆಗೆ ತಮ್ಮ ತನು ಮನ ಧನದಿಂದ ಸಹಕಾರ ನೀಡುತ್ತಿರುವ ಅನೇಕ ದಾನಿಗಳನ್ನು ಸ್ಮರಿಸಿ ಅವರನ್ನು ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಗುತ್ತಿದೆ . ಗೋ ಸಾಕಾಣ ಕೆ ಹಾಗೂ ಗೋಶಾಲೆಯ ಸದಸ್ಯತ್ವವನ್ನು ಪಡೆದುಕೊಳ್ಳುವುದರ ಮೂಲಕ ಗೋಶಾಲೆಯ ಜೊತೆಗಿದ್ದು ಸದಾ ಕಾಲ ಗೋಶಾಲೆಗೆ ಬೆನ್ನೆಲುಬಾಗಿ ಸಹಾಯ ಮಾಡುತ್ತಿರುವ ದಾನಿಗಳನ್ನು ಗುರುತಿಸಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಗುವುದು .
ಗೋಪಾಲಕರಿಗೆ ಗೌರವ
ಹೊಸಾಡದ ಅಮೃತಧಾರಾ ಗೋಶಾಲೆಯಲ್ಲಿ ಹಗಲಿರುಳೆನ್ನದೆ ಕಾರ್ಯಕರ್ತರಾಗಿ ಹಾಗೂ ಗೋ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅನೇಕರನ್ನು ಗುರುತಿಸಿ ಈ ಸಭೆಯಲ್ಲಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಬೆಳಗಿನ ಪ್ರಾರಂಭದಲ್ಲಿ ಗೋಮೂತ್ರವನ್ನು ಹಿಡಿಯುವುದರ ಮೂಲಕ ಪ್ರಾರಂಭವಾಗುವ ಇವರ ಕಾಯಕ ದಿನದ ಇಪ್ಪತ್ನಾಲ್ಕು ಗಂಟೆಯೂ ನಡೆಯುತ್ತಿರುತ್ತದೆ ಹೀಗಾಗಿ ಇವರ ಅನನ್ಯ ಸೇವೆಯನ್ನು ಸ್ಮರಿಸಿ ಗೋ ಸಂಧ್ಯಾ ವೇದಿಕೆಯಲ್ಲಿ ಅವರನ್ನು ಪುರಸ್ಕರಿಸಲಾಗುವುದು .
ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು
ಗೋ ಸಂಧ್ಯಾ ಕಾರ್ಯಕ್ರಮದಲ್ಲಿ ವಿಶೇಷ ಸಂಗೀತ ಸಂಧ್ಯಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ಕುಮಾರ್ ಸುಧೀರ್ ಹೆಗಡೆ ಅವರಿಂದ ಬಾನ್ಸುರಿ ವಾದನ ಹಾಗೂ ಕುಮಾರಿ ರಮ್ಯಾ ಭಟ್ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ . ಪ್ರಗತಿ ವಿದ್ಯಾಲಯ ಮೂರೂರು ಹಾಗೂ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ .
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ಗೋ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಗೋ ಶಾಲೆಯ ಆಶಯಕ್ಕೆ ಬಲನೀಡಬೇಕೆಂದು ಕಾರ್ಯಾಧ್ಯಕ್ಷರಾದ ಮುರಳೀಧರ ಪ್ರಭು ಹಾಗು ವ್ಯವಸ್ಥಾಪನಾ ಮಂಡಳಿಯವರು ಅವರು ವಿನಂತಿಸಿದ್ದಾರೆ.