ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಬದಲಾಗಿ ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯನ್ನು ಕನ್ನಡದ ಮೊದಲ ರಾಜಧಾನಿ ಎಂದು ಬಿಂಬಿಸುವಂತೆ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡರೆಡ್ಡಿ ಹೇಳುತ್ತ ಹೊರಟಿರುವುದನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಖಂಡಿಸಿದ್ದಾರೆ.


ಚಂದ್ರವಳ್ಳಿಯಲ್ಲಿ ದೊರೆತಿರುವ ಮಯೂರವರ್ಮನ ಶಾಸನವಿದ್ದ ಜಾಗವನ್ನು ಭೂಗಳ್ಳರು ಅತಿಕ್ರಮಣ ಮಾಡುತ್ತಿದ್ದಾರೆಂಬ ಭಾವನಾತ್ಮಕ ಸಂಗತಿಯನ್ನು ಮುಂದಿಟ್ಟಿಕೊಂಡು ಇತಿಹಾಸ ಅಕಾಡೆಮಿ ಅಧ್ಯಕ್ಷರು ಕನ್ನಡದ ಮೊದಲ ರಾಜಧಾನಿ ಚಂದ್ರವಳ್ಳಿಯ ಶಾಸನವನ್ನು ರಕ್ಷಿಸಬೇಕು ಎಂದು ಸರಕಾರಕ್ಕೆ ಪತ್ರ ಬರೆದಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇಂಥ ಹುನ್ನಾರ ಇತಿಹಾಸಕ್ಕೆ ಮಾಡುವ ಅಪಚಾರ ಎಂದು ಅರವಿಂದ ಕರ್ಕಿಕೋಡಿ ಹೇಳಿದ್ದಾರೆ.


ಕಳೆದ ಕೆಲ ವರ್ಷಗಳಿಂದ ಚಂದ್ರವಳ್ಳಿಯನ್ನು ಕನ್ನಡದ ಮೊದಲ ರಾಜಧಾನಿ ಅಂತ ಬಿಂಬಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿದೆ. ಇದೀಗ ಇತಿಹಾಸ ಅಕಾಡೆಮಿಯ ಅಧ್ಯಕ್ಷರೇ ಈ ರೀತಿ ದುಸ್ಸಾಹಸಕ್ಕೆ ಇಳಿದಿರುವುದು ವ್ಯವಸ್ಥೆಯ ವ್ಯಂಗ್ಯ ಎಂದು ಅಭಿಪ್ರಾಯಪಟ್ಟ ಅರವಿಂದ ಕರ್ಕಿಕೋಡಿ ಅವರು ಕನ್ನಡದ ಮೊದಲ ರಾಜಧಾನಿ ಬನವಾಸಿ ಎಂಬುದರ ಕುರಿತು ಸೂಕ್ತ ದಾಖಲೆ, ಐತಿಯ್ಯ ಇರುವ ವಾಸ್ತವಾಂಶವನ್ನು ಯಾವ ಕಾರಣಕ್ಕೂ ಯಾರೂ ಬದಲಾಯಿಸಬಾರದು ಅಂತ ಸರಕಾರ ಅಧಿಕೃತ ರಾಜ್ಯಪತ್ರ ಹೊರಡಿಸುವ ಬಗ್ಗೆ ಫೆಬ್ರುವರಿ ಮೊದಲ ವಾರ ನಡೆಯಲಿರುವ ಕದಂಬೋತ್ಸವದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಉತ್ಖನನದಿಂದ ಮತ್ತು ವಿವಿಧ ಗ್ರಂಥಗಳಿಂದ ಲಭ್ಯವಾದ ಎಲ್ಲ ದಾಖಲೆಗಳು ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಮತ್ತು ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯಲ್ಲಿ ದೊರೆತಿವೆ. ಅದನ್ನು ಅಲ್ಲಗಳೆಯುವ ಬೇರೆ ಯಾವ ದಾಖಲೆಗಳೂ ಈವರೆಗೆ ಸಿಕ್ಕಿಲ್ಲ. ಹೀಗಿದ್ದರೂ ಸುಳ್ಳನ್ನು ಹತ್ತು ಬಾರಿ ಹೇಳುವ ಪ್ರಯತ್ನ ಸಾಗಿದೆ. ಚಂದ್ರವಳ್ಳಿಯಲ್ಲಿ ದೊರೆತಿರುವ ಮಯೂರವರ್ಮನ ಶಾಸನ ಕೂಡ ನಮ್ಮ ಹೆಮ್ಮೆ. ಅದನ್ನು ರಕ್ಷಿಸುವ ಕೆಲಸ ಸರಕಾರ ಮುತುವರ್ಜಿಯಿಂದ ಮಾಡಲೇಬೇಕು. ಹಾಗಂತ ಇತಿಹಾಸ ಅಕಾಡೆಮಿಯ ಅಧ್ಯಕ್ಷರು ಇತಿಹಾಸವನ್ನೇ ತಿರುಚಲು ಹೊರಟರೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಪರ ಮನಸ್ಸುಗಳೊಂದಿಗೆ ಉಗ್ರ ಹೋರಾಟ ಮಾಡುತ್ತದೆ ಎಂದು ಅರವಿಂದ ಕರ್ಕಿಕೋಡಿ ಎಚ್ಚರಿಸಿದ್ದಾರೆ.

RELATED ARTICLES  ಸಂಸ್ಕೃತವು ವಿಶ್ವಮಾನ್ಯವಾದ ಭಾಷೆ: ವಿನೋದ ನಾಯಕ


ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬನವಾಸಿಯ ಐತಿಹಾಸಿಕ ಮಹತ್ವ ಕಾಪಾಡಬೇಕೆಂದು ಮನವಿ ಮಾಡುವುದಾಗಿ ಕ.ಸಾ.ಪ. ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಿಳಿದ್ದಾರೆ.

RELATED ARTICLES  ದೇವಾಲಯದಲ್ಲಿ ಅರಿಶಿನ ಕುಂಕುಮ ಕಾರ್ಯಕ್ರಮ