ಬೆಂಗಳೂರು: ಕೇಂದ್ರ ಸರ್ಕಾರ 2019ರ ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿದೆ. ವಿಜ್ಞಾನ, ಸಾಮಾಜ ಸೇವೆ , ಇಂಜಿನಿಯರಿಂಗ್ ಸೇರಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ .
ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ನೀಡುವ ಭಾರತ ರತ್ನ ಹಾಗೂ ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವವರ ಹೆಸರನ್ನು ನಿನ್ನೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎನ್ನಲಾಗಿದೆ.
ನಾಲ್ವರಿಗೆ ಪದ್ಮ ವಿಭೂಷಣ ಪ್ರಶಸ್ತಿ, 14 ಮಂದಿಗೆ ಪದ್ಮ ಭೂಷಣ ಮತ್ತು 94 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಒಟ್ಟು 112 ಮಂದಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.
ಈ ಸಾಲಿನಲ್ಲಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಕರ್ನಾಟಕದಿಂದ ಮಹಾ ಸಾಧಕಿ ಸಾಲು ಮರದ ತಿಮ್ಮಕ್ಕ, ಖ್ಯಾತ ನೃತ್ಯಪಟು ಪ್ರಭುದೇವ, ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್, ಕಲೆ ಮತ್ತು ಪುರಾತತ್ವ ಶಾಸ್ತ್ರವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ಸಾಧಕಿ ಶಾರದಾ ಶ್ರೀನಿವಾಸನ್, ಬೆಂಗಳೂರಿನ ಐಐಎಸ್‌ಸಿಯಲ್ಲಿ ಪರಮಾಣು ಭೌತಶಾಸ್ತ್ರ ಪ್ರೊಫೆಸರ್ ಆಗಿರುವ ರೋಹಿಣಿ ಗೋಡ್ಬೋಳೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡಿಗರು ಎಂದು ವರದಿಯಾಗಿದೆ.