ಬೆಂಗಳೂರು: ಕನ್ನಡದ ಕವಿ, ಕತೆಗಾರ, ಲೇಖಕ ಜಯಂತ್ ಕಾಯ್ಕಿಣಿಯವರು ದಕ್ಷಿಣ ಏಷ್ಯಾ ಡಿಎಸ್ಸಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿದುಬಂದಿದೆ.
ಜಯಂತ್ ಕಾಯ್ಕಿಣಿ ಅವರ ನೋ ಪ್ರೆಸೆಂಟ್ಸ್ ಪ್ಲೀಸ್ (No Presents Please)ಕಥಾ ಸಂಕಲನಕ್ಕೆ ಈ ಪ್ರಶಸ್ತಿ ಸಿಕ್ಕಿದ್ದು, ತೇಜಸ್ವಿನಿ ನಿರಂಜನ್ ಅವರು ಇಂಗ್ಲಿಷ್ಗೆ ಭಾಷಾಂತರ ಮಾಡಿದ್ದರು ಎನ್ನಲಾಗಿದೆ.
ಈ ಪ್ರಶಸ್ತಿಯು 25000 ಯುಎಸ್ ಡಾಲರ್ನ್ನು ಒಳಗೊಂಡಿದೆ. ಪಾಕಿಸ್ತಾನ ಮೂಲದ ಕಮಿಲಾ ಶಮ್ಸೀಸ್ ಅವರ ಹೋಮ್ ಫೈರ್ ಮತ್ತು ನೀಲ್ ಮುಖರ್ಜಿಯವರ ಸ್ಟೇಟ್ ಆಫ್ ಫ್ರೀಡಂಗಳು ಕೂಡ ಈ ಪ್ರಶಸ್ತಿ ಆಯ್ಕೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.
1980-90ರ ದಶಕದಲ್ಲಿ ಮುಂಬೈ ಕುರಿತು ಜಯಂತ್ ಕಾಯ್ಕಿಣಿ ಬರೆದ ಕಥಾ ಸಂಕಲನಗಳು ಕನ್ನಡದಲ್ಲಿ ಪ್ರಕಟವಾಗಿದ್ದವು. ಮುಂಬೈನಲ್ಲಿ ಎರಡು ದಶಕಗಳ ಕಾಲ ವಾಸವಾಗಿದ್ದ ಜಯಂತ್ ಕಾಯ್ಕಿಣಿಯವರು ಅಲ್ಲಿನ ವಿಭಿನ್ನತೆ, ಅದರ ಉಪನಗರಗಳು, ನೆರೆಪ್ರದೇಶಗಳ ಬಗ್ಗೆ ಬರೆದ ಕತೆಗಳ ಗುಚ್ಛವನ್ನು ಇದು ಒಳಗೊಂಡಿದೆ.
ಜಯಂತ್ ಕಾಯ್ಕಿಣಿ ಅವರ ಈ ಸಾಧನೆಗೆ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಸೇರಿದಂತೆ ಹಲವು ಮಂದಿ ಗಣ್ಯರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.