ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಹಸಿರು ಮಾರ್ಗದ ಮೊದಲ ಆರು ಬೋಗಿಯ ಮೆಟ್ರೊ ರೈಲು ಸಂಚಾರಕ್ಕೆ ಇಂದು ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು ಇದಕ್ಕೆಲ್ಲಾ ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು, ನಾನು ಉತ್ತರ ನೀಡಲು ಸೂಕ್ತ ವ್ಯಕ್ತಿಯಲ್ಲ, ನನ್ನ ಕಾರ್ಯವೈಖರಿಯನ್ನು ಅವರು ಒಪ್ಪಲು ಸಿದ್ದವಿಲ್ಲದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನಗೆ ಸಿಎಂ ಕುರ್ಚಿಗೆ ಅಂಟಿಕೊಂಡು ಕೂರುವ ಮೋಹವಿಲ್ಲ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೇ,ಕಾಂಗ್ರೆಸ್ ಶಾಸಕರು ಬಹಿರಂಗ ಸಮಾವೇಶಗಳಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಕಳೆದ ಏಳು ತಿಂಗಳನಿಂದ ಸರ್ಕಾರ ನಿಷ್ಕ್ರೀಯವಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಸಿಟ್ಟಾಗಿರುವ ಸಿಎಂ ಈ ರೀತಿ ಹೇಳಿದ್ದಾರೆ.
ಎಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕರು ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ. ನಾನು ಮತ್ತು ಡಿಸಿಎಂ ಸೇರಿದಂತೆ ಸಂಪುಟದ ಸಚಿವರು ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ನನ್ನ ಕಾರ್ಯವೈಖರಿ ಇಷ್ಟ ಆಗುತ್ತಿಲ್ಲ ಅಂದ್ರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಭಾನುವಾರ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಇದ್ದರೂ ಶಾಸಕರ ಹೇಳಿಕೆಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಇದೇ ರೀತಿ ಕೈ ಶಾಸಕರು ಪರೋಕ್ಷವಾಗಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂದು ವರದಿಯಾಗಿದೆ.