ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಉದ್ಯಮಗಳಾದ ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ಇವುಗಳು 01.05.2016 ರಿಂದಲೇ ಈ.ಎಸ್.ಆಯ್.ಸಿ ಯೋಜನೆಗಳ ಸೇವೆಗಳಿಗೆ ಒಳಪಟ್ಟಿವೆ. ಇತರೆ ವೈದ್ಯಕೀಯ ಸೇವೆಗಳಿಗೆ ಹೋಲಿಸಿದಾಗ ಉದ್ಯೋಗ ಮತ್ತು ಕಾರ್ಮಿಕ ಇಲಾಖೆಯ ಆಧೀನದಲ್ಲಿರುವ ಈ.ಎಸ್.ಆಯ್.ಸಿ ಯೋಜನೆಯು ಖಾಸಗಿ ಆಸ್ಪತ್ರೆಗಳ ಸೇವೆಗಳ ವೆಚ್ಚವನ್ನು ಭರಿಸಲು ಸಾಧ್ಯವಾಗದ ಮಧ್ಯಮ ವರ್ಗದ ಬಡ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಬಹಳ ಸುಲಭ ಹಾಗೂ ತ್ವರಿತವಾಗಿ ವೈದ್ಯಕೀಯ ಹಾಗೂ ಹಣಕಾಸಿನ ಸೇವೆಗಳನ್ನು ನೀಡುವಲ್ಲಿ ತುಂಬಾ ಪ್ರಮುಖವಾದ ಹಾಗೂ ಅತ್ಯತ್ತಮವಾದ ಯೋಜನೆಯಾಗಿದೆ. ಪ್ರಸ್ತುತ ಯೋಜನೆಯು ಕರ್ನಾಟಕದಲ್ಲಿ ಕಡ್ಡಾಯವಾಗಿ ಹಾಗೂ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದರೂ ಈಗಲೂ ಈ ಯೋಜನೆಗೆ ಒಳಪಡುವ ಅನೇಕ ಮಧ್ಯಮ ವರ್ಗದ ಕಾರ್ಮಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಈ ಯೋಜನೆಯ ಸೂಕ್ತ ಸೌಲಭ್ಯ ಹಾಗೂ ಆರ್ಥಿಕ ಸಹಾಯ ಉತ್ತರ ಕನ್ನಡ ಜಿಲ್ಲೆಯಲ್ಲಿ ದೊರಕದಿರುವುದು ಸೋಜಿಗವೇ ಸರಿ. ಇದು ಬಡಕಾರ್ಮಿಕರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹುಬ್ಬಳ್ಳಿಯ ಪ್ರಾದೇಶಿಕ ಕಛೇರಿಯು ಕಾರ್ಮಿಕರಿಂದ ಹಾಗೂ ಕಾರ್ಖಾನೆಗಳ ಮಾಲಿಕರಿಂದ ಈ.ಎಸ್.ಆಯ್.ಸಿ. ವಂತಿಗೆ(ಚಂದಾ ಹಣ)ಯನ್ನು ಪ್ರತಿ ವರ್ಷ ತಪ್ಪದೇ ನಿಯಮಿತವಾಗಿ ಯಾವ ಅವಕಾಶವನ್ನು ತಪ್ಪಿಸದೇ ಸಂಗ್ರಹಿಸುತ್ತಿದೆ. ಆದರೂ ಇಲ್ಲಿಯವರೆಗೂ ಉತ್ತರ ಕನ್ನಡ ಜಿಲ್ಲಾ ಕೇಂದ್ರವಾದ ಕಾರವಾರದಿಂದ 100 ಕಿ.ಮೀ ದೂರವಿರುವ ದಾಂಡೇಲಿಯ ಶಾಖಾ ಕಛೇರಿಯನ್ನು ಹೊರತುಪಡಿಸಿ ಇಡೀ ಜಿಲ್ಲೆಯಲ್ಲಿ ಬೇರೆ ಯಾವುದೇ ಈ.ಎಸ್.ಆಯ್.ಸಿ ಶಾಖೆಗಳು ಕಾರ್ಯನಿರ್ವಹಿಸುತ್ತಿಲ್ಲದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ.
ಭೌಗೋಳಿಕವಾಗಿ ತುಂಬಾ ಹೆಚ್ಚು ವಿಸ್ತೀರ್ಣ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲು ಸೂಕ್ತ ಅವಕಾಶಗಳ ಕೊರತೆ ಇದ್ದರೂ ಅವಶ್ಯವಿರುವ ಕಡೆಗಳಲ್ಲಿ ಈ.ಎಸ್.ಆಯ್.ಸಿ ಶಾಖೆಗಳನ್ನು ತೆರೆಯುವತ್ತ ಇಲಾಖೆಯ ಯಾವುದೇ ಅಧಿಕಾರಿಗಳು ಮುಂದೆ ಬರದಿರುವುದು ಕಾರ್ಮಿಕರಿಗೆ ಬೇಸರವನ್ನುಂಟು ಮಾಡಿದೆ. ಜಿಲ್ಲೆಯಿಂದ ಕೋಟಿ ಕೋಟಿ ಈ.ಎಸ್.ಆಯ್.ಸಿ ವಂತಿಗೆಯನ್ನು ಸಂಗ್ರಹಿಸುವ ಹುಬ್ಬಳ್ಳಿಯ ಪ್ರಾದೇಶಿಕ ಕಛೇರಿ ಸಿಬ್ಬಂದಿಗಳಿಗೆ ಈ ಎಲ್ಲ ಪರಿಸ್ಥಿಗಳ ಅರಿವಿದ್ದರೂ ಅವಶ್ಯವಿರುವಲ್ಲಿ ಹೊಸ ಶಾಖೆಗಳನ್ನು ತೆರೆಯುವ ಬಗ್ಗೆ ಗಮನಹರಿಸಿದಿರುವುದು ನೋವಿನ ವಿಷಯವಾಗಿದೆ. ಇದು ಅವರ ಆದ್ಯ ಕರ್ತವ್ಯವೂ ಹೌದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಈ.ಎಸ್.ಆಯ್.ಸಿ ವಂತಿಗೆ ಪಾವತಿಯಲ್ಲಿ ಕುಮಟಾ ತಾಲೂಕಿನದು ಸಿಂಹ ಪಾಲು. ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಈ ತಾಲೂಕು ಭೌಗೋಳಿಕವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಕೇಂದ್ರ ಸ್ಥಳವೂ ಹೌದು. ಈ ಎಲ್ಲಾ ಅನುಕೂಲಗಳನ್ನು ಹೊಂದಿರುವ ಕುಮಟಾದಲ್ಲಿ ಕೂಡಲೇ ಶಾಖಾ ಕಛೇರಿಯನ್ನು ಆರಂಭಿಸುವುದು ಅತೀ ಅವಶ್ಯಕವಾಗಿದೆ.
ಜಿಲ್ಲೆಯ ಒಂದು ಮೂಲೆಯಲ್ಲಿರುವ ಕಾರವಾರದಲ್ಲಿಯೇ ಈ.ಎಸ್.ಆಯ್.ಸಿ. ಯ ಎಲ್ಲಾ ಕಛೇರಿಗಳನ್ನು ಕೆಲವರ ಹಿತಾಸಕ್ತಿಗಾಗಿ ಸ್ಥಾಪಿಸಿರುವುದು ಕಾರ್ಮಿಕರಿಗೆ ಎಷ್ಟು ಅನುಕೂಲಕರ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಬಡ ಕಾರ್ಮಿಕರು ಸೌಲಭ್ಯಗಳನ್ನು ಪಡಿಯಲು ನೂರಾರು ಕಿ.ಮೀ. ಸಂಚರಿಸಬೇಕಾಗಿರುವುದು ಅನಿವಾರ್ಯವಾಗಿದೆ. ಭೌಗೋಳಿಕವಾಗಿ ಜಿಲ್ಲೆಯ ಕೇಂದ್ರ ಸ್ಥಳದಲ್ಲಿರುವ ಕುಮಟಾದಲ್ಲಿ ಡಿ.ಸಿ.ಬಿ.ಓ ಕಛೇರಿ ತೆರೆಯುವುದು ಸೂಕ್ತವೆಂಬುವುದು ಪ್ರಜ್ಞಾವಂತ ಕಾರ್ಮಿಕರ ಅಭಿಪ್ರಾಯವಾಗಿದೆ.
ಇವೆಲ್ಲವುಗಳ ನಡುವೆ ಕೊನೆಯದಾಗಿ ಕಾರ್ಮಿಕರ ಮನದಲ್ಲಿ ಮೂಡುವ ಪ್ರಶ್ನೆಗಳೆಂದರೆ, ಈ ಬಡ ಕಾರ್ಮಿಕರ ನೋವು ತೊಂದರೆ ಈಗಲಾದರೂ ಬಗೆಹರಿಯುವುದೇ ? ಈ ನಿಟ್ಟನಲ್ಲಿ ಈ.ಎಸ್.ಆಯ್.ಸಿ. ಅಧಿಕಾರಿಗಳು ಜಿಲ್ಲೆಯಲ್ಲಿ ಹೊಸ ಈ.ಎಸ್.ಆಯ್.ಸಿ. ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳುವರೇ ? ಕಾರವಾರಕ್ಕಿಂತ ಭೌಗೋಳಿಕವಾಗಿ ಸೂಕ್ತವಾಗಿರುವ ಕುಮಟಾದಲ್ಲಿ ಡಿ.ಸಿ.ಬಿ.ಓ. ಕಛೇರಿ ಪ್ರಾರಂಭವಾಗುವುದೇ ? ಸರ್ಕಾರ ಇತ್ತ ಗಮನಹರಿಸುವುದೇ ? ಇಲ್ಲವೇ 2019 ರಲ್ಲೂ ಇದೇ ಆನಾನುಕೂಲ ಪರಿಸ್ಥಿತ ಮುಂದುವರೆಯುವುದೇ ? ಕಾದು ನೋಡಬೇಕಾಗಿದೆ. ಇದಕ್ಕೆಲ್ಲಾ ಈ.ಎಸ್.ಆಯ್.ಸಿ. ಅಧಿಕಾರಿಗಳೇ ಉತ್ತರಿಸಬೇಕಾಗಿದೆ.