ನಿನ್ನೆ 29ನೇ ತಾರೀಖು ಬೆಳಿಗ್ಗೆ ರಾಜ್ಯ ಗೋಪರಿವಾರದ ಮಾತೃ ವಿಭಾಗದ ರಾಜ್ಯಾಧ್ಯಕ್ಷೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆಯಾದ ಶ್ರೀಮತಿ ಶೈಲಜಾ ಕೆ.ಟಿ. ಅವರಿಂದ ಗೋಪೂಜೆಯ ಮೂಲಕ ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರಮಠದಲ್ಲಿ ರಾಜ್ಯಮಟ್ಟದ 4ನೇ ಪಂಚಗವ್ಯ ಪ್ರಶಿಕ್ಷಣ ಶಿಬಿರದ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಮಾಣಿ ಮಠದ ಅಧ್ಯಕ್ಷರಾದ ಶ್ರೀ ಹಾರಕೆರೆ ನಾರಾಯಣ ಭಟ್, ಪುತ್ತೂರು ತಾಲೂಕು ಗೋಪರಿವಾರದ ಕಾರ್ಯದರ್ಶಿಗಳಾದ ಶ್ರೀ ಜಯಾನಂದ ಉಪಸ್ಥಿತಿತರಿದ್ದರು.
ಆಯುರ್ವೇದ ವೈದ್ಯರಾದ ಡಾ|| ರವಿಶಂಕರ್ ಪೆರುವಾಜೆ ಅವರು ಗೋವು ಮತ್ತು ಆರೋಗ್ಯದ ಕುರಿರು ಸುದೀರ್ಘವಾದ ಉಪನ್ಯಾಸ ನೀಡಿ, ಶಿಬಿರಾರ್ಥಿಗಳ ಆರೋಗ್ಯ ಸಮಸ್ಯೆಯ ಕುರಿತು ಚರ್ಚೆ ನಡೆಸಿದರು. ಆಯುರ್ವೇದ ಗ್ರಂಥಗಳಲ್ಲಿನ ಪಂಚಗವ್ಯದ ಉಲ್ಲೇಖಗಳ ಆಧಾರದ ಮೇಲೆ ಗವ್ಯೋತ್ಪನ್ನಗಳ ಮಹತ್ವವನ್ನು ವಿವರಿಸಿದರು.
ಪಂಚಗವ್ಯ ಪ್ರಶಿಕ್ಷಣದ ಸಂಚಾಲಕರಾದ ಡಾ|| ರವಿ ಪಾಂಡವಪುರ ಅವರು ಶಿಬಿರಾರ್ಥಿಗಳೊಡನೆ ಸಂವಾದ ನಡೆಸಿ, ದೇಸಿ ಗೋವು ಹಾಗೂ ತಳಿಗಳ ಪರಿಚಯ, ವಿಶೇಷತೆಗಳು, ಗೋರಕ್ಷಣೆಯ ಇತಿಹಾಸ ಇವುಗಳ ಕುರಿತು ಮಾಹಿತಿ ನೀಡಿದರು. ಶಿಬಿರಾರ್ಥಿಗಳ ಗೊಂದಲಗಳನ್ನು ಸವಿವರವಾಗಿ ಪರಿಹರಿಸಿದರು. ಆಗಮಿಸಿದ ಶಿಬಿರಾರ್ಥಿಗಳಿಗೆ ಪಂಚಗವ್ಯ ಗೃತ, ದಂತಮಂಜನ, ಸುಚರಣ, ಹಿಮಗಿರಿ ತೈಲ, ಧೂಪ ಸೇರಿದಂತೆ ಹಲವಾರು ಗವ್ಯೋತ್ಪನ್ನಗಳ ತಯಾರಿಕೆಯನ್ನು ಪ್ರಾಯೋಗಿಕವಾಗಿ ಹೇಳಿಕೊಡಲಾಯಿತು.
ಪಂಚಗವ್ಯ ಪ್ರಶಿಕ್ಷಣ – ಸಮಾರೋಪ ಸಮಾರಂಭ – ಶಾಸಕರು ಭಾಗಿ
ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಪಂಚಗವ್ಯ ಉತ್ಪನ್ನಗಳ ತಯಾರಿ ತರಬೇತಿ ಕಾರ್ಯಾಗಾರವು ನಾಳೆ ಜನವರಿ ೩೧ರಂದು ಸಮಾರೋಪಗೊಳ್ಳಲಿದೆ. ಮಧ್ಯಾಹ್ನ ೩ಗಂಟೆಗೆ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದ್ದು, ೪ಗಂಟೆಗೆ ಸಮಾರೋಪ ಸಭೆ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ಬಂಟ್ವಾಳ ಶಾಸಕರೂ ಗೋಪ್ರೇಮಿಗಳೂ ಆದ ಶ್ರೀ ರಾಜೇಶ್ ನಾಯ್ಕ್ ಅವರು ಆಗಮಿಸಲಿದ್ದು, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಮಸ್ತ ಗೋಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಭಾರತೀಯ ಗೋಪರಿವಾರ ಕೋರಿದೆ.