ಹೊನ್ನಾವರ:ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಹೆಚ್ಚಿರುವ ಹವ್ಯಕ ಸಮುದಾಯ ವಿಶಿಷ್ಟ, ಪ್ರಾಚೀನ ಸಂಸ್ಕೃತಿಯ ಪ್ರತೀಕ. ಇವರ ಆಚಾರ- ವಿಚಾರ, ಭಾಷೆ, ಆಹಾರ ಪದ್ಧತಿ ಇಂದಿಗೂ ತನ್ನದೆಯಾದ ವೈಶಿಷ್ಟತೆ ಸಾರುತ್ತಿದೆ.
ಹೊಲಗದ್ದೆಗಳಲ್ಲಿ ಬದುಕು ಅರಸುತ್ತ ಸಾಗಿದ್ದ ಈ ಸಮುದಾಯ ಆಧುನಿಕತೆ ಬೆಳವಣಿಗೆಯ ಸಾಂಪ್ರದಾಯಿಕ ವ್ಯವಸಾಯದಲ್ಲಿ ನೆಲೆಗಾಣಲಿಲ್ಲ. ವಿದ್ಯಾಭ್ಯಾಸ ಮುಗಿಸಿಕೊಂಡು ವಿವಿಧೆಡೆ ಉದ್ಯೋಗ ಅರಸಿ ಊರು ಬಿಟ್ಟರು ಈ ಜನ. ನಾಡಿನ ವಿವಿಧ ಭಾಗಗಳಲ್ಲಿ ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ತೊಡಗಿ ಹೊಸ ಜೀವನ, ಸಂಸ್ಕೃತಿಗಳ ಜತೆ ಹೊಂದಾಣಿಕೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.ಇಂತಹ ಹವ್ಯಕರ ಏಳ್ಗೆಗಾಗಿ ದುಡಿಯುತ್ತಿರುವ ಸಂಸ್ಥೆ ಹೊನ್ನಾವರದ ಹವ್ಯಕ ವಿಕಾಸ ವೇದಿಕೆ . ಇದರ ನೇತ್ರತ್ವದಲ್ಲಿ ಹವ್ಯಕ ಹಬ್ಬ ಕಾರ್ಯಕ್ರಮ ಹೊನ್ನಾವರದ ಹವ್ಯಕ ಸಭಾಭವನದಲ್ಲಿ ನಡೆಯಲಿದೆ.
ಈ ಮಧ್ಯೆ ತಮ್ಮ ಪರಂಪರೆ, ಹಳೆಗನ್ನಡ ಹೋಲುವ ವಿಶಿಷ್ಟ ಭಾಷೆ, ಆಹಾರ ಪದ್ಧತಿ, ಸಂಸ್ಕೃತಿ ಮರೆಯದೇ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಸಮಾಜದವರೆಲ್ಲ ಪರಂಪರೆ ನೆನಪಿಸುವ ಕಾರ್ಯಕ್ರಮಗಳು ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ ಅವರ ನೇತ್ರತ್ವದಲ್ಲಿ ತಯಾರಿ ಭರ್ಜರಿಯಾಗಿ ಸಾಗಿದೆ.