ಹೆಗಡೆಯಲ್ಲೊಂದು ವಿನೂತನ ಕಾರ್ಯಕ್ರಮ. ತಾಯಿಯ ನೆನಪನ್ನು ಶಾಶ್ವತವಾಗಿಸಲು ತಾಯಿಯ ವರ್ಷಾಂತಿಕದ ದಿನದಂದು ” ಆಯಿ ಪುಸ್ತಕ ಮನೆ ” ಪ್ರಾರಂಭಿಸಿದ ಮಗ. ದೀಪ ಬೆಳಗಿ ಉದ್ಘಾಟಿಸಿದವರು ಪುರೋಹಿತರು.
ಇಂತದ್ದೊಂದು ಕಾರ್ಯಕ್ರಮ ನಡೆದದ್ದು ಕುಮಟಾ ತಾಲೂಕಿನ ಹೆಗಡೆಯಲ್ಲಿ. ಶಿಕ್ಷಕಿಯಾಗಿ 32 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಅಪಾರ ಶಿಷ್ಯ ಬಳಗಕ್ಕೆ ಅಕ್ಷರ ಜ್ಞಾನ ನೀಡಿ ನಿವೃತ್ತರಾಗಿ 77ವರ್ಷಗಳ ತುಂಬು ಜೀವನವನ್ನು ನಡೆಸಿ ಮರಣ ಹೊಂದಿದ ಶ್ರೀಮತಿ ಸೀತಾಬಾಯಿ ಕೃಷ್ಣ ಭಟ್ಟ ಸೂರಿಯವರ ವರ್ಷಾಂತಿಕ ಆಚರಣೆಯ ದಿನದಂದು ಅವರ ಪುತ್ರ ಶಿಕ್ಷಕ ರವೀಂದ್ರ ಭಟ್ಟ ಸೂರಿ ಪುಸ್ತಕವನ್ನು ಪ್ರೀತಿಸುತ್ತಿದ್ದ ತಾಯಿಯ ನೆನಪಿನಲ್ಲಿ “ಆಯಿ ಪುಸ್ತಕ ಮನೆ” ರೂಪಿಸಿ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
” ಸಾವಿರದ ಪುಸ್ತಕಗಳು ಒಂದೇ ಸೂರಿನಡಿಯಲ್ಲಿ” ಎಂಬ ಘೋಷವಾಕ್ಯದಡಿಯಲ್ಲಿ ರೂಪಿಸಲಾದ “ಆಯಿ ಪುಸ್ತಕ ಮನೆ ” ಯ ಉದ್ಘಾಟನೆಯನ್ನು ವೇದ ಬ್ರಹ್ಮ ಶ್ರೀ ಸುಬ್ರಹ್ಮಣ್ಯ ಶರ್ಮಾ ನೆರವೇರಿಸಿದರು. ನಂತರ ಮಾತನಾಡಿದ ಅವರು ತಂದೆ ತಾಯಿಯರು ಹೊರೆಯೆಂದು ಭಾವಿಸುವ ಮಕ್ಕಳಿರುವ ಇಂದಿನ ದಿನದಲ್ಲಿ ತಮ್ಮ ತಾಯಿಯ ನೆನಪಿನಲ್ಲಿ ಪುಸ್ತಕ ಮನೆ ರೂಪಿಸಿದ ರವೀಂದ್ರ ಭಟ್ಟ ಸೂರಿಯವರ ಕಾರ್ಯ ಶ್ಲಾಘನೀಯ, ಬದುಕಿರುವಾಗ ನಿರಂತರ ಸೇವೆ ಮಾಡಿ ಮರಣಾ ನಂತರ ಕೂಡಾ ತಾಯಿಯ ನೆನಪನ್ನು ಈ ರೀತಿಯಲ್ಲಿ ಶಾಶ್ವತವಾಗಿಸಿದ ಅವರು ನಿಜಕ್ಕೂ ಮಾದರಿಯಾಗಿದ್ದಾರೆ, ಸಾರ್ವಜನಿಕರು ಇದರ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲಿ ಎಂದರು.
ವೇದ ಸಂಸ್ಕೃತ ಅಕಾಡೆಮಿಯ ನಿರ್ದೇಶಕ ಡಾ.ಗೋಪಾಲಕೃಷ್ಣ ಹೆಗಡೆ, ವೇದಮೂರ್ತಿ ಕೃಷ್ಣ ಭಟ್ಟ ಸೂರಿ, ನಿವೃತ್ತ ಸಹಾಯಕ ನಿರ್ದೇಶಕ ನಾರಾಯಣ ಭಟ್ಟ, ಭಾರತಿ ಭಟ್ಟ, ಗೀತಾ ಹೆಗಡೆ, ಡಿ.ಜಿ.ಭಟ್ಟ, ಗಣಪತಿ ಭಟ್ಟ ಸೂರಿ, ನಿರ್ಮಲಾ ಭಟ್ಟ,ಗಣೇಶ ಜೋಶಿ, ಶಿಕ್ಷಕರ ಸಂಘದ ಖಜಾಂಚಿ ಈಶ್ವರ ಭಟ್ಟ, ಮುಂತಾದವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಅನಿಲ ಭಂಡಾರಿಯವರು ಪುಸ್ತಕ ಮನೆಗೆ ನೂರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.