ಕುಮಟಾ: ನಾಡಿನ ಹಿರಿಯ ಕಥೆಗಾರ, ಕವಿ, ಯಕ್ಷಗಾನ ಕಲಾವಿದ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ಕುಮಟಾ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಎಂದು ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ. ಶ್ರೀಧರ ಗೌಡ ಉಪ್ಪಿನಗಣಪತಿ ಅವರು ತಿಳಿದ್ದಾರೆ.


ತಾಲೂಕಿನ ಕತಗಾಲದಲ್ಲಿ ಫೆ. 16, 17 ರಂದು ನಡೆಯಲಿರುವ ಕುಮಟಾ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ನಾಲ್ಕೈದು ಹಿರಿಯ ಸಾಹಿತಿಗಳ ಹೆಸರು ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಅನಂತರ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರೊಂದಿಗೆ ಚರ್ಚಿಸಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಡಾ. ಶ್ರೀಧರ ಗೌಡ ಹೇಳಿದ್ದಾರೆ.


ಈಗಾಗಲೇ ಸಮ್ಮೇಳನದ ಸಿದ್ಧತೆಗೆ ಕತಗಾಲದ ಅಕ್ಷರ ಕಲಾ ವೇದಿಕೆಯ ಸದಸ್ಯರು ಮತ್ತು ಊರ ನಾಗರಿಕರು
ತುಂಬ ಸಡಗರದಿಂದ ಕಾರ್ಯೋನ್ಮುಖರಾಗಿದ್ದಾರೆ. ಕತಗಾಲ ಊರು ತನ್ನ ಕನ್ನಡಾಭಿಮಾನವನ್ನು ಸಮೇಳನದ ಸಂಘಟನೆಗೆ ಸಹಕರಿಸುವುದರ ಮೂಲಕ ತೋರಿಸುತ್ತಿದ್ದಾರೆ.

ಸಮ್ಮೇಳನಾಧ್ಯಕ್ಷರ ಪರಿಚಯ :

ಕಥೆಗಾರ, ಕಾದಂಬರಿಕಾರ, ಕವಿ, ನಾಟಕಕಾರ, ಯಕ್ಷಗಾನ ಕಲಾವಿದ, ಚಿತ್ರನಟ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ಎಪ್ಪತ್ತರ ದಶಕದಲ್ಲಿಯೇ ಸಾಹಿತ್ಯದ ಸೆಳೆತ ಅಂಟಿಸಿಕೊಂಡು ಅನೇಕ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.


ಗೋಕರ್ಣದಲ್ಲಿ 1954 ಎಪ್ರಿಲ್ 1 ರಂದು ಜನಿಸಿದ ಮಹಾಬಲಮೂರ್ತಿ ಕೊಡ್ಲೆಕೆರೆಯವರು ಕ.ವಿ.ವಿ.ಯಲ್ಲಿ ಎಂ.ಎ. ಪದವಿ (ರಾಜ್ಯಶಾಸ್ತ್ರ) ಪಡೆದು, ಕರ್ನಾಟಕ ಬ್ಯಾಂಕ್‍ನಲ್ಲಿ ವ್ಯವಸ್ಥಾಪಕರಾಗಿ ನಿವೃತ್ತಿ ಪಡೆದರು. ಇದೀಗ ವಾಣಿಜ್ಯ ಮತ್ತು ವಿದೇಶಿ ವಿನಿಮಯದ ವ್ಯವಹಾರಗಳಲ್ಲಿ ಸಲಹೆಗಾರರಾಗಿದ್ದಾರೆ.


ಕೊಡ್ಲೆಕೆರೆಯವರ ಸಾಹಿತ್ಯ ಕೃಷಿ : ಮತ್ತೊಂದು ಮೌನ, ಯಕ್ಷಸೃಷ್ಟಿ, ಅವನ ಜಗತ್ತಿನ ಹಗಲು, ನೆರಳು, ಇತಿಹಾಸದ ನಂತರ, ನೆರಳು ಮತ್ತು ಇತರ ಆಯ್ದ ಕಥೆಗಳು ಈ 5 ಕಥಾ ಸಂಕಲಗಳೊಂದಿಗೆ ಚಂದ್ರಾಸ್ತಮಾನ, ಸದ್ದು, ಸ್ತ್ರೀಶಾಪ, ಬೀಜಗರ್ಭ 4 ಕಾದಂಬರಿಗಳು ಗಮನಸೆಳೆದಿವೆ. ಕಾವ್ಯಕ್ಷೇತ್ರದಲ್ಲೂ ತನ್ನ ಗಟ್ಟಿತನ ಇಟ್ಟುಕೊಂಡ ಕೊಡ್ಲೆಕೆರೆಯವರು ಮಾತು ಮತ್ತು ಪರಸ್ಪರ, ಜೀವ, ಮತ್ತೆ ಏಳಲು ಪೂರ್ವದಿಂದ, ಒಂದು ಗಿಳಿ ಈ 4 ಕವನ ಸಂಕಲನಗಳುನ್ನು ಕೊಟ್ಟಿದ್ದಾರೆ. ಇನ್ನು ನಾಟಕಗಳಲ್ಲಿ ಕೊಡ್ಲೆಕೆರೆಯವರ ಕೊಡುಗೆಗಳ ಬಗ್ಗೆ ನೋಡುವುದಾದರೆ ಅದಲು ಬದಲು, ಹಿಡಿಯದೇ ಉಳಿದ ಹಾದಿ ಗಮನಾರ್ಹ ನಾಟಕಗಳಾಗಿ ನಿಲ್ಲುತ್ತವೆ. ಜೊತೆಗೆ ಮಾಸ್ತಿಯವರ ಪ್ರಸಿದ್ಧ ಕಥೆ ‘ವೆಂಕಟಗನ ಹೆಂಡತಿ’ ಯನ್ನೂ ನಾಟಕಕ್ಕೆ ಅಳವಡಿಸಿದ ಕೊಡ್ಲೆಕೆರೆಯವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು 20 ಕೃತಿಗಳನ್ನು ನೀಡಿದ್ದಾರೆ.

RELATED ARTICLES  ಸರಕಾರ ನೀಡಿರುವ ಉಚಿತ ಬೈಸಿಕಲ್ ಯೋಜನೆಯ ಪ್ರಯೋಜನ ಪಡೆಯಿರಿ: ಹೊನ್ನಪ್ಪ ನಾಯ್ಕ.


ರಂಗಸ್ಥಳದಲ್ಲಿ ಗೆಜ್ಜೆ ಸಪ್ಪಳ : ತಂದೆ ಗಜಾನನ ಕೊಡ್ಲೆಕೆರೆಯವರು ಈ ಬಾಗದ ಪ್ರಸಿದ್ಧ ಯಕ್ಷಗಾನ ವೇಷಧಾರಿ ಮತ್ತು ಅರ್ಥಧಾರಿಯಾಗಿದ್ದರಿಂದ ಮಹಾಬಲಮೂರ್ತಿಯವರಿಗೂ ಯಕ್ಷಗಾನ ಎಂಬುದು ಚುಂಬಕ ಶಕ್ತಿಯಾಯಿತು. ಯಕ್ಷಗಾನ ತಂಡದ ಸದಸ್ಯರಾಗಿ ಅಮೇರಿಕದ ಅಕ್ಕ ಸಮ್ಮೇಳಲನದಲ್ಲಿ ಮತ್ತು ಇಂಗ್ಲೆಂಡಿನ ಮಿಲೇನಿಯಂ ಕನ್ನಡ ಹಬ್ಬಗಳಿಗಾಗಿ ಹಲವಾರು ಸ್ಥಳಗಳಿಗಾಗಿ ಭೀಮ, ಸುಭದ್ರ, ಚಾಣೂರ ಮುಂತಾದ ಪಾತ್ರಧಾರಿಗಳಾಗಿ ಯಕ್ಷಗಾನ ಪ್ರದರ್ಶನದಲ್ಲೂ ಬಾಗಿಯಾಗಿದ್ದಾರೆ.


ಚಂದನ ವಾಹಿನಿಗಾಗಿ ಸಾಂಸ್ಕøತಿಕ ಹಾಗೂ ಸಾಹಿತ್ಯ ರಂಗದ ಅನೇಕ ಹಿರಿಯರ ಜೊತೆ ಮತ್ತು ಯಕ್ಷಗಾನ ಲೋಕದಲ್ಲಿ ಪ್ರಸಿದ್ಧರಾದ 50 ನಟರನ್ನು ಸಂದರ್ಶನ ನಡೆಸಿಕೊಟ್ಟಿದ್ದಾರೆ. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಗಾಗಿ ಕರ್ನಾಟಕ ಬಡಗು ಮತ್ತು ತೆಂಕು ಯಕ್ಷಗಾನ ವೇಷಗಳ ಕುರಿತಾದ ಸಾಕ್ಷಚಿತ್ರ ರಚನೆ ಮತ್ತು ನಿರ್ಮಾಣ ಮಾಡಿದ್ದಾರೆ.


ಇನ್ನಿತರ ಸಾಧನೆ: ಕಿರುತೆರೆ ಹಾಗೂ ಚಲನಚಿತ್ರಗಳಲ್ಲೂ ಬಾಗಿಯಾಗಿದ್ದು ಕವಿತಾ ಲಂಕೇಶ್, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರ ನಿರ್ದೇಶನದಲ್ಲಿ ನಟನೆ, ಚಲನಚಿತ್ರಗೀತೆಗಳ ರಚನೆಯಲ್ಲೂ ತಮ್ಮ ಗಟ್ಟಿತನ ತೋರಿಸಿದ್ದಾರೆ. ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಪುರಸ್ಕಾರ ಪಡೆದ ಕಥೆ ‘ವೈಶಂಪಾಯನ ತೀರ’ ಕಿರುತೆರೆಯಲ್ಲಿ ‘ಕಾಲದ ಕಡಲು’ ಎಂಬ ಹೆಸರಿನಿಂದ ಮೆಗಾ ಧಾರಾವಾಹಿಯಾಗಿ ಪ್ರಸಾರವಾಗಿದೆಯಷ್ಟೇ ಅಲ್ಲ, ಇದೇ ಕಥೆ ಪ್ರೊ.ಸಿ.ಜಿ.ಕೃಷ್ಣಸ್ವಾಮಿಯವರ ನಿರ್ದೇಶನದಲ್ಲಿ ನಾಟಕವಾಗಿ ಬೆಂಗಳೂರು, ದೆಹಲಿ, ಚಂಡೀಘಡ, ಮುಂಬೈ, ಫರೀದಾಬಾದ್, ಮಂಗಳೂರು, ಸಿಮ್ಲಾ ಮುಂತಾದೆಡೆಯಲ್ಲಿ ಐವತ್ತಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.
ಬಾನುಲಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಕಥೆ, ಕವಿತೆ, ಚಿಂತನೆ,ಮ ರೇಡಿಯೋ ರೂಪಕಗಳ ಪ್ರಸ್ತುತಿಯ ಜೊತೆಗೆ ರಾಷ್ಟ್ರೀಯ ಮಟ್ಟದ ಕವಿಗೋಷ್ಠಿಗಳಲ್ಲೂ ಬಾಗಿಯಾದ ಮಹಾಬಲಮೂರ್ತಿಯವರು ನ್ಯಾಶನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿಗಳು ಆಯೋಜಿಸಿದ ‘ಮೀಟ್ ಅಥರ್ಸ್’, ದೀಸ್ ಆರ್ ಅವರ್ ರೈಟರ್ಸ್’ ಕಾಯಕ್ರಮಗಳಲ್ಲದೇ ಪುದುಚೇರಿ, ಪಂಜಿಮ್ ಮುಂತಾದೆಡೆಗಳಲ್ಲಿ ನಡೆದ ಕವಿಗೋಷ್ಠಿಗಳಲ್ಲಿ ಮತ್ತು ಇತರ ಸಾಹಿತ್ಯಕ ವೇದಿಕೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

RELATED ARTICLES  ಇಂದು ಉತ್ತರ ಕನ್ನಡದಲ್ಲಿ ಮೂರು ಜನರಿಗೆ ಕೊರೋನಾ ಪಾಸಿಟೀವ್..! ಅಂಕೋಲಾಕ್ಕೂ ಕಾಲಿಟ್ಟ ಕೊರೋನಾ


ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳ ಹಾಗೂ ಇಂಗ್ಲಿಷ್ ಪತ್ರಿಕೆಗಳ ಅಂಕಣಕಾರರಾದ ಕೊಡ್ಲೆಕೆರೆಯವರು ಕೆ.ಎಸ್.ನರಸಿಂಹಸ್ವಾಮಿಯವರ ‘ಶ್ರೀ ಕೆ.ಎಸ್.ನ.’ ಮತ್ತು ಗೋಪಾಲಕೃಷ್ಣ ಅಡಿಗರ ‘ಅಡಿಗ-70’ ಅಭಿನಂದನ ಗ್ರಂಥದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ಸಣ್ಣ ಕಥಾ ಲೋಕದಲ್ಲಿಯೇ ಅಪರೂಪದ ಪತ್ರಿಕೆ ಎನಿಸಿರುವ ‘ಒಂದಲ್ಲ ಒಂದೂರಿನಲ್ಲಿ’ ಎಂಬ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದರು..


ಪ್ರಶಸ್ತಿ ಪುರಸ್ಕಾರ: ಕವಿ ಮುದ್ದಣ್ಣ ಕಾವ್ಯ ಪುರಸ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಗೌರವಗಳಿಂದ ಅವರು ಪುರಸ್ಕøತರಾಗಿದ್ದಾರೆ.