ಹೊನ್ನಾವರ : ಕೆರೆಮನೆ ಶಂಭು ಹೆಗಡೆ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಎಲ್ಲಾ ಗಣ್ಯರು ಮೆರವಣಿಗೆಯಲ್ಲಿ ಬಂದು ಪ್ರದರ್ಶನಾಂಗಣವನ್ನು ಇಂದಿನ ಉತ್ಸವದ ಅಧ್ಯಕ್ಷರಾದ ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು ಇವರಿಂದ ಸಂಪನ್ನಗೊಳಿಸಲಾಯಿತು. ಶ್ರೀ ಶಿವಾನಂದ ಹೆಗಡೆ ಮತ್ತು ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಎಲ್ಲಾ ಅತಿಥಿಗಳನ್ನು ವೇದಿಕೆಗೆ ಆಮಂತ್ರಿಸಿದರು. ಗಣಪತಿ ಸ್ತುತಿಯ ಮೂಲಕ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು. ನಮ್ಮನ್ನ ಅಗಲಿದ ಶ್ರೇಷ್ಠ ಕಲಾವಿದರು ಮತ್ತು ಕಲಾಪೋಷಕರನ್ನ ನೆನೆಸಿ ಅಗಲಿದ ಮಹಾ ಚೇತನಗಳಿಗೆ ಒಂದು ನಿಮಿಷದ ಮೌನಾಚರಣೆ ನಡೆಸಲಾಯಿತು.
ತದನಂತರ ಶ್ರೀ ಲಕ್ಷ್ಮೀನಾರಾಯಣ ಕಾಶಿ ಅವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು ಮತ್ತು ನಾಟ್ಯೋತ್ಸವದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಕೆರೆಮನೆ ಶಿವರಾಮ ಹೆಗಡೆಯವರನ್ನ ನೆನೆದ ಅವರು ಶ್ರೀ ಕೆರೆಮನೆ ಶಂಭು ಹೆಗಡೆಯವರ ಕನಸು ಈ ನಾಟ್ಯೋತ್ಸವ ಎಂದರು. ನಾಟ್ಯೋತ್ಸವ ಹೊಸ ಬಗೆಯ ಚಿಂತನೆಯನ್ನ ನೀಡುವ ವೇದಿಕೆ ಇದಾಗಿದೆ. ಇನ್ನೂ ಹೊಸ ಆಲೋಚನೆಗಳು ನಾಟ್ಯೋತ್ಸವಕ್ಕೆ ಅತ್ಯಗತ್ಯ. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದು ವಿನಂತಿಸಿಕೊಂಡರು.
ನಾಟ್ಯೋತ್ಸವದ ಉದ್ಘಾಟಕರಾಗಿ ಆಗಮಿಸಿದ ಶ್ರೀ ಟಿ. ಎಸ್. ನಾಗಾಭರಣರವರು ದೀಪ ಬೆಳಗುವ ಮೂಲಕ ಉದ್ಯುಕ್ತವಾಗಿ ನಾಟ್ಯೋತ್ಸವಕ್ಕೆ ಚಾಲನೆ ನೀಡಿದರು. ಅದಲ್ಲದೆ ಶ್ರೀ ಕೆರೆಮನೆ ಶಂಭು ಹೆಗಡೆಯವರ ಫೋಟೊವನ್ನು ಅನಾವರಣಗೊಳಿಸಿದರು.
ನಂತರದಲ್ಲಿ ಮಾತನಾಡಿದ ಅವರು ಕೆರೆಮನೆ ಶಂಭು ಹೆಗಡೆಯವರು ಪಾತ್ರಗಳಿಗೆ ಜೀವ ತುಂಬಿದವರು. ಅವರ ಕೆಲ ಪಾತ್ರಗಳಿಗೆ ಇನ್ನೊಂದು ಮುಖ ಇದೆ ತೋರಿಸಿದವರು. ನಾನು ಚಿಕ್ಕವನಾಗಿದ್ದಾಗ ಯಕ್ಷಗಾನದ ಪರದೆ ಎಳೆಯುವ ಕೆಲಸ ಮಾಡಿದವನು. ನನ್ನೊಳಗೆ ನಾನರಿಯದೇ ಮದ್ದಳೆ ಮತ್ತು ನೃತ್ಯ ಕುಣಿದಾಡತೊಡಗಿತು. ಇಂದು ನಾನು ಚಲನಚಿತ್ರ ರಂಗದಲ್ಲಿ ಇಂದು ಏನಾದರೂ ಗುರ್ತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಯಕ್ಷಗಾನ ಪ್ರಭಾವವೇ ಕಾರಣ ಎಂದರು.
ಯಕ್ಷಗಾನ ಮಾತ್ರವಲ್ಲದೇ ಎಲ್ಲಾ ಪ್ರಕಾರ ಕಲೆಗಳಿಗೆ ವೇದಿಕೆಗೆ ಅವಕಾಶ ನೀಡಿದ ಶ್ರೀ ಶಿವಾನಂದ ಹೆಗಡೆಯವರಿಗೆ ನಾನು ಸ್ಮರಿಸಲೇ ಬೇಕು. ಕಲೆಯಲ್ಲಿ ಹಣೆಪಟ್ಟಿ ಕಟ್ಟಲಾಗುತ್ತದೆ. ಇದು ಸರಿಯಲ್ಲ. ಆನಪದ ಕಲಾ ಮಾಧ್ಯಮ ಮಾತ್ರವೇ ಮನುಷ್ಯರನ್ನ ಮನುಷ್ಯರಂತೆ ಕಾಣುತ್ತದೆ ಎಂದರು. ಆದರೆ ಈಗ ಇದರಲ್ಲೂ ಎಡ ಬಲ ಶುರುವಾಗುತ್ತಿದೆ. ಕಲೆಯಲ್ಲಿ ಯಾವುದೇ ವಾದಗಳಿಲ್ಲ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಲಾ ಮಾಧ್ಯಮವನ್ನು ದೂರವಿಟ್ಟು ವ್ಯವಸ್ಥೆಯಲ್ಲಿ ಒಂದು ಕಂದಕವನ್ನು ನಿರ್ಮಿಸುತ್ತಿದ್ದೇವೆ. ಮನುಷ್ಯ ಸಂಭಾವಿತನಾಗಿ ಮಾಧ್ಯಮವನ್ನು ರೂಢಿಸಿಕೊಳ್ಳಬೇಕಾಗಿದೆ. ಯಂತ್ರಗಳಿಂದ ಹೊರತಾಗಿ ಮನುಷ್ಯ ಪ್ರಯತ್ನಗಳತ್ತ ನಮ್ಮನ್ನ ನಾವು ತೊಡಗಿಸಿಕೊಳ್ಳಬೇಕಾಗಿದೆ. ನಮ್ಮ ಭಾಷೆ ಮತ್ತು ನಮ್ಮ ಕಲೆ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಭಾಷಣವನ್ನು ಶ್ರೀ ಲಕ್ಷ್ಮೀನಾರಾಯಣ ಕಾಶಿ ಅವರು ನೆರವೇರಿಸಿದರು. ನೀನಾಸಂ ಎಂದರೆ ಸುಬ್ಬಣ್ಣ ಅವರು ನೆನಪಾಗುತ್ತಾರೆ. ಸುಬ್ಬಣ್ಣನವರು ಕೇವಲ ಹವ್ಯಾಸವಾಗಿದ್ದ ಸಂಸ್ಥೆಯನ್ನ ಹೊಸದಾಗಿ ಚಿಂತಿಸಿ, ಆಲೋಚಿಸಿ ಶಿವರಾಮ ಕಾರಂತ ರಂಗಮಂದಿರ ಸ್ಥಾಪಿಸಿದರು. ಸುಬ್ಬಣ್ಣರು ಕಟ್ಟಿಕೊಂಡ ಕನಸು ನನಸಾಯಿತು. ರಂಗಭೂಮಿಯಲ್ಲಿ ಹೊಸ ಆಯಾಮವನ್ನ ಕಟ್ಟಿಕೊಂಡರು. ಚಲನಚಿತ್ರ ಶಿಬಿರಗಳನ್ನ ಅರಂಭಿಸಲಾಯಿತು. ಚಲನಚಿತ್ರ ಅಭಿರುಚಿಯ ಬಗ್ಗೆ ಪುಸ್ತಕವನ್ನ ಹೊರತಂದ ಸಂಸ್ಥೆ ನೀನಾಸಂ ಆಗಿದೆ. ರಂಗಕ್ಕೆ ಬೇಕಾದ ಅಧ್ಯಯನಕ್ಕೋಸ್ಕರ ಬಿ. ವಿ. ಕಾರಂತ ಗ್ರಂಥಾಲಯವು ಆರಂಭವಾಯಿತು. ನೀನಾಸಂ ನಂತಹ ಸಂಸ್ಥೆಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ನಾವು ರಂಗಭೂಮಿಯನ್ನೇ ಸನ್ಮಾನಿಸುತ್ತಿದ್ದೇವೆ ಎನ್ನಬಹುದಾಗಿದೆ. ನೀನಾಸಂ ಕಲಾತಂಡಕ್ಕೆ ಕೆರೆಮನೆ ಶಿವರಾಮ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಶ್ರೀ ಎ. ಆರ್. ಶ್ರೀಧರ ಭಟ್ತರು ಮಾತನಾಡಿ ನೀನಾಸಂಗೆ ನೀಡಿರುವ ಈ ಪ್ರಶತಿಯನ್ನ ಪಡೆಯಲು ನನಗೆ ಅತ್ಯಂತ ಹೆಮ್ಮೆಯಾಗುತ್ತಿದೆ. ಕೆರೆಮನೆ ಮೇಳ ಮತ್ತು ನೀನಾಸಂ ಒಂದು ಸಹೋದರ ಸಂಸ್ಥೆಯಾಗಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ತಾನು ಯಾವ ವಿಷಯದಲ್ಲಿ ಕೆಲಸ ಮಾಡಿದ್ದೇನೋ ಅದೇ ಕ್ಷೇತ್ರಕ್ಕೆ ಪ್ರಶಸ್ತಿಯನ್ನು ನೀಡಿದೆ. ಎಲ್ಲಾ ಕ್ಷೇತ್ರದ ಶ್ರೇಷ್ಠ ಕಲಾವಿದರಿಗೆ ನೀವು ಈ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಅನಿವಾರ್ಯ ಕಾರಣದಿಂದ ನೀನಾಸಂ ನಾಟಕ ನಡೆಯದಿರುವುದಕ್ಕೆ ನಿಮ್ಮೆಲ್ಲರಲ್ಲಿ ಕ್ಷಮೆ ಕೋರುತ್ತೇನೆ ಎಂದರು.
ಶ್ರೀ ಜೋಗಿಯವರಿಂದ ರಾಮನಿರ್ಯಾಣ ಡಿ.ವಿ.ಡಿ ಬಿಡುಗಡೆಯಾಯಿತು. ಡಿ.ವಿ.ಡಿ ಬಿಡುಗಡೆ ಮಾಡಿ ಮಾತನಾಡಿದ ಶ್ರೀ ಜೋಗಿಯವರು ಶಿವಾನಮ್ಡ ಹೆಗಡೆಯವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಈ ಪುಟ್ಟ ಜಗತ್ತಿನಲ್ಲಿ ದೊಡ್ಡ ಜಗತ್ತು ತುಂಬಿದೆ ಎಂದರು. ರಾಷ್ಟ್ರೀಯ ಪ್ರಶಸ್ತಿ ಕಲೆಗೆ ನೀಡುವ ಗೌರವ ಎಂದರು.
ನಾನು ಒಂದೇ ಬಾರಿ ಶಂಭು ಹೆಗಡೆಯವರನ್ನ ಭೇಟೀಯಾಗಿದ್ದೇನೆ ಅವರು ವೈಯಕ್ತಿಕ ಪ್ರತಿಭೆಯನ್ನು ಹೇಗೆ ಉಪಯೋಗಿಸಬೇಕು ಎಂಬ ಪಾಠವನ್ನು ಅವರು ಕಲಿಸಿಕೊಟ್ಟಿದ್ದರು ಎಂದರು.
ನಾನೂ ಕೂಡ ಯಕ್ಷಗಾನದ ಅರ್ಥದಾರಿಯಾಗಿ ಕೆಲಸ ಮಾಡಿದ್ದೇನೆ. ಇಲ್ಲಿನ ಪರಿಸರ ನನಗೆ ಅತ್ಯಂತ ಸಂತಸ ತಂದಿದೆ ಕೆರೆಮನೆ ಶಂಭು ಹೆಗಡೆಯವರನ್ನು ನೆನೆದು ಮಾತನ್ನು ಮುಗಿಸಿದರು.
ಇಂದ್ರಜಿತು ರಾವಣವಧೆ ಯಕ್ಷಗಾನ ಡಿ. ವಿ.ಡಿ ಬಿಡುಗಡೆ ಮಾಡಿದ ಶ್ರೀ ಆನಂದ ವಿ. ಭಟ್ಟ, ಉದ್ಯಮಗಳು ಬೆಂಗಳೂರು ಇವರು ಮಾತನಾಡಿ ಯಕ್ಷಗಾನ ಬಾರತೀಯ ಸಂಸ್ಕೃತಿಯ ರಾಯಭಾರಿ ಜನರಿಗೆ ಮಹಾಭಾರತ ಮತ್ತು ರಾಮಾಯಣದ ಕಥೆಯನ್ನು ತಿಳಿಸಿದ್ದು ಯಕ್ಷಗಾನ. ಯಕ್ಷಗಾನ ಸಂಪೂರ್ಣ ಕಲೆ ಇದರಲ್ಲಿ ಸೃಷ್ಟಿಯಾದ ಕನ್ನಡ ಮಾತುಕತೆಯಿದೆ. ಇಂತಹ ಕಲೆಯನ್ನು ಗುರುತಿಸಿ ಸರ್ಕಾರಗಳು ಬೆಳಸಬೇಕಿದೆ. ಯಕ್ಷಗಾನ ಚಂದವೋ ಚಂದ ಹೊನ್ನಾವರ ನಮ್ಮ ತವರು ನನಗೆ ಇಲ್ಲಿ ಬರಲು ತುಂಬಾ ಖುಷಿಯಾಗುತ್ತದೆ. ನಮ್ಮ ಸಂಸ್ಕೃತಿಯ ರಾಯಭಾರಿಯಾಗಿ ಶಿವಾನಂದರು ವಿವಿಧ ದೇಶಗಳಿಗೆ ಹೋಗಿ ಬಂದಿರುವುದು ನಮಗೆ ಸಂತಸದ ವಿಷಯ. ನೀನಾಸಂಗೆ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಡಾ. ಪ್ರಭಾಕರ ಜೋಶಿಯವರು ಮಾತನಾಡಿ ಯಾರ ಪಾತ್ರ ಒಳ್ಳೇಯದು, ಶಂಭು ಹೆಗಡೆ ನಾಟ್ಯೋತ್ಸವ ದೇಶಕ್ಕೆ ಮಾದರಿಯಾದ ಉತ್ಸವ. ನಿನಾಸಂಗೆ ಮನಸಾಷ್ಟಾಂಗ ಅಭಿನಂದನೆ ಮಾಡುತ್ತೇನೆ ನಾಟಕದಲ್ಲಿ ನೀನಾಸಂಗೆ ಆದರೆ ಯಕ್ಷಗಾನಕ್ಕೆ ಶ್ರೀಮಯ ಎಂದರು. ಸಂಸ್ಕೃತಿಯ ಸೇವೆಗೆ ಎಲ್ಲರಿಗೂ ಈ ಪ್ರಶಸ್ತಿ ಸಲ್ಲಬೇಕಾಗಿದೆ. ಯಕ್ಷಗಾನಕ್ಕೆ ಮಾತ್ರಕ್ಕೆ ಪ್ರಶಸ್ತಿ ಸೀಮಿತವಾಗಿದೆ ಎಲ್ಲಾ ಕ್ಷೇತ್ರಕ್ಕೂ ನೀಡುತ್ತಿರುವುದು ಶ್ಲಾಘನಾರ್ಹ.
ಸಿನೆಮಾ ಮತ್ತು ಧಾರಾವಾಹಿಗಳು ರಂಗ ಕಲೆಯ ವೀಕ್ಷಕರನ್ನು ಹಾಳುಮಾಡಿದೆ. ಧಾರವಾಹಿ ನೋಡುತ್ತಿರುವುದಕ್ಕಿಂತ ಧಾರಾವಾಹಿ ನೋಡುವವರನ್ನೇ ನೋಡಬೇಕು ಎಂದು ವ್ಯಂಗ್ಯ ಮಾಡಿದರು.
ಯಕ್ಷಗಾನಕ್ಕೆ ದೊಡ್ಡ ಪ್ರಮಾಣದ ಸಬ್ಸಿಡಿ ಅವಶ್ಯಕತೆ ಇದೆ. ಯಕ್ಷಗಾನವೂ ಕೂಡ ತನ್ನ ಸೊಗಡನ್ನು ಕಳೇದುಕೊಳ್ಳಲಾರದು ಎಂದರು. ನಟಾವರ ಶಿವರಾಮ ಹೆಗಡೆಯವರು ಆದರೆ ಶಂಭು ಹೆಗಡೆಯವರು ವರನಟ ಎಂದು ಹೇಳಿದರು ಮತ್ತು ಕಾರ್ಯಕ್ರಮಕ್ಕೆ ಶುಭಕೋರಿ ನಮ್ಮ ಮಾತನ್ನು ಮುಗಿಸಿದರು.
ನಂತರ ಶ್ರೀ ಶಿವಾನಂದ ಹೆಗಡೆಯವರು ಬಂದವರನ್ನೆಲ್ಲ ಹಾರ್ಧಿಕವಾಗಿ ಅಭಿನಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಮೊದಲಿಗೆ ಡಾ. ಮೈಸೂರು ಮಂಜುನಾಥ ಮತ್ತು ಮೈಸೂರು ನಾಗರಾಜ್ ಸಹೋದರರಿಂದ ವಯಲಿನ್ ಜುಗಲಬಂದಿ ನಡೆಯಿತು. ಇವರಿಗೆ ಮೃದಂಗ ಶ್ರೀ ಅರ್ಜುನ್ ಕುಮಾರ್, ತಬಲಾ ಶ್ರೀ ರಾಜೇಂದ್ರ ನಾಕೋಡ್ ಸಾಥ್ ನೀಡಿದರು. ನಂತರದಲ್ಲಿ ಓರಿಸ್ಸಾದ ಅಭಿನ್ನ ಸುಂದರ ಗೋಟಿಪುವಾ ನೃತ್ಯ ಪರಿಷದ್ ತಂಡದಿಂದ ಗೋಟಿಪುವಾ ಜಾನಪದ ನೃತ್ಯ ಪ್ರದರ್ಶನಗೊಂಡಿತು. ಕೊನೆಯಲ್ಲಿ ಮುದ್ರಾಡಿ ನಮ ತುಳುವೆರ್ ಕಲಾಸಂಘಟನೆಯಿಂದ ‘ದಶಾನನ ಸಪ್ನಸಿದ್ಧಿ’ ನಾಟಕ ನಡೆಯಿತು.