ಹೊನ್ನಾವರ: ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಎರಡನೇ ದಿನ ದಿ: 03/02/2019 ರ ಬೆಳಿಗ್ಗೆ 10 ಗಂಟೆಗೆ ಶ್ರೀ ದಿವಾಕರ ಹೆಗಡೆ, ಧಾರವಾಡ ಇವರಿಂದ ದಾಂಪತ್ಯದರ್ಶನ (ರಾವಣ ವಧೆ ಸಂದರ್ಭ) ಏಕವ್ಯಕ್ತಿ ತಾಳಮದ್ದಳೆ ನಡೆಯಿತು. ಭಾಗವತರಾಗಿ ಶ್ರೀ ಅನಂತ ಹೆಗಡೆ ದಂತಳಿಗೆ ಹಾಗೂ ಮದ್ದಳೆವಾದಕರಾಗಿ ಶ್ರೀ ನರಸಿಂಹ ಹೆಗಡೆ ಮೂರೂರು ಹಾಜರಿದ್ದರು.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮವನ್ನು ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು. ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೆರೆಮನೆ ಶಂಭು ಹೆಗಡೆಯವರು ನಿಧನವಾಗಿ ಹತ್ತು ವರ್ಷಗಳು ಕಳೆದದ್ದರಿಂದ 1 ನಿಮಿಷ ಮೌನಾಚರಣೆಯನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ದೀಪ ಬೆಳಗುವುದರ ಮೂಲಕ ಚಾಲನೆಗೊಳಿಸಿದರು.
ತದನಂತರದಲ್ಲಿ ಶ್ರೀ ಜಿ. ಎಸ್. ಭಟ್, ಮೈಸೂರು ಮತ್ತು ಧರ್ಮದರ್ಶಿ ಹರಿಕೃಷ್ಣ ಪುನರೂರುರವರಿಗೆ ಶ್ರೀಮಯ ಕಲಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪುನರೂರುರವರು ತಾನು ಶಂಭು ಹೆಗಡೆಯವರ ದೊಡ್ಡ ಅಭಿಮಾನಿ. ಅವರ ಕಾಲದಿಂದಲೂ ನಾನು ಇಲ್ಲಿಗೆ ಆಗಮಿಸುತ್ತಿದ್ದೇನೆ. ಹಾಗಾಗಿ ಇಲ್ಲಿನ ಖಾಯಂ ಅತಿಥಿ ನಾನು. ಈ ವೇದಿಕೆಯಲ್ಲಿ ಅವರ ಮಂಡಳಿಯ ಕಲಾಪೋಷಕ ಪ್ರಶಸ್ತಿ ಸ್ವೀಕರಿಸುವುದು ಬಹಳ ಸಂತಸದ ವಿಷಯ ಎಂದರು. ನಂತರ ಶ್ರೀ ಜಿ. ಎಸ್. ಭಟ್‍ರವರು ಮಾತನಾಡಿ ಕರ್ನಾಟಕದಲ್ಲಿ ಬಹುರೂಪಿ ಕಾರ್ಯಕ್ರಮವನ್ನು ಬಿಟ್ಟರೆ ಬಹುಷಃ ಈ ಕೆರೆಮನೆ ನಾಟ್ಯೋತ್ಸವವೇ ಅತ್ಯಂತ ದೊಡ್ದ ಕಾರ್ಯಕ್ರಮ ಎಂದರು. ಮೈಸೂರಿಗೆ ಮತ್ತು ಯಕ್ಷಗಾನಕ್ಕೆ ಅವಿನಾಭಾವ ಸಂಬಂಧ. ಮೈಸೂರು ಒಡೆಯರ್ ಕಾಲದಿಂದ ಅಂದರೆ ಸುಮಾರು 200 ವರ್ಷಗಳಿಂದಲೂ ಯಕ್ಷಗಾನ ಮೈಸೂರಿನಲ್ಲಿ ನಡೆಯುತ್ತಿದೆ. ಮೈಸೂರಿನ ಪ್ರಜ್ಞಾವಂತ ಪ್ರೇಕ್ಷಕರು ಯಕ್ಷಗಾನವನ್ನು ಒಪ್ಪಿಕೊಂಡಿದ್ದಾರೆ ಎಂದರು.
ನಂತರ ಸಿದ್ಧಾಪುರದ ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರ ಮಂಡಳಿ, ಹುಕ್ಕಲಮಕ್ಕಿ ಮೇಳ, ಹಿರಿಯ ಕವಿ, ಲೇಖಕರಾದ ಡಾ. ಬಿ.ಎ. ಸನದಿ, ಕುಮಟಾ, ಶ್ರೀ ಹೆರಂಜಾಲು ಸುಬ್ಬಣ್ಣ ಗಾಣಿಗ, ಯಕ್ಷಗಾನ ಕಲಾವಿದರು, ಗುರು, ಡಾ. ವಿಜಯನಳಿನಿ ರಮೇಶ, ಶಿರಸಿ, ಯಕ್ಷಗಾನ ಸಂಶೋಧಕರು, ಕಲಾವಿದರು, ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ರವೀಂದ್ರ ಭಟ್ ಐನಕೈ, ಬೆಂಗಳೂರು, ಕೊನೆಯಲ್ಲಿ ಯಕ್ಷಗಾನ ಕಲಾವಿದರಾದ ಶ್ರೀ ಜಿ.ಎನ್. ಹೆಗಡೆ ಅಮ್ಮಿನಳ್ಳಿಯವರಿಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನವನ್ನು ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಎಲ್ಲರೂ ಇಡಗುಂಜಿ ಮೇಳಕ್ಕೆ, ಶಿವಾನಂದ ಹೆಗಡೆಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳಾದ ಶ್ರೀ ಬಿ. ಬಾಲಚಂದ್ರ ರಾವ್, ಮಾನ್ಯ ಅಧ್ಯಕ್ಷರು, ಕನ್ನಡ ಕಲಾಕೇಂದ್ರ, ಮುಂಬೈ ಮಾತನಾಡಿದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಇದರ ಸದಸ್ಯರಾದ ಶ್ರೀ ಕೃಷ್ಣ ನಾಯ್ಕ, ಇಡಗುಂಜಿ ಮಾತನಾಡಿ ಈ ನಾಟ್ಯೋತ್ಸವ ಮುಂದಿನ ದಿನಗಳಲ್ಲಿ ನೂರರ ಸಂಭ್ರಮ ಆಚರಿಸಲಿ ಎಂದರು. ಇವರ ನಂತರ ಶ್ರೀ ಗಣಪಯ್ಯ ಗೌಡ ಮುಗಳಿ, ಅಧ್ಯಕ್ಷರು, ವ್ಯವಸಾಯ ಸೇವಾ ಸಹಕಾರಿ ಸಂಘ, ಕೆಳಗಿನೂರು ಮಾತನಾಡಿ ಈ ನಾಟ್ಯೋತ್ಸವಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಕೇಳಿಕೊಂಡರು.
ಕೊನೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಗೇರಿಯವರು ಮಾತನಾಡಿ ಜೀವನದಲ್ಲಿ ನಾವು ನಮ್ಮ ವ್ಯಕ್ತಿತ್ವ ರೂಪಣೆಯಲ್ಲಿ ಯಾವುದು ಮಹತ್ವದ ಪಾತ್ರ ವಹಿಸಿದೆ ಎಂದು ಅವಲೋಕನ ಮಾಡಿದರೆ ಅದು ಯಕ್ಷಗಾನ ಎಂದು ಹೇಳಬಹುದು. ಅದರಲ್ಲೂ ಇಡಗುಂಜಿ ಮೇಳ ಇನ್ನಷ್ಟು ಪ್ರಭಾವ ಬೀರಿದೆ ಎಂದರು. ಹಿರಿಯರನ್ನು ಕರೆದು ಇಲ್ಲಿ ಸನ್ಮಾನಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು. ಕೆರೆಮನೆ ಮೇಳ ಕಳೆದ 85 ವರ್ಷಗಳಿಂದ ಮಾಡುತ್ತಿರುವ ಪ್ರಯತ್ನದಿಂದಾಗಿ ಇಂದು ನಮ್ಮ ಜಿಲ್ಲೆಗೆ ಯಕ್ಷಗಾನ ಕ್ಷೇತ್ರದಲ್ಲಿ ಒಂದು ಹೆಸರು ಬರುವುದಕ್ಕೆ ಸಾಧ್ಯವಾಗಿದೆ ಎಂದರು. ಕೊನೆಯಲ್ಲಿ ಶ್ರೀ ಶಿವಾನಂದ ಹೆಗಡೆಯವರು ಆಗಮಿಸಿದ ಎಲ್ಲ ಅತಿಥಿಗಳನ್ನು ವಂದಿಸಿದರು.