ಹೊನ್ನಾವರ: ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ 3ನೇ ದಿನದ ಸಭಾ ಕಾರ್ಯಕ್ರಮ ವಿದ್ಯುಕ್ತವಾಗಿ ಪುಷ್ಪಾರ್ಚನೆ ಮತ್ತು ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡ್ತು. ಸಮಾರಂಭದಲ್ಲಿ ಉಪಸ್ಥಿತರಿರುವ ಸರ್ವರನ್ನು ಸ್ವಾಗತ ಮಾಡುತ್ತಾ ಕಾರ್ಯಕ್ರಮದ ಪ್ರಸ್ತಾವನೆಯನ್ನು ಕಾರ್ಯಾಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ನಡೆಸಿಕೊಟ್ಟರು.
ಉಪಸ್ಥಿತರಿದ್ದ ಸಭಾಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಬರಹಗರರಾದ ಶ್ರೀ ಎಂ. ಕೆ. ಭಾಸ್ಕರರಾವ್, ಹಿಂದುಸ್ಥಾನಿ ಗಾಯಕರಾದ ಶ್ರೀ ಪಂಡಿತ ಪರಮೇಶ್ವರ ಹೆಗಡೆ, ಅಂಕಣಕಾರರಾದ ಶ್ರೀ ಬಿ. ಗಣಪತಿ, ಯಕ್ಷಗಾನ ಬೊಂಬೆಯಾಟದ ಮುಖ್ಯಸ್ಥರಾದ ಶ್ರೀ ಭಾಸ್ಕರ ಕೊಗ್ಗ ಕಾಮತ್, ಯಕ್ಷಗಾನ ಕಲಾವಿದರಾದ ಶ್ರೀ ಮುಗ್ವಾ ಗಣೇಶ ನಾಯ್ಕ ಮತ್ತು ಧ್ವನಿ, ಬೆಳಕು ತಜ್ಞರಾದ ಶ್ರೀ ನಿನಾದ ರಾಮಣ್ಣ ಇವರನ್ನು ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ಪುರಸ್ಕರಿಸಿ ಗೌರವಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಎಂ. ಕೆ. ಭಾಸ್ಕರ ರಾವ್‍ರವರು ಯಕ್ಷಗಾನ ಮೀರಿಸಿದ ಕಲೆಯಿಲ್ಲ. ಆದರೆ ಇದು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿರುವುದಕ್ಕೆ ಕಾರಣಗಳನ್ನು ಗುರುತಿಸಬೇಕಾಗಿದೆ. ಮಹಾಬಲ ಹೆಗಡೆ ಮತ್ತು ಶಂಭು ಹೆಗಡೆಯವರ ಯಕ್ಷಗಾನದ ಪಾತ್ರಗಳಿಂದ ನಾಣು ತುಂಬಾ ಪ್ರಭಾವಿತನಾಗಿದ್ದೇನೆ ಎಂದರು. ಶ್ರೀ ಪಂಡಿತ ಪರಮೇಶ್ವರ ಹೆಗಡೆಯವರು ನಾನು ಕೆರೆಮನೆಯ ಯಕ್ಷಗಾನವನ್ನು ನೋಡುತ್ತಾ ಬೆಳೆದವನು. ಚಂಡೆಯ ಸಪ್ಪಲವೇ ನಮ್ಮನ್ನ ಇಂದಿಗೂ ಆಕರ್ಷಿಸುತ್ತದೆ. ನಾನು ಕೆರೆಮನೆಯ ಎಲ್ಲಾ ಹಿರಿಯ ಚೇತನಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದರು. ನಂತರ ಮಾತನಾಡಿದ ಶ್ರೀ ಬಿ. ಗಣಪತಿ ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಜಗತ್ತನ್ನ ಗೆಲ್ಲುವ ಮೊದಲು ಜಗಲಿಯನ್ನ ಗೆಲ್ಲಬೇಕು. ಶಿವಾನಂದರು ಜಗಲಿಯನ್ನ ಈಗಾಗಲೇ ಗೆದ್ದಿದ್ದಾರೆ ಎಂದರು. ಸಮಾಜ ಮತ್ತು ಸಮುದಾಯ ಯಕ್ಷಗಾನದ ಬೆಳವಣಿಗೆಗೆ ಸಹಕರಿಸಬೇಕಿದೆ ಎಂದರು. ಶ್ರೀ ಭಾಸ್ಕರ ಕೊಗ್ಗಾ ಕಾಮತ್‍ರವರು ಶ್ರೀ ಶಂಭು ಹೆಗಡೆಯವರ ಹೆಸರಿನಲ್ಲಿ ನೀಡಿದ ಈ ಸಂಮಾನ ಎಲ್ಲಾ ಸಂಮಾನಕ್ಕಿಂತಲೂ ದೊಡ್ಡದು ಎಂದರು.
ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಬೇಕು ಎಂದರೆ ಸಾಲದು ಅದನ್ನು ನೋಡಬೇಕು, ಅನುಭವಿಸಬೇಕು. ಆಗ ಮಾತ್ರವೇ ಅದು ಶಾಶ್ವತವಗಲು ಸಾಧ್ಯ ಎಂದರು. ನಂತರ ಶ್ರೀ ಮುಗ್ವಾ ಗಣೇಶ ನಾಯ್ಕ ನನ್ನ ಪಾತ್ರಗಳಿಗೆ ಜೀವ ತುಂಬಿದವರು ನಮ್ಮ ಸಹಕಲಾವಿದರು. ಅವರೆಲ್ಲರನ್ನೂ ನೆನೆಯಲೇಬೇಕು. ನನಗೆ ನೀವು ನೀಡಿದ ಸಂಮಾನ ವ್ಯರ್ಥವಾಗದಂತೆ ಈ ಮುಂದೆ ಪಾತ್ರಗಳನ್ನ ನಿರ್ವಹಿಸುತ್ತೇನೆ ಸಂಶಯವೇ ಬೇಡ ಎಂದರು.
ನಂತರ ಆಗಮಿಸಿದ ಮುಖ್ಯ ಅತಿಥಿಗಳಲ್ಲಿ ಶ್ರೀ ಜಯಪ್ರಕಾಶ ಮಾವಿನಕುಳಿ ಮಾತನಾಡಿದ ಕೆರೆಮನೆ ಹೆಸರೇ ಒಂದು ರೂಪಕ. ಕೆರೆ ಇದ್ದರೆ ಮನೆ, ಕೆರೆಯಿದ್ದರೇ ಮಾತ್ರವೇ ಮನೆಗೆ ಸಾರ್ಥಕತೆ. ಆದರೆ ಕೆರೆಯನ್ನು ಮುಚ್ಚಿ ಮನೆಯನ್ನೇ ಮುಚ್ಚುವ ಪರಿಸ್ಥಿತಿ ಈಗ ಮುಂದಾಗಿದೆ. ಆದರೆ ಕೆರೆಮನೆ ಮನೆತನ ಮಾತ್ರ ಭಾರತದ ಸಾಂಸ್ಕ್ರುತಿಕ ರಾಯಭಾರಿಯಾಗಿ ಇಂದಿಗೂ ಇದೇ ಎಂದರೆ ಅದಕ್ಕೆ ಈ ಮನೆತನದ ನಿರಂತರ ಪ್ರಯತ್ನವೇ ಕಾರಣ ಎಂದರು.
ಶ್ರೀ ಕೆ ಜಿ ಸರಫ್- ಕರ್ನಾಟಕದ ಕಲೆಗಳಲ್ಲಿ ಯಕ್ಷಗಾನ ಅತ್ಯಂತ ಶ್ರೇಷ್ಟ ಕಲೆ ಎಂದರೆ ತಪ್ಪಾಗದು. ಯಕ್ಷಗಾನಕ್ಕೆ ಕೆರೆಮನೆ ಮನೆತನದ ಕೊಡುಗೆ ಅತ್ಯಂತ ಮಹತ್ವವಾದುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಕ್ಷಗಾನದ ಬೆಳೆವಣಿಗೆ ಹೆಚ್ಚಿನ ಪ್ರಯತ್ನ ನಡೆಸಬೇಕಿದೆ. ಯಕ್ಷಗಾನ ಮಹತ್ವದು ಚೈತನ್ಯಗೊಳ್ಳಲಿ ಎಂದು ಹಾರೈಸಿದರು.
ಪೆÇ್ರೀ. ಎಂ. ಶ್ರಿಧರಮೂರ್ತಿ- ಯಾವುದೇ ಕಲೆ ಅರಳಬೇಕಾದರೆ ಮಕ್ಕಳನ್ನು ಮೊದಲು ಅವರಿಗೆ ಬೇಕಾದಂತೆ ಅರಳಲು ಬಿಡಿ. ತನ್ನಿಂದ ತಾನೇ ಕಲೆ ಅರಳುತ್ತದೆ. ದೊಡ್ಡದನ್ನು ಮಕ್ಕಳಿಗೆ ಕೊಡಬೇಕಾಗಿದೆ. ಮಕ್ಕಳನ್ನು ಅಂಕದ ಹಿಂದೆ ಓಡುವ ಯಂತ್ರಗಳನ್ನಾಗಿಸಬಾರದು. ಮಕ್ಕಳಿಗೆ ಕಲೆಯನ್ನು ಅನುಭವಿಸಲು ಬಿಡಿ ಎಂದರು.
ಶ್ರೀ. ಮುರಳಿಧರ ಪ್ರಭು ನಾನು ಶಂಭು ಹೆಗಡೆಯವರ ಅಭಿಮಾನಿ ಶಿವಾನಂದರು ಶಂಭು ಹೆಗಡೆಯವರಂತೆ ಕಾಣುತ್ತಿದ್ದಾರೆ. ಪಠ್ಯಕ್ರಮದಲ್ಲಿ ಯಕ್ಷಗಾನ ಶಿಕ್ಷಣವನ್ನು ಸರ್ಕಾರಗಳು ಸೇರಿಸಬೇಕು ಎಂದರು. ಒಂದು ಯಕ್ಷಗಾನ ವಿಶ್ವವಿದ್ಯಾಲಯ ಗುಣವಂತೆಯಲ್ಲಿ ಆಗಬೇಕು ಅದಕ್ಕೆ ಪ್ರಯತ್ನಿಸಿ ಎಂದರು.
ಶ್ರೀ ಆರ್. ಜಿ. ಹೆಗಡೆ ಮಾತನಾಡಿ ಶ್ರೀ ಶಂಭು ಹೆಗಡೆಯವರು ಯಕ್ಷಗಾನದಲ್ಲಿ ಹೊಸ ಅಲೆಯನ್ನು ತಂದವರು. ಅವರು ತನ್ನ ವೇಷದಲ್ಲಿ ಲಾಲಿತ್ಯ ಮತ್ತು ಔಚಿತ್ಯವನ್ನು ತಂದವರು. ಇಂದು ಗುಣಮಟ್ಟದ ಪ್ರೇಕ್ಷಕರ ಕೊರತೆ ಕೂಡ ಇದೆ. ಗುಣಮಟ್ಟದ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟದಲ್ಲಿ ಕೆರೆಮನೆ ಮೇಳ ಗುರುತಿಸಿಕೊಳ್ಳಲಿ ಎಂದರು. ಕೊನೆಯಲ್ಲಿ ಶ್ರೀ ಗಣಪಯ್ಯ ಗೌಡ ಮಾತನಾಡಿ ಕೆರೆಮನೆ ಮೇಳ ಕಲೆಯ ಶ್ರೇಷ್ಠತೆಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪೆÇ್ರ. ಎಂ. ಎ. ಹೆಗಡೆಯವರು ನಾನು ಪ್ರಾರಂಭದ ಹಂತದಿಂದಲೂ ಕಾರ್ಯಕ್ರಮದಲ್ಲಿ ಅನೇಕ ಬಾರಿ ಅಧ್ಯಕ್ಷರಾಗಿ ಬಂದಿದ್ದೇನೆ. ನಾನು ಇಂದು ಯಕ್ಷಗಾನ ಅಕಾಡೆಮಿಯಯ ಅಧ್ಯಕ್ಷನಾಗಿದ್ದು ಶ್ರೀ ಶಂಭು ಹೆಗಡೆಯವರ ಆಶೀರ್ವಾದದಿಂದ ಎನ್ನುತ್ತೇನೆ ಎಂದರು. ರಾಷ್ಟ್ರೀಯ ನಾಟ್ಯೋತ್ಸವ ಒಂದು ಸಾಹಸ ಎಲ್ಲರೂ ಕಾರ್ಯಕ್ರಮಕ್ಕೆ ಸಹಕರಿಸಿ, ಯಶಸ್ವಿಯಾಗುವಂತೆ ಮಾಡಿ ಎಂದು ವಿನಂತಿಸಿಕೊಂಡರು.
ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲಿಗೆ ಸಿಂಗಾಪುರದ ಶ್ರೀಮತಿ ಗಾಯತ್ರಿ ಶ್ರೀರಾಮರವರಿಂದ ‘ಸೀತಾಸ್ವಗತ’ ನೃತ್ಯರೂಪಕ ನಡೆಯಿತು. ತಮ್ಮ ಭಾವಾಭಿನಯಗಳಿಂದಲೇ ಕಥೆಯನ್ನು ಎಲ್ಲರ ಮನಮುಟ್ಟುವಂತೆ ಗಾಯತ್ರಿ ಶ್ರೀರಾಮರವರು ಅಭಿನಯಿಸಿದರು. ಇದರ ನಂತರ ಓರಿಸ್ಸಾದ ಗಂಜಾಂನಿಂದ ಆಗಮಿಸಿದ ಶ್ರೀ ಶ್ರೀ ಲಕ್ಷ್ಮೀನರಸಿಂಗ ನಾಟ್ಯ ಸಂಸದ್ ತಂಡದಿಂದ ‘ಪ್ರಹ್ಲಾದ ನಾಟಕ’ ಪ್ರದರ್ಶನಗೊಂಡಿತು. ಭಾಷೆ ಭಿನ್ನವಾದರೂ ಸಹ ಎಲ್ಲಿಯೂ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡದೇ ತಮ್ಮ ವಿಭಿನ್ನ ಪ್ರಯತ್ನಗಳಿಂದ ಮಧ್ಯರಾತ್ರಿಯವರಿಗೂ ಎಲ್ಲರನ್ನೂ ತನ್ನತ್ತ ಸೆಳೆದ ಈ ನಾಟಕ ಅತ್ಯಂತ ಯಶಸ್ವಿಯಾಯಿತು.