ಕಾರವಾರ: ಸಮುದ್ರದಲ್ಲಿ ತೆರಳುತ್ತಿರುವಾಗ ತಳಭಾಗ ಒಡೆದು ಮುಳುಗುವ ಸ್ಥಿತಿಯಲ್ಲಿದ್ದ ಬಾರ್ಜ್ಅನ್ನು ಕಾರವಾರ ವಾಣಿಜ್ಯ ಬಂದರಿನ ಅಧಿಕಾರಿಗಳು ರಕ್ಷಣೆ ಮಾಡಿದ ಘಟನೆ ವರದಿಯಾಗಿದೆ.
ಮಹಾರಾಷ್ಟ್ರದ ಬೇಲಾಪುರ್ ಬಂದರಿನಿಂದ ಲಕ್ಷದ್ವೀಪದತ್ತ ತೆರಳುತ್ತಿದ್ದ ರೆಡ್ವುಡ್ ಹೆಸರಿನ ಹೂಳೆತ್ತುವ ಬಾರ್ಜ್ ಮಾರ್ಗಮಧ್ಯದಲ್ಲಿ ತಳಪಾಯ ಒಡೆದು ಅಪಾಯದ ಅಂಚಿನಲ್ಲಿ ಸಿಲುಕಿಕೊಂಡಿತ್ತು.
ಗೋವಾ ಸಮುದ್ರದ ಗಡಿ ದಾಟುತ್ತಿದ್ದಂತೆ ನೂರಾರು ಟನ್ ಭಾರದ ಬಾರ್ಜ್ನಲ್ಲಿ ನೀರು ತುಂಬಿಕೊಳ್ಳಲು ಪ್ರಾರಂಭಿಸಿತ್ತು. ಇದರಿಂದ ಬಾರ್ಜ್ ಮತ್ತು 11 ಜನ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು.
ರಂಧ್ರದಿಂದ ಬಾರ್ಜ್ ಒಳಗೆ ನೀರು ತುಂಬಿಕೊಂಡು ಒಂದು ಕಡೆ ವಾಲಿತ್ತು. ಇನ್ನೆನು ಬಾರ್ಜ್ ಮುಳುಗುವ ಲಕ್ಷಣ ಕಂಡು
ನೆರವಿಗೆ ದಾವಿಸಿದ ಬಂದರು ಇಲಾಖೆ ಅಧಿಕಾರಿಗಳು ಬಾರ್ಜನ್ನು ಇಲಾಖೆಯ ಟಗ್ ಬಳಸಿಕೊಂಡು ಕಾರವಾರ ಬಂದರು ಸಮೀಪಕ್ಕೆ ತಂದು ನಡೆಯಬಹುದಾದ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ಸದ್ಯ ಅಪಾಯಕ್ಕೆ ಸಿಲುಕಿದ್ದ ಬಾರ್ಜನ್ನು ಕಾರವಾರದ ಅಲಿಗದ್ದಾ ಕಡಲತೀರಕ್ಕೆ ತಂದಿಡಲಾಗಿದೆ.