ದಿನಾಂಕ ೫/೦೨ ೨೦೧೯ ರ ಮಂಗಳವಾರ ಬೆಳಿಗ್ಗೆ ನನ್ನ ಸಹೋದ್ಯೋಗಿ ಮಿತ್ರ ವಿನಾಯಕ ಹೆಗಡೆಕರ್ ಅವರ ತಂದೆಯವರಾದ ಪರಮೇಶ್ವರ ಹೆಗಡೇಕರ್ ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆ ಬಿಗಡಾಯಿಸಿತು .ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಎದುರಾಗಿ ಆಸ್ಪತ್ರೆಗೆ ದಾಖಲಿಸಬೇಕಾದ ಸಂದರ್ಭದಲ್ಲಿ ಇ ಎಸ್ ಐ ಸಿ ಸೌಲಭ್ಯ ಇರುವ ಅಥವಾ ಅದನ್ನು ಪಡೆಯಲು ಶಿಫಾರಸ್ಸು ಮಾಡುವ ವ್ಯವಸ್ಥೆಯು ಸರಕಾರಿ ಆಸ್ಪತ್ರೆಯಲ್ಲಿ ಇರುವುದರಿಂದ ಹಾಗೂ ದಮ್ಮು ಮತ್ತು ಹೃದಯ ಸಂಭಂದಿ ಕಾಯಿಲೆಯಾಗಿದ್ದರಿಂದ ಜನಪ್ರಿಯ ವೈದ್ಯ ಡಾ. ಶ್ರೀನಿವಾಸ ನಾಯಕರನ್ನೇ ಸಂಪರ್ಕಿಸಲು ತೀರ್ಮಾನಿಸಿ ಆಸ್ಪತ್ರೆಗೆ ಅವರನ್ನು ಕರೆದು ತಂದೆವು. ಕುಮಟಾ ಸರಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಎನಿಸದ ಹಾಗೆ ಭೌತಿಕ ಸೌಲಭ್ಯಗಳಿಂದ ಸಂಪನ್ನವಾಗಿದೆ.ಹಾಗಾಗಿ ಅಲ್ಲಿ ಬಡವ ಬಲ್ಲಿದರೆನ್ನದೇ ಸದಾಕಾಲ ರೋಗಿಗಳು ತುಂಬಿ ತುಳುಕುತ್ತಿರುತ್ತಾರೆ.ಅದರಲ್ಲೂ ಡಾ.ಶ್ರೀನಿವಾಸ ನಾಯಕರನ್ನು ಕಾಣುವುದೆಂದರೆ ಸಾಕ್ಷಾತ್ ಶ್ರೀನಿವಾಸನ ದರ್ಶನ ಪಡೆದಷ್ಟೇ ಪ್ರಯಾಸಕರ ಹಾಗೂ ಆನಂದಕರ ! ಇಂದು ಒಬ್ಬ ವೈದ್ಯರಾಗಿ ಅವರು ಕುಮಟಾದ ಸಣ್ಣ ಪ್ರದೇಶದಲ್ಲಿ ಇರುವ ಬದಲು ವಿದೇಶದಲ್ಲಿದ್ದರೆ ಅವರ ಮುಂದಿನ ತಲೆಮಾರುಗಳು ಕುಳಿತು ತಿಂದರೂ ಕರಗದಷ್ಟು ಸಂಪಾದಿಸಬಹುದಿತ್ತು.ಆದರೆ ಡಾಕ್ಟರ್ ಶ್ರೀನಿವಾಸ ನಾಯಕರಿಗೆ ಶ್ರೀಮಂತಿಕೆಯ ಮೋಹವಿಲ್ಲ ಹುಟ್ಟಿನಿಂದಲೇ ಅವರು ಶ್ರೀಮಂತರು. ಹಣಕ್ಕಿಂತ ಆರೋಗ್ಯವೇ ಮಹತ್ವದ್ದು ಎಂಬ ನಂಬಿಕೆಯನ್ನು ಉಳ್ಳವರು ಹಾಗಾಗಿ ಅವರ ಮೋಹವೇನಿದ್ದರೂ ಅವರನ್ನು ನಂಬಿಬರುವ ರೋಗಿಗಳನ್ನು ಬದುಕಿಸುವ ತುಡಿತದ ಕಡೆಗೆ ಮಾತ್ರ .ಇಂಥ ಶ್ರೀನಿವಾಸ ನಾಯಕರನ್ನು ಕಾಣಲು ಬಂದಾಗ ಅವರೆದುರು ಕಿಕ್ಕಿರಿದ ಜನಸಂದಣಿ ಇತ್ತು .ಮುಂಜಾನೆಯಿಂದಲೇ ದೂರದ ಹಳ್ಳಿಗಳಿಂದ ಬಂದು ಗಂಟೆಗಟ್ಟಲೆ ಸರದಿಯಲ್ಲಿ ಚಾತಕ ಪಕ್ಷಿಯ ಹಾಗೆ ತಮ್ಮ ಸರದಿಗೆ ಕಾಯುವ ಸನ್ನಿವೇಶ ಇಲ್ಲಿದಿನವೂ ಸರ್ವೇಸಾಮಾನ್ಯ. ಕೆಲವರಿಗಂತೂ ಸಣ್ಣಪುಟ್ಟ ಸಮಸ್ಯೆಇದ್ದರೂ ಶ್ರೀನಿವಾಸ ನಾಯಕರೇ ಬೇಕು.ಹೀಗಿರುವಾಗ ತೀವ್ರ ತೊಂದರೆಯಲ್ಲಿ ಇದ್ದ ಪಿ ಎಂ ಹೆಗಡೇಕರ ಮಾಸ್ತರನ್ನು ಕರೆದುಕೊಂಡು ಬಂದಾಗ ಡಾಕ್ಟರ್ ಎದರು ಜನಸ್ತೋಮ. ತುರ್ತಾಗಿ ಅವರನ್ನು ನೋಡಲು ಬಯಸಿದರೆ ದ್ವಾರದಲ್ಲಿ ಸಿಬ್ಬಂದಿಯು ನಿರಾಕರಿಸಿದರು. ಬೆಳಗ್ಗಿನಿಂದಲೂ ಕಾದು ಕುಳಿತಿದ್ದಾರೆ ಈಗ ಬಂದವರಿಗೆ ಹೇಗೆ ಬಿಡುವುದು? ಎಂದು ಸಮಜಾಯಿಸಿದರು .ವಿನಾಯಕ ಹೆಗಡೆ ಕರ್ ಅವರ ಜೊತೆ ಶಾಲಾ ಮುಖ್ಯಾಧ್ಯಾಪಕಿ ಸುಮಾ ಪ್ರಭು ಕೂಡ ಬಂದಿದ್ದರು.ಆಕಸ್ಮಿಕ ವಾಗಿ ಹೊರಗಡೆ ನೋಡಿದ ಡಾಕ್ಟರ್ ಮುಖ್ಯಾಧ್ಯಾಪಕಿ ಅವರನ್ನು ಗಮನಿಸಿ ತಕ್ಷಣ ಒಳಕರೆದರು. ವಿಷಯತಿಳಿದು ಕೂಡಲೇ ಧಾವಿಸಿ ಬಂದು ಪರೀಕ್ಷಿಸಿದರು. ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರೆಸಿದರು.

RELATED ARTICLES  ವ್ಯಕ್ತಿ‌ ನಾಪತ್ತೆ : ತಂದೆಯನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ ಮಗ

ಮಂಗಳ ವಾರ ರಾತ್ರಿ ಮೂರು ಗಂಟೆಗೆ ಗಾಢ ನಿದ್ರೆಯಲ್ಲಿ ಇದ್ದ ನನಗೆ ಮೊಬೈಲ್ ಕರೆ ಬಂದಾಗ ದಡಬಡಿಸಿ ಎದ್ದು ಕರೆ ಸ್ವೀಕರಿಸಿದರೆ ಶಿಕ್ಷಕಮಿತ್ರ ಜಯರಾಜ ಪೋನ್ ಮಾಡಿ ತಾನು ಆಸ್ಪತ್ರೆಯಲ್ಲಿ ಇದ್ದೇನೆ .ವಿನಾಯಕನ ತಂದೆಯ ಆರೋಗ್ಯ ತೀವ್ರ ಹಾಳಾಗಿದೆ.ಡಾಕ್ಟರ್ ರಿಗೆ ಪೋನ್ ಮಾಡಿದ್ದೇವೆ ಎಂದಾಗ ಮತ್ತೆ ಮಲಗಲು ಮನಸಾಗದೇ ಬಾಡದಿಂದ ರಾತ್ರಿಬೈಕ್ ಮೂಲಕ ಆಸ್ಪತ್ರೆಗೆ ಬಂದೆ.ಅಷ್ಟರಲ್ಲಿ ಶ್ರೀನಿವಾಸ ನಾಯಕರು ಬಂದು ರೋಗಿಯನ್ನು ಉಳಿಸಲು ಹರಸಾಹಸ ಪಡುತ್ತಿದ್ದರು.ಅವರಿಗೆ ಸಹಕಾರಿಗಳಾಗಿ ನರ್ಸ ಅವರು ಇದ್ದರೂ ಅವಶ್ಯಕತೆ ಗೆ ಅನುಗುಣವಾಗಿ ಇರಲಿಲ್ಲ. ಅಂತೂ ಶ್ರೀನಿವಾಸರ ಎದರು ಯಮ ಶರಣಾಗಿದ್ದ ! ಹೊರಗಡೆ ಬಂದವರೇ ಸಧ್ಯ ಪರವಾಗಿಲ್ಲ ಫಿಟ್ಸ ಬಂದಿದೆ.ಹಾರ್ಟ ಗಟ್ಟಿಇದೆ ನೋಡ್ವ ಏನಾಗ್ತದೆ ಅಂತ ಧೈರ್ಯ ಹೇಳಿದರು. ಸುಮಾರು ಎರಡು ತಾಸಿನ ವರೆಗೂ ಸತತ ಪ್ರಯತ್ನ ಮಾಡಿದ ಅವರಿಗೆ ಧನ್ಯವಾದ ಹೇಳಿದಾಗ ಇದಕ್ಕೆಲ್ಲ ಯಾಕೆ ಧನ್ಯವಾದ ಹೇಳ್ತೀರಾ ? ನೀವಲ್ಲದೇ ಯಾರು ಇದ್ದರೂ ನಾವು ಇಷ್ಟೇ ಪ್ರಯತ್ನ ಮಾಡ್ತೇವೆ ಅಂದರು . ಸರ್ ಯಾಕೋ ನೀವಿಲ್ಲದಿದ್ದಾಗ ತೀವ್ರ ನಿಗಾ ಘಟಕದಲ್ಲಿ ನಿಗಾ ಕಡಿಮೆ ಆಗ್ತಿದೆ ಅನಿಸುತ್ತದೆ ಅಂತ ಹೇಳಿದಾಗ.ನೋಡಿ ಇದಕ್ಕಾಗಿಯೇ ನುರಿತ ನರ್ಸಗಳ ನೇಮಕಾತಿ ಆಗಬೇಕು.ಅದು ಇನ್ನೂ ಆಗಿಲ್ಲ ನಮಗೆ ಸೂಕ್ತ ನರ್ಸಗಳ ನೇಮಕಾತಿ ಆಗಬೇಕಿದೆ.ಇದ್ದ ಇಬ್ಬರೇ ಎಲ್ಲವನ್ನೂ ನಿಭಾಯಿಸಬೇಕು ಅವರೇ ಆಯ್ ಸಿ ಯೂ ನೋಡ್ಕೋಬೇಕು. ಅವರೇ ಹೆರಿಗೆನೂ ಮಾಡಿಸಬೇಕು ಪಾಪ ಎಷ್ಟು ಅಂತಮಾಡ್ತಾರೆ ಅಂದರು.ನಮಗೆ ಮನವರಿಕೆ ಆಯಿತು . ಶ್ರೀನಿವಾಸ ನಾಯಕರು ಕುಮಟಾದಲ್ಲಿ ನೆಲಸಿರುವುದು ನಮ್ಮ ಪುಣ್ಯ ಅವರು ಡಾಕ್ಟರ್ ಅಲ್ಲ ದೇವರು ಅನ್ನುವ ಮಾತುಗಳನ್ನು ಬಹಳಷ್ಟು ಜನರ ಬಾಯಲ್ಲಿ ಕೇಳಿರುವ ನನಗೆ ಅದು ಉತ್ಪ್ರೇಕ್ಷೆ ಅಲ್ಲ ಎನಿಸಿತು .ಸರಕಾರಿ ಆಸ್ಪತ್ರೆಯ ಬಗ್ಗೆ ಜನರಿಗಿರುವ ಅವನಂಬಿಕೆ ಇಂತಹ ವೈದ್ಯರಿಂದ ದೂರಾಗುತ್ತದೆ ಎಂಬುದಕ್ಕೆ ಕುಮಟಾ ಸರಕಾರಿ ಆಸ್ಪತ್ರೆಯೇ ಸಾಕ್ಷಿ.ವೈದ್ಯಾಧಿಕಾರಿಗಳಾದ ಡಾಕ್ಟರ್ ಗಣೇಶ್ ನಾಯ್ಕರ ನೇತೃತ್ವದಲ್ಲಿ ಇಂದು ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಆದರೆ ಕೊರತೆ ಇರುವ ಸಿಬ್ಬಂದಿವರ್ಗದ ನೇಮಕಾತಿಯು ತುರ್ತಾಗಿ ಆಗಬೇಕಿದೆ
ಅಂತೂ ರಾತ್ರಿ ಐದುವರೆ ಗಂಟೆಗೆ ಡಾಕ್ಟರ್ ಶ್ರೀನಿವಾಸ ನಾಯಕರು ನಿರ್ಗಮಿಸಿದರು. ಕೆಲವೇ ನಿಮಿಷಗಳಲ್ಲಿ ಜನರಲ್ ವಾರ್ಡನಿಂದ ಗರ್ಭಿಣಿ ಮಹಿಳೆಯೊಬ್ಬಳು ಹೊಟ್ಟೆ ಹಿಡಿದು ಕೊಂಡು ಬೊಬ್ಬೆ ಹಾಕುತ್ತ ಹೊರಬಂದಳು ಅಷ್ಟರಲ್ಲೇ ಅವಳ ಹಿಂದೊಬ್ಬಳು ಅವಳಿಗೆ ಧೈರ್ಯ ಹೇಳುತ್ತಾ ಬಂದಳು .ನರ್ಸ ಮಾತ್ರ ಆಯ್ ಸಿ ಯೂ ದಿಂದ ಹೊರಬಂದಿದ್ದರು.ಸ್ವಲ್ಪ ಸಾವರಿಸುವಷ್ಟರಲ್ಲೇ ಅವರಿಗೆ ಗರ್ಭಿಣಿಯ ಕಡೆಯವರು ಓಡಿಹೋಗಿ ಕರೆದರು. ತಕ್ಷಣವೇ ನರ್ಸ ಹೆರಿಗೆ ರೂಂನತ್ತ ಧಾವಿಸಿದರು.ಹದಿನೈದು ನಿಮಿಷದಲ್ಲಿ ಗರ್ಭಿಣಿಯ ಜೊತೆ ಇದ್ದ ಮಹಿಳೆ ಹೊರಗೆ ಓಡಿ ಬಂದರು ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೊಬೈಲ್ ಎತ್ತಿಕೊಂಡು ಯಾರಿಗೋ ಪೋನ್ ಮಾಡಿ ,,ಕೋಸ ಹುಟ್ಟನೆ . ಅಂದರು. ಸಮಾಜದಲ್ಲಿ ಗಂಡು ಮಗುವಿನ ಜನನಕ್ಕೆ ಪಡುವ ಸಂಭ್ರಮನೋಡಿ ರೇಜಿಗೆ ಆಯಿತು. ಸ್ವಲ್ಪ ಹೊತ್ತಿನಲ್ಲೇ ನರ್ಸ ಮಗುವನ್ನು ತಂದು ಅವಳ ಕೈಗಿತ್ತಳು.ಭೂಮಿಗೆ ಬಂದ ಭಗವಂತನ ಪ್ರತಿನಿಧಿಯನ್ನು ನೋಡಲು ನಾನೂ ಹೋದೆ.ಆ ಮಹಿಳೆ ಸಂತೋಷ ಪಡುತ್ತಾ ಸರ್ ಇದು ನಮ್ಮ ಕುಟಂಬಲ್ಲಿ ಹುಟ್ಡಿದ ಮೊದಲ ಗಂಡುಮಗು. ಇಲ್ಲಿ ತನಕ ನಮ್ಮ ಮನೆಯ ಸದಸ್ಯರಿಗೆಲ್ಲ ಏಳು ಹೆಣ್ಣು ಮಗು ಅಂದಾಗ ಅವರ ಸಂಭ್ರದ ನಿಜಕಾರಣ ತಿಳಿಯಿತು .ಸ್ವಲ್ಪವೇ ಸಮಯದಲ್ಲಿ ಬಾಣಂತಿ ನಗುತ್ತಾ ನಡೆದುಕೊಂಡು ವಾರ್ಡಿಗೆ ಹೋದಳು !
ಅರೇ ಹೆರಿಗೆ ಎಂದರೆ , ,! ಸರಳವಾ? ಅನಿಸಿದ್ದು ಸುಳ್ಳಲ್ಲ.ಏಳು ಮಕ್ಕಳನ್ನು ಹೆತ್ತ ನನ್ನ ಅಮ್ಮ ನೆನಪಾಳು. ನನ್ನ ಮೂರನೇ ಅಣ್ಣ ಹುಟ್ಟುವ ಎರಡು ತಾಸಿನ ಮುಂಚೆ ಅಘನಾಶಿನಿ ಬೆಟ್ಟಕ್ಕೆ ಹೋಗಿ ಮರ ಹತ್ತಿ ಒಣ ಕಟ್ಟಿಗೆ ಕಡಿದು ಹೊರೆ ಕಟ್ಟಿ ಅದನ್ನು ಸ್ವತಃ ತಲೆಯ ಮೇಲೆ ಹೊತ್ತು ತಂದು ಮನೆಗೆ ಬಂದು ಹೊರೆ ಇಳಿಸಿದ ಕೆಲವೇ ಸಮಯದಲ್ಲಿ ಹೆರಿಗೆ ನೋವು ಕಾಣಿಸಿ ಕೊಂಡು ಕಡೆಗೆ ಅಣ್ಣ ಹುಟ್ಟಿದ್ದಂತೆ ! ಏಳಕ್ಕೆ ಏಳೂ ಮಕ್ಕಳು ನಾರ್ಮಲ್ ಹೆರಿಗೆ ಎಂದರೆ ಇಂದಿಗದು ಕಾಕಕ್ಕ ಗುಬ್ಬಕನ ಕತೆಯ ಹಾಗೆ ಅನಿಸುತ್ತದೆ. ಕೊನೆಗೂ ಪರಮೇಶ್ವರ ಹೆಗಡೇಕರ್ ಅವರ ಅನಾರೋಗ್ಯದ ಸಮಯದಲ್ಲಿ ಅವರ ಕುಟುಂಬದವರ ದುಃಖ ದಲ್ಲಿ ಭಾಗಿಯಾಗಲು ಬಂದು ಆ ಮಹಿಳೆಯ ಮಗ್ಧ ನಿಷ್ಕಳಂಕ ನಗುವಿನ ಸಂಭ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದ್ದು ಮನಸಿಗೆ ಹಿತ ಅನಿಸಿತು.ಒಂದು ಕಡೆ ಒಬ್ಬರು ಜೀವನದ ಕಟ್ಟಕಡೆಯ ಸಂಘರ್ಷದಲ್ಲಿದ್ದರೆ ಇನ್ನೊಂದು ಕಡೆ ಹೊಸ ಮಗುವಿನ ಆಗಮನ. ಆಸ್ಪತ್ರೆ ಎಂದರೆ ನೋವು ನಲಿವಿನ ಸಂತೆ!
ರಾತ್ರಿ ಕಳೆದು ಪೂರ್ವದಲ್ಲಿ ಅರುಣನ ಆಗಮನವಾಗಿ ಮನೆಗೆ ಪೋಪ ದಾರಿಯು ಸ್ಪಷ್ಟವಾಗಿ ಗೋಜರಿಸುತ್ತಿತ್ತು.

RELATED ARTICLES  ಬಾಲಮಂದಿರ ಆವರಣದಲ್ಲಿ ಮಗುವನ್ನು ಬಿಟ್ಟುಹೋದ ಪಾಲಕರು..!

ಚಿದಾನಂದ ಭಂಡಾರಿ ಕಾಗಾಲ.
ಶಿಕ್ಷಕರು ಕೊಂಕಣ ಎಜುಕೇಷನ್ ಟ್ರಸ್ಟ. ೮೯೭೦೬೧೨೨೫೭.