ಹೊನ್ನಾವರ: ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಕೊನೆಯ ದಿನ ಪುಷ್ಪಾರ್ಚನೆ ಮತ್ತು ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು. ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಆಗಮಿಸಿದ ಎಲ್ಲಾ ಅತಿಥಿಗಳನ್ನು ಮತ್ತು ಕಲಾಪೋಷಕ ಪ್ರಶಸ್ತಿ ಪಡೆಯಲಿರುವ ಎಲ್ಲಾ ಗೌರವಾನ್ವಿತರನ್ನು ಹಾಗೂ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪಡೆಯಲಿರುವವರನ್ನು ಹಾರ್ದಿಕವಾಗಿ ಸ್ವಾಗತಿಸಿದರು.
ಉಪಸ್ಥಿತರಿದ್ದ ಸಭಾಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಶ್ರೀ ನಾರಾಯಣ ಯಾಜಿ ಸಾಲೇಬೈಲು ಇವರು ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪುರಸ್ಕೃತ ಶ್ರೀ ತಿಮ್ಮಣ್ಣ ಯಾಜಿಯವರಿಗೆ ಅಭಿನಂದನಾ ನುಡಿಯನ್ನು ಸಲ್ಲಿಸಿದರು. ನಂತರ ಹಿರಿಯ ಯಕ್ಷಗಾನದ ಕಲಾವಿದರಾದ ಶ್ರೀ ತಿಮ್ಮಣ್ಣ ಯಾಜಿ, ಮಣ್ಣಿಗೆಯವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ-2018 ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀ ತಿಮ್ಮಣ್ಣ ಯಾಜಿಯವರು ಯಕ್ಷಗಾನ ಕನ್ನಡದ ಕಲೆ. ಇದು ಕಲಾವಿದನೂ ಸಂತಸಪಟ್ಟು, ನೋಡುವವರಿಗೂ ಸಂತಸ ಕೊಡುವ ಕಲೆಯಾಗಿದೆ. ಪ್ರಶಸ್ತಿ ನೀಡಿದ್ದಕ್ಕಾಗಿ ಶಿವಾನಂದ ಹೆಗಡೆಯವರನ್ನು ಅಭಿನಂದಿಸಿದರು.
ತದನಂತರ ಶ್ರೀ ನಾರಾಯಣ ಭಟ್ ಮೇಲಿನಗಂಟಿಗೆ ಮತ್ತು ಶ್ರೀ ಕೆ.ಜಿ. ಹೆಗಡೆ ಅಣ್ಣುಹಿತ್ತಲು ಇವರಿಗೆ ಶ್ರೀಮಯ ಕಲಾಪೋಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶ್ರೀ ನಾರಾಯಣ ಭಟ್ಟ ಅವರು ಮಾತನಾಡಿ ಕಲೆಗೆ ಬೆಲೆ ತಂದುಕೊಟ್ಟವರು ಕೆರೆಮನೆ ಮನೆತನದ ಹಿರಿಯರು. ಕೆರೆಮನೆ ಕುಟುಂಬ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು. ಶಂಭು ಹೆಗಡೆಯವರು ಸೋತುಗೆದ್ದವರು. ಸತ್ತು ಬದುಕಿದವರು ಎಂದು ಅವರನ್ನು ನೆನೆದರು. ಶ್ರೀ ಕೆ. ಜಿ. ಹೆಗಡೆ ಅಣ್ಣುಹಿತ್ತಲು ಮಾತನಾಡಿ ಯಕ್ಷಗಾನದಿಂದ ನಾನು ತೃಪ್ತಿ ಪಡೆದಿದ್ದೇನೆ. ಯಕ್ಷಗಾನ ನನಗೆ ಸಂತಸ ತಂದಿದೆ. ಅದಕ್ಕಾಗಿ ಯಕ್ಷಗಾನಕ್ಕೆ ನಾನು ಏನೂ ಕ್ಕೊಡಬಹುದೋ ನನ್ನ ಕೈಲಾದಷ್ಟು ನಾನು ಕೊಡುಗೆ ನೀಡಲು ಪ್ರಯತ್ನಿಸಿದ್ದೇನೆ ಎಂದರು.
ಶ್ರೀ ಶಂಕರ ಭಟ್, ರಂಗಭೂಮಿ ಮತ್ತು ಕಿರುತೆರೆ ಚಲನಚಿತ್ರ ಕಲಾವಿದರು ಮಾತನಾಡಿ ಶ್ರೀ ಶಂಭು ಹೆಗಡೆಯವರು ಯಕ್ಷಗಾನದ ಡಾ. ರಾಜಕುಮಾರ್ ಎಂದರು. ಶಂಭು ಹೆಗಡೆಯವರೆಂದರೆ ಒಂದು ವಿಶ್ವವಿದ್ಯಾಲಯವಿದ್ದಂತೆ. ಅವರ ಮೇಲೆ ಪಿ.ಎಚ್.ಡಿ ಮಾಡಬಹುದು. ಗುಣವಂತೆಯನ್ನು ಸಿರಿವಂತೆ ಮಾಡಿದವರು ಕೆರೆಮನೆ ಶಂಭು ಹೆಗಡೆಯವರು. ನಾನು ಕೂಡ ಕೆರೆಮನೆ ಕುಟುಂಬದ ಅಭಿಮಾನಿಗಳಲ್ಲಿ ಒಬ್ಬ. ನನ್ನನ್ನು ಇಲ್ಲಿಗೆ ಕರೆದಿದ್ದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶ್ರೀ ಜಯರಾಮ ಪಾಟೀಲ್, ಬೆಂಗಳೂರು ಮಾತನಾಡಿ ಕಲೆ ಎಂದರೆ ಬೆಳಕಿದ್ದಂತೆ. ಅದು ಎಲ್ಲರನ್ನು ಬೆಳಗುತ್ತದೆ. ರಂಗಭೂಮಿಯ ಸೇವೆ ಹೀಗೆ ಮುಂದುವರೆಯಬೇಕಿದೆ ಎಂದರು. ಶ್ರೀ ಶೇಷಗಿರಿ ಭಟ ಗುಂಜಗೋಡು, ಸಿದ್ಧಾಪುರ ಮಾತನಾಡಿ ಶಿವಾನಂದರು ಯಕ್ಷಗಾನಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ದೇಹಕ್ಕೆ ಆಹಾರ ಮುಖ್ಯವಾದರೆ ಮನಸ್ಸಿಗೆ ಕಲೆ ಅಷ್ಟೇ ಮುಖ್ಯ ಎಂದರು. ಶ್ರೀ ಶಂಭು ಗೌಡ ಅಡಿಮನೆ ಮಾತನಾಡಿ ಈ ಕಾರ್ಯಕ್ರಮ ಶಿವಾನಂದರ ಪ್ರಯತ್ನದ ಫಲ ಎಂದರು. ನಾಟ್ಯೋತ್ಸವ ಶಾಶ್ವತವಾಗಿ ನಡೆಯಬೇಕಿದೆ. ಈ ಪರಂಪರೆ ಯಕ್ಷಗಾನದ ಕೇಂದ್ರವಾಗಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ ಪ್ರೋ. ಎಂ. ಎ. ಹೆಗಡೆಯವರು, ಮಾನ್ಯ ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾತನಾಡಿ ಇಂದು ಅರ್ಹರಿಗೆ ಗಜಾನನ ಹೆಗಡೆ ಪ್ರಶಸ್ತಿ ಹಾಗೂ ಕಲಾಪೋಷಕ ಪ್ರಶಸ್ತಿ ನೀಡಿದ್ದಾರೆ. ನಾಟ್ಯೋತ್ಸವಕ್ಕೆ ಸರ್ಕಾರದ ಸಹಾಯದ ನಿರೀಕ್ಷೆ ಇದೆ. ಆದರೆ ಈವರೆಗೆ ಯಾವುದೇ ಸಹಕಾರ ದೊರೆತಿಲ್ಲ ಎಂದರು. ಶ್ರೀ ಶಿವಾನಂದ ಹೆಗಡೆಯ್ವರು ಆಗಮಿಸಿದ ಎಲ್ಲ ಅತಿಥಿಗಳನ್ನು, ಪ್ರಶಸ್ತಿ ಸ್ವೀಕರಿಸಿದವರನ್ನು ಹಾಗೂ ಅಧ್ಯಕ್ಷರನ್ನು ಹಾಗೂ ಎಲ್ಲಾ ಸಭಿಕರನ್ನು ಹಾರ್ದಿಕವಾಗಿ ಅಭಿನಂದಿಸಿದರು.