ಸಿದ್ದಾಪುರ; ಜೀವಜಗತ್ತಿಗೆ ಜಲ ತುಂಬಾ ಮುಖ್ಯ. ಭಗವಂತ ಮೊದಲು ಸೃಷ್ಟಿಸಿದ್ದು ಜಲವನ್ನು ಎಂದು ವೇದದಲ್ಲಿ ಹೇಳಲಾಗಿದೆ. ನಂತರ ಮಾನವನನ್ನು ಭಗವಂತ ಸೃಷ್ಟಿಸಿದ್ದಾನೆ. ನೀರಿನಂತಹ ಸಂಪತ್ತು ಬೇರೆ ಇಲ್ಲ ಎಂದು ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ಶ್ರೀರಾಘವೇಶ್ವರಭಾರತೀ ಶ್ರೀಗಳು ಹೇಳಿದ್ದಾರೆ. ತಾಲೂಕಿನ ಭಾನ್ಕುಳಿಯ ಶ್ರೀರಾಮದೇವಮಠ ಆವಾರದಲ್ಲಿಯ ಗೋಸ್ವರ್ಗದಲ್ಲಿ ಕರ್ನಾಟಕ ಬ್ಯಾಂಕು ಪ್ರಾಯೋಜನೆ ಮಾಡಿರುವ “ಗೋತೀರ್ಥ” ಸಮರ್ಪಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ಗೋಸ್ವರ್ಗದ ತಾಣವು ಆಧುನಿಕತೆಯ ಸೋಂಕಿಲ್ಲದ ಪ್ರದೇಶ. ಬೇಕಾದಷ್ಟು ತೊಂದರೆ, ಉಪಟಳದ ನಡುವೆಯೂ ನಮಗೆ ಸರಿ ಎನಿಸಿ ಮೀನಮೇಷ ಎಣಿಸದೇ ಗೋಸ್ವರ್ಗ ನಿರ್ಮಾಣದ ಅಸಮ ಸಾಹಸಕ್ಕೆ ಕೈಹಾಕಲಾಯಿತು. ಆದಿಗುರು ಶಂಕರರ, ಪೂರ್ವ ಗುರುವರ್ಯರುಗಳ ಆಶೀರ್ವಾದದಿಂದ ಸಂಕಲ್ಪ ಕಾರ್ಯಸಿದ್ಧಿಯಾಯಿತು. ಗೋಸ್ವರ್ಗದಲ್ಲಿಯ ಗೋವುಗಳು ಯಥೇಚ್ಛ ತಿಂದುಂಡು ಸ್ವತಂತ್ರವಾಗಿವೆ. ಗೋವುಗಳಿಗೆ ಹೊಡೆಯುವುದಿರಲಿ, ಬಯ್ಯುವಂತೆಯೂ ಇಲ್ಲ ಎಂದು ತಿಳಿಸಿದ್ದೇವೆ. ಇಂತಹ ವೈಶಿಷ್ಟ್ಯಪೂರ್ಣ ಗೋಸ್ವರ್ಗದ ಪೆಟೆಂಟ್ ಪಡೆಯಿರಿ ಎಂದು ಕೆಲವರು ಸೂಚಿಸಿದರು. ನಾವು ಪೆಟೆಂಟ್ ಪಡೆಯುವುದಿರಲಿ, ಪ್ರತೀ ಜಿಲ್ಲೆಯಲ್ಲಿಯೂ ಇಂತಹ ಗೋಸ್ವರ್ಗ ನಿರ್ಮಾಣವಾದಲ್ಲಿ ನಮಗೆ ಅತ್ಯಂತ ಸಂತಸವಾಗುತ್ತದೆ. ಗೋಬಂಧುಗಳಾಗಿ ಗೋಸೇವೆ ಮಾಡಿ, ಸುರಭಿ ಸೇವಕಿಯರು ಪುನ: ಕಾರ್ಯಪ್ರವೃತ್ತರಾಗಿ ಎಂದು ಶ್ರೀಗಳು ಕರೆನೀಡಿದರು. ಗೋಮೂತ್ರ ರೂಪಾಂತರದ “ಸುರಭಿಸಾರ” ಕ್ಯಾಪ್ಸೂಲ್ ಅನ್ನು ಲೋಕಾರ್ಪಣೆ ಮಾಡಿದ ಶ್ರೀಗಳು ಅನೇಕ ವರ್ಷಗಳ ಕನಸು ಇದೀಗ ನನಸಾಗಿದೆ. ಗವ್ಯೋದ್ಯಮದಲ್ಲಿ ಇದೊಂದು ಮಹಾಕ್ರಾಂತಿಯಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚುಸುವ ಜೊತೆ ವಿವಿಧ ಕಾಯಿಲೆಗಳಿಗೆ ಸುರಭಿಸಾರ ರಾಮಬಾಣವಾಗಲಿದೆ ಎಂದರು. ಗೋಸ್ವರ್ಗ ಸೃಷ್ಟಿಯಲ್ಲಿ ಕರ್ನಾಟಕ ಬ್ಯಾಂಕು ತನ್ನ ಕೈಜೋಡಿಸಿ ಸಾರ್ಥಕ್ಯ ಮೆರೆದಿದೆ. ಮುಂದೆಯೂ ಗೋಸಂರಕ್ಷಣೆಯಲ್ಲಿ ಈ ಹಣಕಾಸು ಸಂಸ್ಥೆ ತನ್ನ ಸೇವೆ ಸಲ್ಲಿಸಲಿ ಎಂದ ಶ್ರೀಗಳು ಶ್ರೀರಾಮನು ನಮ್ಮಿಂದ ಎಷ್ಟೋ ಕಾರ್ಯ ಮಾಡಿಸಿದ್ದಾನೆ. ಆದರೆ ಗೋಸ್ವರ್ಗ ಕಾರ್ಯದ ಸಂತೃಪ್ತಿ ಅತ್ಯಧಿಕ. ಗೋಸ್ವರ್ಗ ಮತ್ತಷ್ಟು ಅಭಿವೃದ್ಧಿಯತ್ತ ದಾಪುಗಾಲು ಹಾಕಲಿ, ಜಗತ್ತಿಗೇ ಮಾದರಿಯಾಗಲಿ, ಸಕಲರಿಗೂ ಒಳಿತಾಗಲಿ ಎಂದು ಹಾರೈಸಿದರು.

RELATED ARTICLES  ಅ. 2೦ರಿಂದ 26 ರವರೆಗೆ ಯಕ್ಷ ಸಂಭ್ರಮ ಟ್ರಸ್ಟ್ ವತಿಯಿಂದ ಚತುರ್ಥ ತಾಳಮದ್ದಳೆ ಸಪ್ತಾಹ.

                       ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಭಟ್ಟ ಮಾತನಾಡಿ ಸ್ವರ್ಗದ ವ್ಯಾಖ್ಯಾನವನ್ನು ಕೇಳಿ ತಿಳಿದಿದ್ದೆವು. ಈ ಗೋಸ್ವರ್ಗಕ್ಕೆ ಬಂದಾಗ ಸ್ವರ್ಗದ ಸಾಕಾರ ಕಂಡುಬಂತು. ಭೀಷ್ಮರು ಶರಶಯ್ಯೆಯಲ್ಲಿ ನೀರಡಿಕೆಯಿಂದ ಬಳಲುತ್ತಿದ್ದಾಗ ಬಂಗಾರದ ಪಾತ್ರೆಯಲ್ಲಿ ತಂದ ಜಲವನ್ನು ನಿರಾಕರಿಸಿದ. ಆತನ ಇಂಗಿತವನ್ನು ಅರಿತ ಅರ್ಜುನ ಬಾಣದಿಂದ ಭೂಮಿಯನ್ನೇ ಸೀಳಿ ಬೀಷ್ಮನ ಬಾಯಿಗೇ ಗಂಗೆ ಬರುವಂತೆ ಮಾಡಿದ. ಅಂತಹ ಸತ್ಕಾರ್ಯವನ್ನು ಶ್ರೀರಾಘವೇಶ್ವರಭಾರತೀ ಶ್ರೀಗಳು ಮಾಡಿದ್ದಾರೆ. ಪಟ್ಟಣದಲ್ಲಿ ಗೋ ಸೇವೆಗೆ  ಅವಕಾಶವಿಲ್ಲದೇ ಇರಬಹುದು. ಗೋಸೇವೆ ಮಾಡುವ ಮನಸ್ಸುಳ್ಳವರು ಗೋಸ್ವರ್ಗದ ಗೋವುಗಳನ್ನು ದತ್ತು ಸ್ವೀಕರಿಸಿ ಸೇವೆ ಸಲ್ಲಿಸಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
       ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಅಕ್ಕಿಗಿರಣಿ ಮಾಲಿಕ ಸಂಘದ ಉಪಾಧ್ಯಕ್ಷ, ತುಮಕೂರು ಜಿಲ್ಲಾ ಗೋಪರಿವಾರದ ಅಧ್ಯಕ್ಷ ಡಾ.ಆರ್.ಎಲ್. ರಮೇಶ ಬಾಬು ಮಾತನಾಡಿ ಪ್ರಪಂಚ, ದೇಶ, ರಾಜ್ಯದಲ್ಲಿಯೇ ಗೋಸೇವೆಯಲ್ಲಿ ರಾಮಚಂದ್ರಾಪುರಮಠ ಮಹಾಸಂಸ್ಥಾನದ ಪರಮಪೂಜ್ಯರು ಮುಂಚೂಣಿಯಲ್ಲಿದ್ದಾರೆ. ಪ್ರಪಂಚದ ಅದ್ಭುತ ಗೋಸ್ವರ್ಗವನ್ನು ಅತ್ಯಲ್ಪ ಅವಧಿಯಲ್ಲಿ ಪವಾಡ ಸದೃಶವಾಗಿ ಅವರು ನಿರ್ಮಿಸಿಕೊಟ್ಟಿರುವುದು ಅವರ ಶಕ್ತಿಯ ದ್ಯೋತಕವಾಗಿದೆ ಎಂದರು. ಗೋಸ್ವರ್ಗಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಸಮರ್ಪಿಸಿದರು.  

RELATED ARTICLES  ರಾಷ್ಟ್ರಮಟ್ಟದ ಐಡಿಯಲ್ ಪ್ಲೆ ಅಬಾಕಸ್ ಸ್ಪರ್ಧೆಯಲ್ಲಿ ಸಾಧನೆ.

      ಮುಖ್ಯ ಅತಿಥಿಗಳಾಗಿದ್ದ ಜಿ.ಪಂ.ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ ಮಾತನಾಡಿ ಗೋವು ಪುರಾಣ, ಇತಿಹಾಸ ಕಾಲದಿಂದಲೂ ಧರ್ಮ ಸಂಸ್ಕøತಿಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಇಂದು ಗೋಸ್ವರ್ಗ ನೋಡಿದರೆ ಆ ಪುರಾಣ, ಇತಿಹಾಸ ಮರುಕಳಿಸಿದಂತೆ ಅನಿಸುತ್ತಿದೆ ಎಂದರು. ಮತ್ತೋರ್ವ ಅತಿಥಿ ತಾ.ಪಂ.ಅಧ್ಯಕ್ಷ ಸುಧೀರ ಗೌಡರ್ ಮಾತನಾಡಿ ತಾಯಿಯು ಕೆಲಕಾಲ ಎದೆ ಹಾಲು ನೀಡಿ ಬೆಳೆಸಿದರೆ ಕೊನೆಯ ಉಸಿರಿರುವವರೆಗೂ ಗೋಮಾತೆ ಹಾಲುಣಿಸುತ್ತಾಳೆ. ಇಂತಹ ಗೋಮಾತೆಯನ್ನು ಕಟುಕರ ಕೈಗೆ ನೀಡುವುದು ಹೃದಯಹೀನತೆಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ “ಸುರಭಿಸಾರ”ಕ್ಯಾಪ್ಸೂಲ್ ಅನ್ನು ಶ್ರೀಗಳು ಬಿಡುಗಡೆ ಮಾಡಿದರು. ಸುರಭಿಸೇವಕರಾಗಿ ವಿಶೇಷ ಸಾಧನೆ ಮಾಡಿದ ಮೂವರು ಮಹಿಳೆಯರಿಗೆ ಬಾಗಿನವನ್ನು ನೀಡಿದರು. ಗೋತೀರ್ಥ ನಿರ್ಮಾಣಕ್ಕೆ ಕೈಜೋಡಿಸಿದ ಕರ್ನಾಟಕ ಬ್ಯಾಂಕಿನ ಎಂ.ಡಿ.ಎಂ.ಎಸ್.ಮಹಾಬಲೇಶ್ವರ ಭಟ್ಟರಿಗೆ ತಾಮ್ರಪತ್ರ ಅನುಗ್ರಹಿಸಿದರು. ವೇದಿಕೆಯಲ್ಲಿ ಬೇಡ್ಕಣಿ ಗ್ರಾ.ಪಂ.ಅಧ್ಯಕ್ಷೆ ಸವಿತಾ ನಾಯ್ಕ, ಗೋಸ್ವರ್ಗದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಹವ್ಯಕ ಮಹಾಮಂಡಳದ ಅಧ್ಯಕ್ಷೆ ಈಶ್ವರೀ ಬೇರ್ಕಡವು ಉಪಸ್ಥಿತರಿದ್ದರು. ಸುರಭಿಸಾರ ತಯಾರಕ ರಾಘವೇಂದ್ರ ಹಂಸ ಸುರಭಿಸಾರದ ಕುರಿತು ವಿವರಿಸಿದರು. ಸಾರಿಗೆ ಉದ್ಯಮಿ ವೆಂಕಟ್ರಮಣ ಹೆಗಡೆ (ಪುಟ್ಟ ಹೆಗಡೆ) ಕವಲಕ್ಕಿ, ಗೋಕರ್ಣ ಉಪಾಧಿವಂತ ಮಂಡಲದ ಕಾರ್ಯದರ್ಶಿ ಬಾಲಕೃಷ್ಣ ಭಟ್ಟ, ಗೋಪರಿವಾರದ ಆರ್.ಜಿ.ಪೈ ಮಂಜೈನ್, ಪಿ.ಬಿ.ಹೊಸೂರು, ಸುಬ್ರಾಯ ಭಟ್ಟ ಮೂರೂರು, ವಿಶ್ರಾಂತ ಪ್ರಾಚಾರ್ಯ ಎಸ್.ಶಂಭು ಭಟ್ಟ, ಪ್ರಾಚಾರ್ಯ ಎಸ್.ಜಿ.ಭಟ್ಟ, ಮಾತೃಪ್ರಧಾನ ವೀಣಾ ಭಟ್ಟ ಶಿರಸಿ  ಸೇರಿದಂತೆ ಜಿಲ್ಲೆ ಹೊರಜಿಲ್ಲೆಗಳ ಶಿಷ್ಯಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಗಣಪತಿ ಹೆಗಡೆ ಮೂಗಿಮನೆ ಸಭಾಪೂಜೆ ನೆರವೇರಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.