ಉಡುಪಿ: ಮಲ್ಪೆಯ ಬೋಟು ನಾಪತ್ತೆಯಾಗಿ 55 ದಿನ ಕಳೆದರೂ ಇನ್ನೂ ನಿಗೂಢವಾಗಿಯೆ ಇದೆ.ನಾಪತ್ತೆಯಾದವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ದಿನಕ್ಕೊಂದು ಕಥೆಗಳು ಹುಟ್ಟುತ್ತಿವೆ.ಆದರೆ ಯಾವುದು ಸತ್ಯವಲ್ಲ.ಇಷ್ಟು ದಿನ ಕಳೆದರೂ ಸುವರ್ಣ ತ್ರಿಭುಜ ಬೋಟ್ ಮತ್ತು 7 ಜನ ಮೀನುಗಾರರು ನಾಪತ್ತೆಯಾಗಿ ಯಾವುದೇ ಮಾಹಿತಿ ಇಲ್ಲ.ಆದ್ದರಿಂದ ಮೀನುಗಾರರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮೇಲೆ ಕೋಪಗೊಂಡಿದ್ದಾರೆ.ನಾಪತ್ತೆಯಾಗಿ ಇಷ್ಟು ದಿನವಾದರೂ ಸರಕಾರ ಯಾವುದೇ ಮಾಹಿತಿ ಕೊಡಲಿಲ್ಲ. ಬೋಟ್ ಮತ್ತು ಮೀನುಗಾರರು ಎಲ್ಲಿ ಹೋದರು? ಎಂಬ ಪ್ರಶ್ನೆ ಪ್ರಶ್ನೆಯಾಗಿ ಉಳಿದಿದೆ.ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ಮೀನುಗಾರರು ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿ 55 ದಿನಗಳಾದರೂ ಈವರೆಗೆ ಯಾವುದೇ ಸುಳಿವುಗಳು ಲಭ್ಯವಾಗದಿರುವುದರಿಂದ ಕುಟುಂಬಸ್ಥರು ಹಾಗೂ ಮೀನುಗಾರರ ಆತಂಕ ಇನ್ನೂ ಹೆಚ್ಚಿಸಿದೆ.
ಡಿ.13ರಂದು ರಾತ್ರಿ 11ಗಂಟೆ ಸುಮಾರಿಗೆ ಮಾಲಕ ಬಡಾನಿಡಿಯೂರು ಗ್ರಾಮದ ಚಂದ್ರಶೇಖರ್ ಕೋಟ್ಯಾನ್ ಸೇರಿದಂತೆ ಏಳು ಮಂದಿ ಮೀನು ಗಾರರನ್ನು ಹೊತ್ತ ಸುವರ್ಣ ತ್ರಿಭುಜ ಬೋಟು ಇತರ ಆರು ಬೋಟುಗಳ ಜೊತೆ ಆಳ ಸಮುದ್ರ ಮೀನುಗಾರಿಕೆ ಹೊರಟಿತ್ತು. ಈ ಏಳು ಬೋಟಿನವರು ಡಿ.15ರವರೆಗೆ ಪರಸ್ಪರ ವಯರ್‌ಲೆಸ್ ಸಂಪರ್ಕದಲ್ಲಿದ್ದರು. ಡಿ.15ರಂದು ರಾತ್ರಿ ಒಂದು ಗಂಟೆಗೆ ಸುವರ್ಣ ತ್ರಿಭುಜ ಬೋಟಿನವರೊಂದಿಗೆ ವುರ್‌ಲೆಸ್ ಸಂಪರ್ಕ ಮಾಡಲಾಗಿತ್ತು.
ನಂತರ ಸಂಪರ್ಕ ಕಡಿತಗೊಂಡ ಸುವರ್ಣ ತ್ರಿಭುಜ ಬೋಟು ಕಣ್ಮರೆಯಾಗಿರುವ ವಿಚಾರ ಡಿ.16ರಂದು ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಇತರ ಬೋಟಿನವರ ಗಮನಕ್ಕೆ ಬಂತು. ಈ ಆರು ಬೋಟಿನವರು ನಾಪತ್ತೆಯಾಗಿರುವ ಬೋಟಿಗಾಗಿ ಹುಡುಕಾಟ ನಡೆಸಿದ್ದಲ್ಲದೇ, ಇತರರಿಂದಲೂ ಮಾಹಿತಿ ಸಂಗ್ರಹಿಸಿದ್ದರು. ಆದರೆ ಎಲ್ಲೂ ಪತ್ತೆಯಾಗದಿದ್ದಾಗ ಡಿ. 22ರಂದು ಮಲ್ಪೆ ಬಂದರಿಗೆ ಈ ಕುರಿತು ಮಾಹಿತಿ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಅದೇ ದಿನ ಬೋಟಿನ ಮಾಲಕ ಚಂದ್ರಶೇಖರ್ ಕೋಟ್ಯಾನ್‌ರ ಸಹೋದರ ನಿತ್ಯಾನಂದ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನಿಂದ ಇಂದಿನವರಿಗೆ ಕೋಸ್ಟಲ್ ಸೆಕ್ಯುರಿಟಿ, ಜಿಲ್ಲಾ ಪೊಲೀಸರು, ಕರಾವಳಿ ಕಾವಲು ಪಡೆ, ನೌಕಾಪಡೆ ನಾಪತ್ತೆಯಾಗಿರುವ ಬೋಟು ಸಹಿತ ಮೀನುಗಾರರಿಗಾಗಿ ಕರ್ನಾಟಕ, ಗೋವಾ, ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಈವರೆಗೆ ಲಭ್ಯವಾಗಿಲ್ಲ. ಒಂದೆಡೆ ಸರಕಾರ ತನಿಖಾ ತಂಡ, ತಂತ್ರಜ್ಞಾನಗಳನ್ನು ಬಳಸಿ ಹುಡುಕುವ ಕೆಲಸ ಮಾಡಿದರೆ, ಇನ್ನೊಂದೆಡೆ ಮೊಗವೀರರು ತಮ್ಮ ಕುಲದೇವರು, ನಂಬಿದ ದೈವಗಳ ಮೊರೆ ಹೋಗಿ ನಮ್ಮವರು ಶೀಘ್ರವೇ ಸುರಕ್ಷಿತವಾಗಿ ಬರುವಂತೆ ಪ್ರಾರ್ಥಿಸುತ್ತಿದ್ದಾರೆ.
ನಾಪತ್ತೆಯಾಗಿರುವ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆಯ ಚಂದ್ರಶೇಖರ್ ಕೋಟ್ಯಾನ್ ಹಾಗೂ ದಾಮೋದರ್ ಸಾಲ್ಯಾನ್ ಅವರ ಮನೆ ಯವರು ಈಗಲೂ ಮನೆ ಮಕ್ಕಳನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಚಂದ್ರಶೇಖರ್ ಕೋಟ್ಯಾನ್‌ರ ಪತ್ನಿ ಶ್ಯಾಮಲಾ, ದಾಮೋದರ್ ಸಾಲ್ಯಾನ್‌ರ ತಂದೆ ಸುವರ್ಣ ತಿಂಗಳಾಯ ಹಾಗೂ ತಾಯಿ ಸೀತಾ ಸಾಲ್ಯಾನ್, ಪತ್ನಿ ಮೋಹಿನಿ ಅವರ ಕಣ್ಣೀರೆ ಮಾತಾಗಿದೆ. ಮನೆ ಹಾಗೂ ಪರಿಸರದಲ್ಲಿ ದುಃಖ, ನೀರವ ಮೌನ ಆವರಿಸಿದೆ.
ಈ ಘಟನೆ ನಡೆದ ಬಳಿಕ ಮೀನುಗಾರರು ಆಳ ಸಮುದ್ರ ಮೀನುಗಾರಿಕೆಗೆ ತೆರಳಲು ಭಯ ಪಡುವ ಸ್ಥಿತಿ ಬಂದಿದೆ. ಒಂದು ಸಲ ಯುದ್ದದ ನೌಕಾಪಡೆಯ ಹಡಗು ಡಿಕ್ಕಿ ಹೊಡೆದಿದೆ ಎನ್ನಲಾಯಿತು. ಇನ್ನೊಂದು ಸಲ ಬೋಟ್ ಅಪಹರಿಸಲಾಗಿದೆ ಎನ್ನಲಾಯಿತು.ಆನಂತರ ನಾಪತ್ತೆಯಾದವರ ಮೊಬೈಲ್ ಗೆ ಕರೆ ಹೋಯಿತು, ಇಬ್ಬರ ಮೊಬೈಲ್ ಫೋನ್ ರಿಂಗ್ ಆಗಿದೆ, ಆನಂತರ ಬಂದ್ ಆಗಿದೆ ಎನ್ನಲಾಗುತ್ತಿದೆ. ಆದ್ದರಿಂದ ಎಲ್ಲರಲ್ಲೂ ಗೊಂದಲ ಹೆಚ್ಚಿದೆ.ದೇವರ ಪ್ರಶ್ನೆಯಲ್ಲಿ ನಾಪತ್ತೆಯಾದವರು ಎಲ್ಲರು ಜೀವಂತವಾಗಿದ್ದಾರೆ,ಆದರೆ ಅವರನ್ನು ಬಂಧನದಲ್ಲಿ ಇಟ್ಟಿದ್ದಾರೆ ಎಂದು ಹೇಳುತ್ತಾರೆ. ಮನೆಯವರಿಗೆ ಅವರು ಜೀವಂತವಾಗಿ ಇದ್ದಾರೆ ಎಂಬ ನಂಬಿಕೆ ಇದೆ.
ಆದರೆ ಎಲ್ಲಾ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆ,ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಉತ್ತರ ಕೊಡಬೇಕು.ಆದರೆ ನಾಪತ್ತೆಯಾದವರ ಮನೆಗಳಲ್ಲಿ ಕುಟುಂಬಿಕರು ಈಗಲೂ ದುಃಖದಿಂದ ಇದ್ದಾರೆ.
ಮಾಹಿತಿ: ಪ್ರೈಮ್ ನ್ಯೂಸ್