ಶಿರಸಿ : ಕ್ಯಾಂಪ್ಕೋ ಸಂಸ್ಥೆ, ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು, ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಸಹಯೋಗದಲ್ಲಿ ರಾಜ್ಯ ಮಟ್ಟದ ನಾಲ್ಕನೆಯ ಕೃಷಿ ಯಂತ್ರ ಮೇಳ, ಕನಸಿನ ಮನೆ ಹಾಗೂ ಹೈನುಗಾರಿಕೆಯ ಬೃಹತ್ ಪ್ರದರ್ಶನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಫೆ.23ರಿಂದ 25ರ ವರೆಗೆ ನಡೆಯಲಿದೆ.
ಮೂರು ದಿನಗಳ ಕಾಲ ಮೇಳ ನಡೆಯಲಿದ್ದು, ಮೂರು ವರ್ಷಕ್ಕೊಮ್ಮೆ ಇದನ್ನು ಹಮ್ಮಿಕೊಳ್ಳಲಾಗುತ್ತದೆ. ಕಳೆದ ಬಾರಿ 2 ಲಕ್ಷ ಕ್ಕೂ ಅಧಿಕ ರೈತರು ಮೇಳದ ಪ್ರಯೋಜನ ಪಡೆದುಕೊಂಡಿದ್ದು, ಈ ಬಾರಿ ಇನ್ನೂ ಹೆಚ್ಚಿನ ಜನರು ಸೇರುವ ನಿರೀಕ್ಷೆಯಿದೆ ಎಂದು ಕ್ಯಾಂಪ್ಕೋ ನಿರ್ದೇಶಕ ಶಂಭುಲಿಂಗ ಹೆಗಡೆ ನಡಗೋಡ ಸಂಸ್ಥೆಯ ಸ್ಥಳೀಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಸ್ತುತ ಯುವ ಜನತೆಯಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸಲು ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳು ಅನ್ವೇಷಿಸಿದ ಕೃಷಿ ಯಂತ್ರಗಳ ಪ್ರದರ್ಶನ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ. ಆದ್ದರಿಂದ ಈ ಭಾಗದ ರೈತರೂ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು. ಪ್ರಮುಖರಾದ ನಿಶ್ಚಯಕುಮಾರ ಹೆಗಡೆ, ಭರತ್ ಮತ್ತಿತರರು ಉಪಸ್ಥಿತರಿದ್ದರು.