ಸೂರ್ಯಾರಾಧನೆ ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಗ್ರೀಸ್, ಈಜಿಪ್ತ ಹಾಗೂ ಮಧ್ಯ ಏಶ್ಯಾಗಳಲ್ಲಿ ಆಚರಿಸಲಾಗುತ್ತದೆ. ಮಾಘಮಾಸ ಶುಕ್ಷ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮ ದಿನ. ಅಲ್ಲದೆ ಸಪ್ತಮಿ ತಿಥಿಯ ಅಧಿದೇವತೆಯು ಸೂರ್ಯ ಆಗಿರುವುದರಿಂದ, ಇದನ್ನು ಸೂರ್ಯ ಆರಾಧನೆಯ ”ರಥ ಸಪ್ತಮಿ” ದಿನವೆಂದು ಆಚರಿಸಲಾಗುವುದು.

ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತುಬದ್ದವಾದ ಕರ್ತವ್ಯಪ್ರಜ್ಞೆ, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆ ಅನಿಸುತ್ತದೆ. ಅಂಗಾಂಗಗಳು ಕಾರ್ಯಕ್ಷಮವಾಗುತ್ತವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಢಿಯಲ್ಲಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಲಾಗಿದೆ.


ವೈವಸ್ವತ ಮನ್ವಂತರದ ಆರಂಭದ ದಿನ ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರ ದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಢ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. 

RELATED ARTICLES  ಕನ್ಯೆಯರು ವಿವಾಹವಾಗದೇ ತೊಂದರೆಯನ್ನು ಅನುಭವಿಸುತ್ತಿದ್ದರೆ ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿ!


ರೋಗಗಳಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ. ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಿದ್ದೇವೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತವೆ.


ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ”ಅರ್ಘ್ಯ” ನೀಡಿದರೆ ಪೂರ್ವಜನ್ಮದ ಪಾಪಗಳು ಹಾಗು ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತದೆ. ಸೂರ್ಯೋದಯಕ್ಕೆ ಮಾಡುವ ಮಾಘ ಸ್ನಾನ ಪುಣ್ಯಪ್ರದವಾದುದು. 
ಆಯುಷ್ಯ, ಆರೋಗ್ಯ, ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ತಿಳಿಸಿವೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ.
ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ.


ಗಾಯತ್ರಿ ಮಂತ್ರದಲ್ಲಿನ ಪ್ರತಿ ಶಬ್ದವೂ ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುವ ಉದ್ದೇಶದಿಂದಲೇ ಬಳಸಲಾಗಿದೆ.ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನ ಮಗ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತಕರ್ಮದಿಂದ ಬಂದಿರುವ ಈ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾಧನೆ ಮಾಡಲಾಗಿ ರಾಜಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದ. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಸೂರ್ಯನಿಂದ ಅಕ್ಷಯ ಪಾತ್ರೆ ಪಡೆದಿದ್ದರು.
ರಾವಣನನ್ನು ಗೆಲ್ಲಬೇಕಾದರೆ ಶ್ರೀರಾಮನು ಕೂಡ ಅಗಸ್ತ್ಯರ ಉಪದೇಶದಂತೆ ”ಆದಿತ್ಯ ಹೃದಯ”ದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ.

RELATED ARTICLES  ಬೈಕ್ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು.


ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ”ಶಮಂತಕ ಮಣಿ” ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ ‘ಸೂರ್ಯಶತರಿ’ ಎಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.


ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.


ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಸೂರ್ಯನು ಬಲಹೀನನಾಗಿದ್ದರೆ ಅಥವಾ ಷಡ್ಬಲವಿರದಿದ್ದರೆ ರಥ ಪ್ತಮಿಯಂದು ಸೂರ್ಯಾರಾಧನೆ ಮಾಡಿದರೆ ದೋಷ ಪರಿಹಾರವಾಗುತ್ತದೆ. ಮಾಣಿಕ್ಯದ ಹರಳು ಧರಿಸಲು ಶುಭದಿನವಾಗಿದೆ.