ಒಬ್ಬ ವ್ಯಕ್ತಿ ತೀರಿ ಹೋದ. ಅವನು ಸ್ವರ್ಗವನ್ನು ಸೇರಿದಾಗ ಒಬ್ಬ ದೇವತೆ ಬಂದು ಆತನನ್ನು ಎದುರುಗೊಂಡಳು. ಅವನನ್ನು ತುಂಬಾ ಗೌರವದಿಂದ ಕರೆದುಕೊಂಡು ಸ್ವರ್ಗವನ್ನು ತೋರಿಸಲು ನಡೆದಳು. ಅದೊಂದು ಬಹುದೊಡ್ಡ ಕಟ್ಟಡ. ಅದನ್ನು ಪ್ರವೇಶಿಸಿ ಸ್ವಲ್ಪ ಮುಂದೆ ನಡೆದಾಗ ಒಂದು ವಿಸ್ತಾರವಾದ ಕೊಠಡಿ ಕಂಡಿತು. ಅಲ್ಲಿ ಅನೇಕ ದೇವತೆಗಳು ತುಂಬಾ ಗಡಿಬಿಡಿಯಿಂದ ಕೆಲಸ ಮಾಡುತ್ತಿದ್ದರು. ಅವರಿಗೆ ಬೆವರು ಒರೆಸಿಕೊಳ್ಳಲೂ ಪುರಸೊತ್ತು ಇಲ್ಲ. ದೊಡ್ಡ ದೊಡ್ಡ ಹಾಳೆಗಳ ಮೇಲೆ ಏನೇನೋ ಬರೆಯುತ್ತಿದ್ದರು.

ಈ ವ್ಯಕ್ತಿ ದೇವತೆಗೆ ಕೇಳಿದ, ‘ಯಾರು ಇವರೆಲ್ಲಾ? ಏನು ಮಾಡುತ್ತಿದ್ದಾರೆ?’ ದೇವತೆ ಹೇಳಿದಳು, ಇದು ಸ್ವೀಕೃತಿ ವಿಭಾಗ. ಇಲ್ಲಿ ಭೂಮಿಯ ಮೇಲಿನ ಜನರು ತಮ್ಮ ಪ್ರಾರ್ಥನೆಗಳಲ್ಲಿ ದೇವರಿಗೆ ಏನೇನು ಕೇಳಿಕೊಂಡಿದ್ದಾರೋ ಅದನ್ನು ಸ್ವೀಕರಿಸಿ ದಾಖಲೆ ಮಾಡುತ್ತಿದ್ದಾರೆ. ದಿನ ನಿತ್ಯವೂ ಕೋಟ್ಯಂತರ ಬೇಡಿಕೆಗಳು ಬರುತ್ತವಲ್ಲವೇ? ಅದಕ್ಕೇ ಇಲ್ಲಿನ ದೇವತೆಗಳಿಗೆ ಹಗಲು ರಾತ್ರಿ ಬಿಡುವಿಲ್ಲದ ಕೆಲಸ’.

ಮತ್ತೆ ಆ ದೇವತೆ ಈತನನ್ನು ಮುಂದೆ ಕರೆದೊಯ್ದಳು. ಅಲ್ಲಿ ಮತ್ತೊಂದು ವಿಸ್ತಾರವಾದ ವಿಭಾಗ. ದೇವತೆ ಮತ್ತೆ ನುಡಿದಳು, *ಇದು ಬಟವಾಡೆ ವಿಭಾಗ*. ‘ಹೌದೇ? ಇಲ್ಲಿ ಏನು ಬಟವಾಡೆ ಮಾಡುತ್ತಾರೆ? ಯಾರಿಗೆ ಮಾಡುತ್ತಾರೆ?’ ಕೇಳಿದ ಈ ವ್ಯಕ್ತಿ.

ದೇವತೆ, ‘ಇದೂ ಬಹಳ ಮುಖ್ಯವಾದ ವಿಭಾಗ. ಹಿಂದಿನ ವಿಭಾಗದಲ್ಲಿ ನೀವು ನೋಡಿದ್ದಿರಲ್ಲ? ಅಲ್ಲಿ ಜನರು ಯಾವ ಯಾವ ಬೇಡಿಕೆಗಳನ್ನು ತಮ್ಮ ಪ್ರಾರ್ಥನೆಗಳಲ್ಲಿ ಸಲ್ಲಿಸಿದ್ದರೋ ಅವೆಲ್ಲವುಗಳನ್ನು ಭಗವಂತ ಅನುಗ್ರಹಿಸಿದ್ದಾನೆ. ಆ ಅನುಗ್ರಹಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಆ ಜನರಿಗೆ ಬಟವಾಡೆ ಮಾಡುವುದು ಇಲ್ಲಿಯ ದೇವತೆಗಳ ಕೆಲಸ’. ವ್ಯಕ್ತಿ ಗಮನಿಸಿದ. ನೂರಾರು ದೇವತೆಗಳು ಒಂದು ಮಾತನ್ನು ಆಡದೇ ಒಂದು ಕ್ಷಣವನ್ನು ವ್ಯರ್ಥಮಾಡದೇ ಸತತವಾಗಿ ದುಡಿಯುತ್ತಿದ್ದರು. ಅವರ ದುಡಿತಕ್ಕೆ ಕೊನೆಯೇ ಇಲ್ಲ ಎನ್ನಿಸಿತು.

RELATED ARTICLES  ಎರಡು ತಲೆಗಳಿರುವ ಕರು ಜನನ

ಕೊನೆಗೆ ದೇವತೆ ಅವನನ್ನು ಕರೆದುಕೊಂಡು ಉದ್ದವಾದ ಹಜಾರವನ್ನು ದಾಟಿ ಮುಂದೆ ಬಂದಾಗ ಅಲ್ಲೊಂದು ತೀರ ಪುಟ್ಟದಾದ ಕೊಠಡಿ. ಅಲ್ಲಿ ಮೇಜಿನ ಹಿಂದೆ ಒಬ್ಬ ದೇವತೆ ಕುಳಿತಿದ್ದಾಳೆ. ಆಕೆಗೆ ಯಾವ ಕೆಲಸವೂ ಇಲ್ಲ. ಈತನಿಗೆ ಆಶ್ಚರ್ಯವಾಗಿ ಕೇಳಿದ, ‘ಅರೇ ಇಲ್ಲಿ ಈಕೆಗೆ ಯಾವ ಕೆಲಸವೂ ಇಲ್ಲವಲ್ಲ, ಇದು ಯಾವ ವಿಭಾಗ?’. ಆಕೆ ನಿಟ್ಟುಸಿರು ಬಿಟ್ಟು ಹೇಳಿದಳು. *ಇದು ರಸೀದಿ ವಿಭಾಗ*. ಜನರು ಮಾಡಿದ ಪ್ರಾರ್ಥನೆಗೆ ಅನುಗುಣವಾಗಿ ಭಗವಂತ ಅನುಗ್ರಹ ನೀಡುತ್ತಾನೆ. ಅದು ತಮಗೆ ತಲುಪಿದೆಯೆಂದು ಅವರು ಕಳುಹಿಸಿದ ರಸೀದಿಯನ್ನು ಇಲ್ಲಿ ದಾಖಲು ಮಾಡುತ್ತಾರೆ. ಹಾಗೆಂದರೆ ಅನುಗ್ರಹ ತಲುಪಿದ್ದಕ್ಕೆ ಜನ ರಸೀದಿ ಕಳುಹಿಸುವುದಿಲ್ಲವೇ?

ಆ ರಸೀದಿಯನ್ನು ಕಳುಹಿಸುವುದಾದರೂ ಹೇಗೆ?’ ಬೆರಗಾದ ವ್ಯಕ್ತಿ ಕೇಳಿದ. ದೇವತೆ, ‘ಅದು ತುಂಬಾ ಸುಲಭ. ದೇವರ ಅನುಗ್ರಹ ತಲುಪಿದೊಡನೆ ಕೈಮುಗಿದು ಭಕ್ತಿಯಿಂದ ಕೃತಜ್ಞತೆಗಳು ಭಗವಂತಾ ಎಂದು ಒಮ್ಮೆ ಹೇಳಿದರೆ ಸಾಕು. ರಸೀದಿ ಇಲ್ಲಿಗೆ ಬಂದುಬಿಡುತ್ತದೆ’ ಎಂದಳು. ‘ಯಾವ ಯಾವ ಅನುಗ್ರಹಕ್ಕೆ ಧನ್ಯವಾದ ಹೇಳಬೇಕು?’ ಕೇಳಿದ ವ್ಯಕ್ತಿ.

RELATED ARTICLES  ತನ್ನ ವಿದ್ಯಾರ್ಥಿನಿಗೇ ಅಶ್ಲೀಲ ಮೆಸೇಜ್ ಕಳಿಸಿದ ಉಪನ್ಯಾಸಕ : ಸಾರ್ವಜನಿಕರಿಂದ ಬಿತ್ತು ಗೂಸಾ.

ಆಕೆ ನಕ್ಕು ಹೇಳಿದಳು, ನಿಮ್ಮ ಮನೆಯಲ್ಲಿ ಎರಡು ಹೊತ್ತು ಊಟಕ್ಕೆ ತೊಂದರೆ ಇಲ್ಲದಿದ್ದರೆ, ತಲೆಯ ಮೇಲೊಂದು ಸೂರು ಇದ್ದರೆ, ಮೈಮೇಲೆ ಸರಿಯಾದ ಬಟ್ಟೆ ಇದ್ದರೆ ನೀವು ಪ್ರಪಂಚದ ಪ್ರತಿಶತ ೨೫ ರಷ್ಟು ಭಾಗ್ಯಶಾಲಿಗಳ ಪಟ್ಟಿ ಸೇರಿದ್ದೀರಿ. ನಿಮ್ಮ ಬ್ಯಾಂಕಿನಲ್ಲಿ ಒಂದಷ್ಟು ಹಣವಿದ್ದು, ಬದುಕಲು ತಕ್ಕ ಶಿಕ್ಷಣವಿದ್ದರೆ ನೀವು ಪ್ರಪಂಚದ ಕೇವಲ ಒಂದು ಪ್ರತಿಶತ ಪುಣ್ಯವಂತರ ಸಾಲಿನಲ್ಲಿ ನಿಂತಿದ್ದೀರಿ. ದಿನನಿತ್ಯ ಎದ್ದಾಗ ರೋಗವಿಲ್ಲದೇ ಆರೋಗ್ಯಶಾಲಿಗಳಾಗಿದ್ದರೆ, ನಿಮಗೆ ಇನ್ನೂ ಪ್ರೀತಿಪಾತ್ರರಾದ ತಂದೆತಾಯಿಗಳ ಸೇವೆಯ ಅವಕಾಶವಿದ್ದರೆ, ಸದಾ ಸಂತೋಷ ನೀಡುವ ಪರಿವಾರ ನಿಮ್ಮದಾಗಿದ್ದರೆ, ನೀವು ಆತ್ಮವಿಶ್ವಾಸದಿಂದ, ನೈತಿಕತೆಯಿಂದ ತಲೆ ಎತ್ತಿ ನಡೆಯುವಂತಾಗಿದ್ದರೆ, ನಿಮ್ಮಷ್ಟು ಅನುಗ್ರಹಶಾಲಿಗಳು ಮತ್ತೊಬ್ಬರಿಲ್ಲ. ಈ ಎಲ್ಲಾ ಅನುಗ್ರಹಗಳಿಗೆ ಒಂದು ಧನ್ಯವಾದ ಹೇಳಬಹುದು.

ರಸೀದಿ ವಿಭಾಗದಲ್ಲಿ ದೇವತೆಗೆ ಯಾವ ಕೆಲಸವೂ ಇಲ್ಲವೆಂದರೆ ಭಗವಂತನಿಂದ ಅನುಗ್ರಹ ಪಡೆದ ಜನ ಒಂದು ಕೃತಜ್ಞತೆಯ ಮಾತನ್ನು ಹೇಳದಷ್ಟು ಕೃತಘ್ನರಾಗಿದ್ದಾರೆಂದು ವ್ಯಕ್ತಿಗೆ ತಿಳಿದು ಬಹಳ ದುಃಖವಾಯಿತು. ಕೃತಜ್ಞತೆ ಎನ್ನುವುದು ಸುಸಂಸ್ಕೃತ ಮನುಷ್ಯನ ಮೊದಲ ಲಕ್ಷಣ.

ಸಹಾಯ ಮಾಡಿದ್ದನ್ನು, ಮಾಡಿದವರನ್ನು ನೆನೆಯದಿರುವುದು ಸಂಸ್ಕೃತಿಯನ್ನು ಮರೆತಂತೆ.

– ಪೇಜಾವರ ಶ್ರೀಪಾದರು