ಕಾರವಾರ: ಪದ್ಮಶ್ರೀ ಪ್ರಶಸ್ತಿ ಪುರಸ್ಕøತೆ ಸುಕ್ರಿ ಬೊಮ್ಮ ಗೌಡ ಅವರು ಈ ನೆಲದಲ್ಲಿ ಸಾವಿರಾರು ವರ್ಷಗಳ ಜನಪದರನ್ನು ಪ್ರತಿನಿಧಿಸಿ ಮಹಾನದಿ ಗಂಗಾವಳಿಯ ರೂಪಕದಂತೆ ಮೂರ್ತರೂಪ ಪಡೆದು ನಮ್ಮೊಂದಿಗಿದ್ದಾರೆ. ಅವರ ಬದುಕು ಹರಿವ ಗಂಗಾವಳಿ ನದಿಯಂತೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ನುಡಿದರು.
ಅವರು ಉಜರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಮ್ಮಿಕೊಂಡ ಸುಕ್ರಿ ಬೊಮ್ಮ ಗೌಡ ಮತ್ತು ಸಂಗಡಿಗರ ಜಾನಪದ ಹಾಡುಗಳ ಪ್ರಸ್ತುತಿ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಸುಕ್ರಿ ಗೌಡ ಅವರು ಜನಪದದ ಸಾವಿರಾರು ಹಾಡುಗಳನ್ನು ಕರುಳಲ್ಲಿ ಇಟ್ಟುಕೊಂಡಿದ್ದಾರಷ್ಟೇ ಅಲ್ಲ, ಅನೇಕ ಜನಾಂದೋಲನದ ನೇತೃತ್ವ ವಹಿಸಿ ಗಂಟಲು ಹರಿಯುವಂತೆ ಚೀರಿ ಸರಕಾರದ ಗಮನಸೆಳೆದವರು. ಹೊಸ ತೆಲಮಾರಿನ ಬದುಕು ಹಸನಾಗಬೇಕು ಎಂದು ಕನಸು ಕಂಡವರು ಎಂದು ಅರವಿಂದ ಕರ್ಕಿಕೋಡಿ ಹೇಳಿದರು.
ವಿನಯ ಮತ್ತು ಮಾನವೀಯತೆಯನ್ನು ಮೇಳೈಸಿಕೊಂಡು ಜಾನಪದ ಇಲ್ಲಿಯ ತನಕ ಹರಿದುಬಂದಿದೆ. ಅದನ್ನು ಕಾಪಾಡಿಕೊಂಡು ಸುಕ್ರಿ ಬೊಮ್ಮ ಗೌಡ ಅವರ ಬದುಕಿನ ಸಹಜತೆಗೆ ಕೊಂಡಿಯಾಗುವುದು ಮುಂದಿನ ಪೀಳಿಗೆಯ ಬದ್ಧತೆಯಾಗಬೇಕು ಎಂದು ಕರ್ಕಿಕೋಡಿ ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ.ಎನ್.ಕೇಶವ ಅವರು ಮಾತನಾಡಿ ಸುಕ್ರಿ ಬೊಮ್ಮ ಗೌಡ ಅವರು ಜನಪದ ಲೋಕನ ಆಸ್ತಿ. ಅವರು ನಡೆದಾಡುವ ಜನಪದ ವಿಶ್ವಕೋಶ. ಅವರನ್ನು ಗೌರವಪೂರ್ವಕವಾಗಿ ತಮ್ಮ ಕಾಲೇಜಿಗೆ ಕರೆಸಿಕೊಂಡಿದ್ದು ತಮ್ಮ ಕಾಲೇಜಿಗೆ ಅಭಿಮಾನದ ಸಂಗತಿ ಎಂದರು. ನಂತರ ಸುಕ್ರಿ ಬೊಮ್ಮ ಗೌಡ, ಉಚ್ಚಲಿ ಗೌಡ ಮತ್ತು ನುಗ್ಲಿ ಗೌಡ ಅವರು ಹಲವಾರು ಜನಪದ ಹಾಡುಗಳನ್ನು ಮತ್ತು ತಾರ್ಲೆ ಕುಣಿತವನ್ನು ಪ್ರಸ್ತುತಪಡಿಸಿದರು.
ಕುಮಾರಿ ಚಿತ್ತಾರ ಪ್ರಾರ್ಥನೆ ಗೀತೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ ಬಿ.ಪಿ. ಸಂಪತ್ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಡಾ.ಕೆ.ವಿ.ನಾಗರಾಜಪ್ಪ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಸತೀಶ ನಾಯಕ್ ವಂದಿಸಿದರು. ದಿವ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.