ಕುಮಟಾ: ಬುಧವಾರದ ಸಂತೆಯ ವ್ಯಾಪಾರಕ್ಕಾಗಿ ಹೊರ ತಾಲೂಕುಗಳಿಂದ ಬರುವ ವ್ಯಾಪಾರಸ್ಥರಿಂದ ಸ್ಥಳೀಯ ಮಾರಾಟಗಾರರಿಗೆ ಸ್ಥಳದ ಕೊರತೆಯುಂಟಾಗುತ್ತಿದೆ. ಇಂತಹ ಒಂದು ಬೃಹತ್ ಮಾರುಕಟ್ಟೆ ನಿರ್ಮಿಸಿರುವುದು ಸ್ವಾಗತಾರ್ಹ. ಆದರೆ ಸ್ಥಳೀಯ ಕುಮಟಾ, ಗೋಕರ್ಣದ ಮಾರಾಟಗಾರರಿಗೆ ಮಾರುಕಟ್ಟೆಯ ಮುಂದಿನ ಭಾಗದ 50 ಅಂಗಡಿಗಳ ಸ್ಥಳಗಳನ್ನು ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆಗ್ರಹಿಸಿದರು.
ಎಪಿಎಮ್‍ಸಿ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಂತೆಮಾರುಕಟ್ಟೆಯಲ್ಲಿ ಸ್ಥಳೀಯ ವ್ಯಾಪಾರಸ್ಥರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಅವರು ಈ ಆಗ್ರಹವನ್ನು ಎಪಿಎಮ್‍ಸಿ ಗೆ ಸಲ್ಲಿಸಿದರು.
ಕ.ರಾ.ವೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಸ್ಥಳೀಯ ವ್ಯಾಪಾರಸ್ಥರ ಅನುಕೂಲಕ್ಕಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಈ ಕುರಿತು ಎಪಿಎಮ್‍ಸಿ ಅಧ್ಯಕ್ಷರಾದ ಧೀರೂ ಶಾನಭಾಗ ಇವರನ್ನು ಸಂಪರ್ಕಿಸಿ, ಸ್ಥಳೀಯ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮಾರುಕಟ್ಟೆಯ ಮುಂದಿನ ಭಾಗದ 40-50 ಅಂಗಡಿಗಳ ಸ್ಥಳವನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕ.ರಾ.ವೆ ಯುವಘಟಕದ ಅಧ್ಯಕ್ಷ ನಾಗರಾಜ ನಾಯ್ಕ, ತಾಲೂಕಾಧ್ಯಕ್ಷ ತಿಮ್ಮಪ್ಪ ನಾಯ್ಕ, ಗೋಕರ್ಣ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಸದಸ್ಯ ನಾಗರಾಜ ತಾಂಡೇಲ ಸೇರಿದಂತೆ ಸ್ಥಳೀಯ ವ್ಯಾಪಾರಸ್ಥರು ಉಪಸ್ಥಿತರಿದ್ದರು.