ಯಲ್ಲಾಪುರ: ತಾಲೂಕಿನ ಗಡಿ ಪ್ರದೇಶದ ಅಂಕೋಲಾ ತಾಲೂಕು ವ್ಯಾಪ್ತಿಯ ಆರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಗದೇ ಇರುವುದರಿಂದ ಅತ್ತಿಸವಲು ಸಮೀಪದ ಜಡ್ಡಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಅಂಕೋಲಾ ಹೆಸ್ಕಾಂ ಎಇಇ ಅಧಿಕಾರಿಯನ್ನು ಅಲ್ಲಿನ ನಾಗರಿಕರು ತೀವೃ ತರಾಟೆಗೆ ತೆಗೆದುಕೊಂಡರು.   

  ತಾಲೂಕಿನ ಗಡಿ ಪ್ರದೇಶವಾದ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಮೆಗುಳೆ, ಲೆಕ್ಕೆಮನೆ, ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಅತ್ತಿಸವಲು, ಕಬ್ಬಿನಗುಳೆ ಮುಂತಾದ ಗ್ರಾಮಗಳ ನಿವಾಸಿಗಳು ಸ್ವಾತಂತ್ರ್ಯ ಲಭಿಸಿ ಇಷ್ಟು ವರ್ಷಗಳು ಕಳೆದರೂ ಮೂಲಭೂತ ಸೌಕರ್ಯವಾದ ವಿದ್ಯುತ್ ಸಂಪರ್ಕವಿಲ್ಲದೇ ಪರದಾಡುತ್ತಿದ್ದಾರೆ. ಕಾಟಾಚಾರಕ್ಕೆ ಕಂಬ, ತಂತಿ, ಟ್ರಾನ್ಸ್‍ಫಾರ್ಮರ್‍ಗಳನ್ನು ಜೋಡಿಸಿ ಸುಮಾರು ನಾಲ್ಕು ವರ್ಷಗಳೇ ಕಳೆದರೂ ಈ ಗ್ರಾಮಕ್ಕೆ ಸಂಪರ್ಕ ನೀಡಲು ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಈ ಕಡೆ ಮುಖ ಮಾಡಿರಲಿಲ್ಲ. ಈ ಕುರಿತು ಹಲವಾರು ಮಾಧ್ಯಮಗಳು ಸಮಗ್ರ ವರದಿ ಪ್ರಕಟಿಸಿದ ಬೆನ್ನಲ್ಲಿ ಅಲ್ಲಿನ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡರು. ನಂತರ ಸ್ಥಳಕ್ಕಾಗಮಿಸಿದ ಕಾರವಾರ ಕಾರ್ಯಪಾಲನ ವಿಭಾಗದ ಅಭಿಯಂತರೆ ರೋಷನಿ ಹಾಗೂ ಅಂಕೋಲಾ ಹೆಸ್ಕಾಂ ಸಹಾಯಕ ಇಂಜೀನಿಯರ್ ವಿಶ್ವನಾಥ ಮತ್ತು ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಯಾವ ಕಡೆ ಎಷ್ಟೆಷ್ಟು ಕಂಬಗಳು ಮುರಿದಿದೆ. ಯಾವ ಮನೆಗಳಿಗೆ ಮೀಟರ್ ಅಳವಡಿಕೆಯಾಗಿದೆ ಎಂಬುದನ್ನು ಪರೀಕ್ಷಿಸಿ, ಹರಿದು ಬಿದ್ದ ತಂತಿಗಳ ಮರು ಜೋಡಣೆ ಮಾಡಿ ಮೀಟರ್ ಅಳವಡಿಕೆಯಾದ ಮನೆಗಳಿಗೆ 15 ದಿನದೊಳಗೆ ವಿದ್ಯುತ್ ನೀಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.  ಅಸಮರ್ಪಕ ಕಾಮಗಾರಿಗೆ ಯಾರು ಹೊಣೆ? ಅಂಕೋಲಾ ತಾಲೂಕಿನ ಶಮೆಗುಳೆ, ಲೆಕ್ಕೆಮನೆ, ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಅತ್ತಿಸವಲು, ಕಬ್ಬಿನಗುಳೆ ಗ್ರಾಮದ ನಿವಾಸಿಗಳ ಮನೆಗೆ ವಿದ್ಯುತ್ ನೀಡಲು ಅಳವಡಿಸಿದ್ದ ಸುಮಾರು 25 ಕಂಬಗಳು ಸಂಪರ್ಕ ನೀಡುವ ಮೊದಲೇ ಮುರಿದು ಬಿದ್ದಿದ್ದು, ಟ್ರಾನ್ಸ್‍ಫಾರ್ಮರ್ ಸಹ ಕೆಟ್ಟು, ಅದು ಸಹ ಮುರಿದು ಬೀಳುವ ಹಂತ ತಲುಪಿದೆ. ಸರ್ಕಾರದ ಉದ್ದೇಶವನ್ನು ಈಡೇರಿಸುವ ಇಲಾಖೆಗಳು ಯಾಕೆ ಇಂತಹ ಕಳಪೆ ಗುಣಮಟ್ಟದ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಗೆ ಕೆಲಸ ನೀಡುತ್ತದೆ. ಅಧಿಕಾರಿಗಳು ಕಾಟಾಚಾರಕ್ಕೆ ಇಂತಹ ಕಾಮಗಾರಿ ನಡೆಸಿ ಹಣ ಗುಳ್ಳುಂ ಮಾಡುವತ್ತ ತನ್ನ ಕೆಲಸ ಮಾಡುತ್ತಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಹಾಗೂ ಆ ವೇಳೆ ಇದ್ದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಸಮರ್ಪಕ ಉತ್ತರ ಪಡೆದು, ಸರ್ಕಾರಕ್ಕೆ ಆದ ನಷ್ಟವನ್ನು ಅವರೇ ಭರಿಸುವಂತೆ ಮಾಡಬೇಕು ಎಂದು ಆ ಭಾಗದ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.     ಉತ್ತರ ನೀಡಲು ತಡಬಡಾಯಿಸಿದ ಎ.ಇ.ಇ!ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಅಂಕೋಲಾ ಹೆಸ್ಕಾಂ ಎ.ಇ.ಇ ವಿಶ್ವನಾಥ ಅವರನ್ನು ಪ್ರತಿಭಟನಾ ನಿರತರು ಕಳಪೆ ಗುಣಮಟ್ಟದಲ್ಲಿ ಅಳವಡಿಸಿದ ವಿದ್ಯುತ್ ಕಂಬಗಳು ಎಷ್ಟು ದಿನ ಬಾಳಿಕೆ ಬರುತ್ತದೆ ಕರೆಂಟ್ ನೀಡಿದ ನಂತರ ಕಂಬಗಳು ಮುರಿದು ಬಿದ್ದರೆ ಹಾಗೂ ಟ್ರಾನ್ಸ್‍ಫಾರ್ಮರ್ ಒಂದೆಡೆ ವಾಲಿದ್ದು, ಅದು ಉರುಳಿ ಬಿದ್ದರೆ ಸರ್ಕಾರಕ್ಕೆ ನಷ್ಟವಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಲು ತಡಬಡಾಯಿಸಿದ ಎ.ಇಇ, ಅದನ್ನು ನಾವು ಹೇಗೇ ಬೇಕಾದರೂ ಮಾಡುತ್ತೇವೆ ಎಂದು ಹೇಳಿದರು. 

RELATED ARTICLES  ರಾಜ್ಯದ ಕೋಮು ಸೌಹಾರ್ದ ಕದಡುವ ಕೆಲಸವಾಗಬಾರದು : ಸಿ.ಎಂ

     ವಿದ್ಯುತ್ ಸಂಪರ್ಕಕ್ಕಾಗಿ ನಡೆಸಿದ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಕಾರವಾರ- ಅಂಕೋಲಾ ವಿಭಾಗದ ಕಾರ್ಯಪಾಲನ ಅಭಿಯಂತರೆ ರೋಷನಿ ಪೆಡ್ನೆಕರ್, ಸಾರ್ವಜನಿಕರೊಂದಿಗೆ ಚರ್ಚಿಸಿ, ಸ್ವತಃ ಕಂಬ ಮುರಿದು ಬಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಸಂಪೂರ್ಣ ಮಾಹಿತಿ ಪಡೆದು, ಆದಷ್ಟು ಶೀಘ್ರದಲ್ಲಿ ವಿದ್ಯುತ್ ನೀಡುವ ಭರವಸೆ ನೀಡಿದ ನಂತರ ಸಾರ್ವಜನಿಕರು ಉಪವಾಸ ಸತ್ಯಾಗ್ರಹ ಕೈಬಿಟ್ಟರು.   ಈ ವೇಳೆ ಗಣಪತಿ ಗಾಂವ್ಕರ ವಾಗಳ್ಳಿ, ಮೋಹನ  ವಾಸು ಗೌಡ, ಚಿನ್ನ ಗೌಡ, ಗೋವಿಂದ ಕುಣಬಿ, ಲಕ್ಷ್ಮಣ ಗೌಡ, ಸದಾ ಕುಣಬಿ, ಬೆಳ್ಳ ಕುಣಬಿ, ರಾಮಾ ಕುಣಬಿ, ಸಂತೋಷ ಕುಣಬಿ, ಪಾರ್ವತಿ ಕುಣಬಿ, ರಾಧಾ ಕುಣಬಿ, ಲಲಿತಾ ಗೌಡ ಸೇರಿದಂತೆ ನೂರಾರು ಸಂಖ್ಯೆಯ ಗ್ರಾಮಸ್ಥರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಶ್ರೀಕಾಂತ, ಮನೋಜ ಡಿ, ನಾಗರಾಜ ಗೌಡ ಬಂದೋವಸ್ತ ನೀಡಿದರು.

RELATED ARTICLES  ಕುಮಟಾ ತಾಲೂಕು ೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ದಯಾನಂದ ತೊರ್ಕೆ.