ಕುಮಟಾ:ಜಮ್ಮು ಕಾಶ್ಮೀರದ ಬಳಿ ಭಾರತೀಯ ವೀರಯೋಧರ ಹತ್ಯೆ ಮಾಡಿರುವುದು ನಿಜಕ್ಕೂ ಹೇಯ ಕೃತ್ಯ, ಖಂಡನೀಯ, ಇಂಥದ್ದು ಇನ್ನೆಂದು ಆಗಬಾರದು ಎಂದು ಎಲ್ಲೆಡೆ ಖಂಡನೆಗಳು ವ್ಯಕ್ತವಾಗುತ್ತಿದ್ದರೆ. ಕುಮಟಾದ ಜನತೆ ಈ ಸಂಬಂಧ ದಾಳಿ ನಡೆಸಿದ ಪ್ರತೀಕಾರ ತೀರಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸುವ ಹಿನ್ನೆಲೆಯಲ್ಲಿ ಫೆ.16ರಂದು ಬೆಳಿಗ್ಗೆ 11 ಗಂಟೆಗೆ ಪಕ್ಷಾತೀತವಾದ ಬೃಹತ್ ಮೆರವಣಿಗೆ ನಡೆಸಿ, ಪ್ರಧಾನಿಯವರಿಗೆ ಮನವಿ ಸಲ್ಲಿಸುವತ್ತ ಮುಂದಾಗಿದೆ.
ಈ ಕುರಿತು ನ್ಯಾಯವಾದಿ ಆರ್.ಜಿ.ನಾಯ್ಕ, ಶಾಸಕ ದಿನಕರ ಶೆಟ್ಟಿ, ಸೂರಜ್ ನಾಯ್ಕ, ಜೆಡಿಎಸ್ ಪಕ್ಷದ ಮಂಜುನಾಥ ಪಟಗಾರ, ಕನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಭಾಸ್ಕರ ಪಟಗಾರ, ಗಣೇಶ ಭಟ್ಟ ಬಗ್ಗೋಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ,ಪುರಸಭೆ ಸದಸ್ಯ ಎಂ.ಟಿ.ನಾಯ್ಕ, ಹರೀಶ ಶೆಟ್ಟಿ, ವಿನೋದ ಪ್ರಭು, ಚೇತೇಶ ಶಾನಭಾಗ ಹಾಗೂ ಇನ್ನಿತರ ಪ್ರಮುಖರು ಇಂದು ಸುದ್ದಿಗೋಷ್ಟಿ ನಡೆಸಿದರು.
ಜಮ್ಮು-ಕಾಶ್ಮೀರದಲ್ಲಿ ನಡೆದ ಘಟನೆ ಖಂಡಿಸಿದ ಇವರು. ಚುನಾವಣೆ, ಅಭಿವೃದ್ದಿ ಒಂದು ವರ್ಷ ಮುಂದಕ್ಕೆ ಹೋದರು ಪರವಾಗಿಲ್ಲ. ಭಾರತೀಯ ಯೋಧರನ್ನು ಹೇಡಿತನದಿಂದ ಹತ್ಯೆ ಗೈಯುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿಕಲಿಸುವ ರೀತಿಯದ್ದಾದ ಕಠಿಣ ಕ್ರಮವನ್ನು ಪ್ರಧಾನಮಂತ್ರಿಗಳು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಫೆ.18 ರಂದು ಮಾಸ್ತಿಕಟ್ಟೆಯಿಂದ ನಡೆಯುವ ಬೃಹತ್ ಮೆರವಣಿಗೆಯಲ್ಲಿ ದೇಶಾಭಿಮಾನಿಗಳೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಧಾನಮಂತ್ರಿಗಳಿಗೆ ಹಾಗೂ ನಮ್ಮ ಸೈನಿಕರಿಗೆ ನೈತಿಕ ಬೆಂಬಲ ನೀಡಬೇಕು ಎಂದು ವಿನಂತಿಸಿದರು.