ಕುಮಟಾ:ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಕ್ಷರಕಲಾ ಯುವಕ ಸಂಘದ ಆಶ್ರಯದಲ್ಲಿ ಕತಗಾಲಿನ ಎಸ್‍ಕೆಪಿ ಪ್ರೌಢಶಾಲೆಯಲ್ಲಿ ಕುಮಟಾ ತಾಲೂಕಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮಕ್ಕೆ ದೀಪ ಬೆಳಗಿ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಅಭಿಮಾನಿಗಳಿಂದ, ಕನ್ನಡ ಸಾಹಿತ್ಯ ಸಮ್ಮೇಳನದಿಂದ ಹಾಗೂ ಸರಕಾರದ ಪ್ರಯತ್ನದ ಫಲವಾಗಿ ಇಂದಿಗೂ ಕನ್ನಡ ನಮ್ಮ ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದೆ. ಮುಂದಿನ ದಿನದಲ್ಲಿಯೂ ಕೂಡ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.
ಸಾಹಿತಿ ಮಹಾಬಲಮೂರ್ತಿ ಕೊಡ್ಲಕೆರೆ ಸಮ್ಮೇಳನಾಧ್ಯಕ್ಷತೆ ವಹಿಸಿ, ದಟ್ಟ ಅರಣ್ಯ, ಬೆಟ್ಟ, ಹೊಳೆ, ನದಿಗಳ ನಾಡಾಗಿದ್ದ ಉತ್ತರ ಕನ್ನಡ ಈಗ ಇದರ ಒಡಲು ಬೆಂಕಿಯ ಕಡಲೋ ಎನ್ನುವ ಉಗ್ರ ಸ್ವರೂಪ ಪಡೆದಿದೆ. ಸಮೃದ್ಧಿಯನ್ನು ಕಂಡಿದ್ದ ನಮ್ಮ ಕುಮಟಾ ತಾಲೂಕು ಎಲ್ಲೋ ಒಂದೆಡೆ ಸೊರಗಿದೆ. ಸೊರಗಿರುವ ನೆಲದಲ್ಲಿ ಒಳಿತನ್ನು ನಿರೀಕ್ಷಿಸಲು ಸಾಧ್ಯವೆ ಎಂಬ ಪ್ರಶ್ನೆ ಏಳುತ್ತದೆ.
ಕುಮಟಾ ತಾಲೂಕಿನ ಗೋಕರ್ಣ, ಇದು ನನ್ನ ಉರು ಎಂಬುದಕ್ಕೆ ಹೆಮ್ಮೆ ಇದೆ. ಆದರೆ ಈ ಊರಿನ ವಿದ್ವತ್‍ಪೂರ್ಣ ವಿದ್ವಾಂಸರನ್ನು ತಿಳಿದವರು, ಅಂದಿನ ಸರಕಾರದ ಇವರನ್ನು ಕೇಳುವ, ಕೇಳಿದರೆ ಮಾಡಲಾರೆ ಎನ್ನುವವರು ಆಡಳಿತದಲ್ಲಿದ್ದರೂ, ಈ ವಿದ್ವಾಂಸರ ಬೆಲೆ ಏನು ಎಂಬುದನ್ನು ತಿಳಿಸಿ ಅಪರೂಪದ ಪುರಾಣ, ವೇದ, ಉಪನಿಷತ್ತು, ಆಗಮ ಶಾಸ್ತ್ರ ನಿಕ್ಷೇಪಗಳನ್ನು ಜಗತ್ತಿಗೇ ತಿಳಿಸಿಕೊಡಬೇಕಾದ ಜ್ಞಾನ ಕೇಂದ್ರಗಳನ್ನು ತೆರೆಸಲು ಪ್ರಯತ್ನ ಮಾಡಬಹುದಿತ್ತು. ಆದರೆ ಗೋಕರ್ಣ ನಿರಂತರವಾದ ಟೀಕೆಗೆ ಒಳಗಾಗುವ ಅಗ್ನಿ ಪರೀಕ್ಷೆಯನ್ನು ಎದುರಿಸಿತು. ಆದರೆ ಹಲವರು ಈ ಕ್ಷೇತ್ರದ ಇನ್ನೊಂದು ಮುಖದ ಪರಿಚಯ ತಿಳಿದವರೂ ತುಟಿ ಬಿಡಲಾರದೆ ಕುಳಿತರು ಎಂದರು.
ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ರೋಹಿಣಿ ಭಟ್ಟ ಅವರು ಬರೆದ ರಾಗ ಕೋಶ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಪುಸ್ತಕ ಮಳಿಗೆಯನ್ನು ಜಿ.ಪಂ.ಸದಸ್ಯ ಗಜಾನನ ಪೈ ಉದ್ಘಾಟಿಸಿದರು.
ವೇದಿಕೆಯಲ್ಲಿ ತಾಲೂಕಾ ಪಂಚಾಯತ ಅಧ್ಯಕ್ಷೆ ವಿಜಯಾ ಪಟಗಾರ, ತಾ.ಪಂ. ಸದಸ್ಯೆ ಅನಸೂಯಾ ಅಂಬಿಗ, ದಿವಗಿ ಗ್ರಾ.ಪಂ.ಅಧ್ಯಕ್ಷ ಕೃಷ್ಣ ಗೌಡ, ಮಾಜಿ ಜಿ.ಪಂ.ಸದಸ್ಯ ಹೊನ್ನಪ್ಪ ನಾಯಕ, ಅಳಕೋಡ ಗ್ರಾ.ಪಂ.ಉಪಾಧ್ಯಕ್ಷೆ ಲಲಿತಾ ಲೂಪೀಸ್, ಅಕ್ಷರ ಕಲಾ ಯುವಕ ಸಂಘದ ಅಧ್ಯಕ್ಷ ಕೃಷ್ಣಾನಂದ ಭಟ್ಟ, ರಾಷ್ಟ್ರ ಪ್ರಶಸ್ತಿ ವಿಜೇತೆ ಹಾಗೂ ಸಾಹಿತಿ ಶಾರದಾ ಭಟ್ಟ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ಪತ್ರಕರ್ತ ವಸಂತ ಭಟ್ಟ, ಸಾಹಿತಿ ವೇಣುಗೋಪಾಲ ಮದ್ಗುಣಿ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶ್ರೇಯಾ ಶೆಟ್ಟಿ ಸೈನಿಕ ಗೀತೆ ಹಾಡಿದಳು. ರೋಟರಿ ನಾದಶ್ರೀ ಕಲಾ ಕೇಂದ್ರದವರು ಸ್ವಾಗತ ನೃತ್ಯ ನೆರವೇರಿಸಿದರು. ಉಪ್ಪಿನ ಪಟ್ಟಣ ಹಿ.ಪ್ರಾ. ಶಾಲೆಯ ಮಕ್ಕಳು ನಾಡಗೀತೆಗೆ ನರ್ತಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ದಯಾನಂದ ತೊರ್ಕೆ ಧ್ವಜ ಹಸ್ತಾಂತರಿಸಿದರು. ಕಸಾಪ ತಾಲೂಕಾ ಅಧ್ಯಕ್ಷ ಡಾ.ಶ್ರೀಧರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಆಶಯ ನುಡಿಗಳನ್ನಾಡಿದರು. ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ ಸ್ವಾಗತಿಸಿದರು.