ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲದ ಸಂಯೋಜನೆಯಲ್ಲಿ
ತಾಯಿ ಭಾರತಿಯ ಸೇವಾನಿರತರಾಗಿರುವಾಗ ಕಾಶ್ಮೀರ ಪುಲ್ವಾಮಾದಲ್ಲಿ ಉಗ್ರರ ದುಷ್ಕೃತ್ಯದಿಂದ ವೀರ ಮರಣವನ್ನು ಪಡೆದು ಹುತಾತ್ಮರಾದ ಭಾರತಾಂಬೆಯ ಮಕ್ಕಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣಾ ಸಭೆಯು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ 17.02. 2019 ರಂದು ಜರಗಿತು.
ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ವೀರ ಸೈನಿಕರ ಭಾವಚಿತ್ರಕ್ಕೆ ನಲುವತ್ತೆರಡು ಹಣತೆಗಳನ್ನು ಹಚ್ಚಲಾಯಿತು
ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲ ಅಧ್ಯಕ್ಷೆ ಶ್ರೀಮತಿ ಈಶ್ವರಿಶ್ಯಾಮ ಭಟ್ ಬೇರ್ಕಡವು, ಹವ್ಯಕ ಮಹಾ ಮಂಡಲ ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ, ನಿವೃತ್ತ ಸೈನಿಕರೂ ಪೆರಡಾಲ ವಲಯ ಅಧ್ಯಕ್ಷರೂ ಆಗಿರುವ ಶ್ರೀಹರಿಪ್ರಸಾದ್ ಪೆರ್ಮುಖ ಇವರು ತಮ್ಮ ಶ್ರದ್ಧಾಂಜಲಿ ನುಡಿಗಳನ್ನಾಡಿದರು.
ಮುಳ್ಳೇರ್ಯ ಹವ್ಯಕ ಮಂಡಲ, ಮಂಡಲಾಂತರ್ಗತ ವಲಯಗಳು, ಶಿಕ್ಷಣ ಸಂಸ್ಥೆಗಳು, ಮಹಿಳೋದಯ, ಗೋಶಾಲೆ, ಸಮರಸ ಟ್ರಸ್ಟ್ ಮೊದಲಾದ ಶ್ರೀಮಠದ ಅಂಗಸಂಸ್ಥೆಗಳ ಸದಸ್ಯರ ಒಮ್ಮತದಲ್ಲಿ ಪ್ರಕರಣದ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಸೈನಿಕ ನಿಧಿಗೆ ಸಮರ್ಪಣೆಯನ್ನು ಮಾಡಲಾಯಿತು.
ಮಂಡಲಾಧ್ಯಕ್ಷ ಪ್ರೊ ಶ್ರೀಕೃಷ್ಣ ಭಟ್ ಇವರು ಸಾಂದರ್ಭಿಕ ನುಡಿಗಳನ್ನಾಡಿದರು.
ಸೈನಿಕರಿಗೆ ಆತ್ಮಸ್ತೈರ್ಯವನ್ನು ಬಲಪಡಿಸಲು ಪ್ರಾರ್ಥನೆ ಮಾಡುತ್ತಾ ಸಾಮೂಹಿಕ ರಾಮಜಪ, ಭಜನ ರಾಮಾಯಣ, ಮಾತೃ ವಿಭಾಗದವರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ ಇವು ವಿದ್ಯುಕ್ತವಾಗಿ ಜರಗಿದವು.
ಶಾಂತಿಮಂತ್ರ, ಧ್ವಜಾವರೋಹಣ ಶಂಖನಾದವಾಗಿ ಸಭೆ ಮುಕ್ತಾಯವಾಯಿತು.