ಶ್ರೀನಗರ : ಕಣಿವೆ ರಾಜ್ಯದಲ್ಲಿ ಸತತ 19 ಗಂಟೆಗಳ ಕಾರ್ಯಾಚರಣೆ ನಡೆಸಿ ಅಬ್ದುಲ್ ರಶೀದ್ ಘಾಜಿ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಈ ವೇಳೆ ನಾಲ್ಕು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಜೈಷ್-ಇ-ಮೊಹ್ಮದ್ ಭಯೋತ್ಪಾದನಾ ಸಂಘಟನೆಯ ಕಮಾಂಡರ್ ಆಗಿರುವ ಅಬ್ದುಲ್ ರಶೀದ್ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಬಾಂಬ್ ತಯಾರಿಕೆಯಲ್ಲಿ ಈತನದ್ದು ಎತ್ತಿದ ಕೈ. ಜೆಇಎಂ ಮುಖ್ಯಸ್ಥ ಮಸೂದ್ ಅಜರ್ನ ನಂಬಿಕಸ್ತ ಬಂಟನಾಗಿದ್ದ. ಈಗ ಈತನ್ನು ಹೊಡೆದುರುಳಿಸುವ ಮೂಲಕ ಮುಂದಾಗಬಹುದಾದ ದೊಡ್ಡ ಅಪಾಯವನ್ನು ಸೇನೆ ತಪ್ಪಿಸಿದೆ. ರಶೀದ್ ಘಾಜಿ ಜೊತೆ ಇದ್ದ ಕುಮ್ರಾನ್ ಕುಜ್ಜರ್ನನ್ನು ಯೋಧರು ಕೊಂದು ಹಾಕಿದ್ದಾರೆ. ಗುರುವಾರ ನಡೆದ ಭಾರತೀಯ ಸೇನೆ ಮೇಲೆ ನಡೆದ ದಾಳಿ ಪ್ರದೇಶದಿಂದ ಕೇವಲ 10 ಕಿ.ಮೀ. ದೂರದಲ್ಲಿ ಇವರು ಅಡಗಿಕೊಂಡಿದ್ದರು ಎನ್ನಲಾಗಿದೆ. ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಮೇಲೆ ಉಗ್ರರು ನಡೆಸಿದ ದಾಳಿಗೆ ಭಾರತ ಮೊದಲ ಪ್ರತೀಕಾರ ತೀರಿಸಿಕೊಂಡಿದೆ.
ಪಿಂಗ್ಲಾನ್ ಭಾಗದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆ ಭಾರತೀಯ ಸೇನೆ ಭಾನುವಾರ ಕಾರ್ಯಾಚರಣೆಗೆ ಇಳಿದಿತ್ತು. ಸತತ 19 ಗಂಟೆಗಳ ಕಾಲ ಕಾರ್ಯಾಚರಣೆ ಮುಂದುವರಿದಿತ್ತು. ಸೋಮವಾರ ಬೆಳಗಿನಜಾವ ಉಗ್ರರು ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಉಗ್ರರು ಅಡಗಿದ್ದ ಪ್ರದೇಶವನ್ನು ಸೈನಿಕರು ಸಂಪೂರ್ಣವಾಗಿ ಸುತ್ತುವರೆದಿದ್ದರು. ಕೊನೆಗೂ ಅವರನ್ನು ಹತ್ಯೆ ಮಾಡಲು ಸೇನೆ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ 4 ಸೈನಿಕರು ಹುತಾತ್ಮರಾಗಿದ್ದಾರೆ. ಕೆಲ ಯೋಧರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.