ಕುಮಟಾ: ಹಿರಿಯ ಕವಿ ರಂಜಾನ್ ದರ್ಗಾ ಅವರು ತಮ್ಮ ಕವಿತೆಯೊಂದರಲ್ಲಿ ‘ಬಂದೂಕಿನ ಬಾಯಲ್ಲಿ ಗುಬ್ಬಿ ಗೂಡು ಕಟ್ಟಬೇಕು’ ಎಂಬ ಆಶಯದೊಂದಿಗೆ ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಹೇಳಿದ್ದರು. ಆದರೆ ನಾವಿಂದು ಆ ಸಾಲುಗಳನ್ನು ಸ್ವಲ್ಪ ಪಕ್ಕಕ್ಕಿಟ್ಟು ನಮ್ಮ ದೇಶದ 49 ಸೈನಿಕರನ್ನು ಬಲಿತೆಗೆದುಕೊಂಡ ಪಾಕಿಸ್ತಾನ ಬೆಂಬಲಿತ ಉಗ್ರರ ಎದೆಗೆ ಬಂದೂಕಿನ ನಳಿಕೆ ಇಟ್ಟು ಉತ್ತರ ಕೊಡಬೇಕಾಗಿದೆ. ಬಂದುಕಿನ ಬಾಯಲಿ ಗುಬ್ಬಿ ಗೂಡು ಕಟ್ಟಿದ್ದು ಸಾಕು. ಇದು ಇಂದಿನ ಸಂದರ್ಭದಲ್ಲಿ ಭಾರತದ ಎಲ್ಲ ಸಾಹಿತಿಗಳ ಅನಿವಾರ್ಯವಾರ್ಯದ ಮತ್ತು ತುಂಬ ನೋವಿನ ಧ್ವನಿಯೂ ಹೌದು. 67 ವರ್ಷಗಳ ಹಿಂದೆ ನಮ್ಮ ದೇಶದ ನೆಲವೇ ಆಗಿದ್ದ ಪಾಕಿಸ್ತಾನದಲ್ಲಿ ಇಂದು ಕ್ರೂರ ರಾಕ್ಷಸರು ಹುಟ್ಟಿಕೊಂಡು ಸಾಲುಸಾಲಾಗಿ ನಮ್ಮ ಸೈನಿಕರ ರಕ್ತದಲ್ಲಿ ಆಟವಾಡುತ್ತಿರುವುದರಿಂದ ಅಂಥವರಿಗೆ ತಕ್ಕ ಪಾಠ ಬಂದೂಕಿನ ಮೂಲಕವೇ ಕಲಿಸಬೇಕು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಕುಮಟಾ ಜನತೆಯ ಮನದಿಚ್ಛೆ ಎಂಬಂತೆ ಆಗ್ರಹಿಸಿದರು.
ಪಕ್ಷಾತೀತವಾಗಿ, ಜಾತ್ಯಾತಿತವಾಗಿ, ಕುಮಟಾದ ಸಮಸ್ತ ನಾಗರಿಕರು ಇಂದು ಹಲವು ಸಂಘಟನೆಗಳ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಷ್ಟ್ರಪತಿ ಹಾಗೂ ಪ್ರಧಾನಿಯವರಿಗೆ ಉಪವಿಭಾಗಾಧಿಕಾರಿ ಮೂಲಕ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಚ್ಚೆದೆಯ ವೀರ ಯೋಧರ ಬಲಿದಾನಕ್ಕೆ ಶೃದ್ಧಾಂಜಲಿ ಹಾಗೂ ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರಕ್ಕಾಗಿ ಆಗ್ರಹಿಸಿ ಮೆರವಣಿಗೆ ನಡೆಸಲಾಯಿತು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಸದಾ ಶಾಂತಿ ಸೌಹಾರ್ದವನ್ನು ಭಾರತ ದೇಶ ಬಯಸುತ್ತದೆ. ಆದರೆ ಇದನ್ನು ಅರಿಯದ ಭಯೋತ್ಪಾದಕ ದೇಶ ಪಾಕಿಸ್ತಾನ ನಮ್ಮ ಸೈನಿಕರನ್ನು ಕೊಲ್ಲುತ್ತಿದೆ. ಮೊನ್ನೆಯಷ್ಟೆ ಜಮ್ಮು-ಕಾಶ್ಮೀರದಲ್ಲಿ ನಡೆದ ಕೃತ್ಯದಿಂದ ಪಾಕಿಸ್ತಾನ ಭಾರತೀಯರ ಕಿಚ್ಚನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಇದರಿಂದ ದೇಶದ ಜನ ತಾಳ್ಮೆ ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಜೊತೆ ಶಾಂತಿ ಮಂತ್ರ ಪಠಿಸುವುದನ್ನು ಬಿಟ್ಟು ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಉಗ್ರ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಪಾಕಿಸ್ತಾನವೆಂಬ ಕೆಟ್ಟ ದೇಶವನ್ನು ನಿರ್ನಾಮ ಮಾಡುವುದೇ ಉತ್ತಮ ಎಂದರು.
ಯುವ ಮುಖಂಡ ಸೂರಜ ನಾಯ್ಕ ಸೋನಿ, ಆರ್. ಜಿ. ನಾಯ್ಕ, ಹರೀಶ ಶೇಟ್, ವಕೀಲ ಆರ್.ಜಿ.ನಾಯ್ಕ ಇನ್ನಿತರರು ಮಾತನಾಡಿದರು. ಜಿ.ಪಂ ಸದಸ್ಯರಾದ ರತ್ನಾಕರ ನಾಯ್ಕ, ಗಜಾನನ ಪೈ, ಪ್ರದೀಪ ನಾಯಕ ದೇವರಬಾವಿ, ವಿನೋದ ಪ್ರಭು, ಮಂಜುನಾಥ ಪಟಗಾರ, ಗಜು ನಾಯ್ಕ, ತಾರಾಗೌಡ, ವಿನಯಾ ಜಾರ್ಜ, ಅನಿತಾ ಮಾಪಾರಿ, ಹೇಮಂತಕುಮಾರ ಗಾಂವಕರ, ಡಾ. ಜಿ.ಜಿ.ಹೆಗಡೆ, ಎಬಿವಿಪಿ ಮುಖಂಡರು, ಜಮಾತೆ ಮುಸ್ಲಿಂ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು, ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ನಾಗರಿಕರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.