ಕುಮಟಾ: ಕುಮಟಾ ತಾಲೂಕಿನ ಸಂಡಳ್ಳಿ-ಮತ್ತಳ್ಳಿ ಗ್ರಾಮಸ್ತರು ಸರಿಯಾದ ರಸ್ತೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಅನುಕೂಲವಾಗುವಂತೆ ಮತ್ತು ಅತೀ ತುರ್ತು ಚಿಕಿತ್ಸೆ ಅಗತ್ಯ ಇರುವವರಿಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುವಂತೆ ಶಿರಶಿ ಮುಖ್ಯ ರಸ್ತೆ ಮಾಸ್ತಿಹಳ್ಳದಿಂದ 8 ಕಿ.ಮೀ ಡಾಂಬರ್ ರಸ್ತೆ ಆಗಬೇಕು. ಮೊಬೈಲ್ ನೆಟ್ ವರ್ಕ್ ಇಲ್ಲದೇ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಾಕಾಂಕ್ಷಿ ಯುವಕರಿಗೆ ಮಾಹಿತಿ ತಂತ್ರಜ್ಞಾನದ ಕೊರತೆಯಿಂದ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವುದನ್ನು ತಪ್ಪಿಸಲು ಈ ಲೋಕ ಸಭಾ ಚುನಾವಣೆಯ ಒಳಗೆ ಎಲ್ಲಾ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡಬೇಕು. ಇಲ್ಲದೇ ಇದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ತರೆಲ್ಲಾ ಸೇರಿ ಮಾನ್ಯ ಪ್ರಧಾನ ಮಂತ್ರಿಗಳಿಗೆ, ಮಾನ್ಯ ಆಯುಕ್ತರು, ಚುನಾವಣಾ ಆಯೋಗ ಬೆಂಗಳೂರು, ಕಾರ್ಯದರ್ಶಿಗಳು, ಚುನಾವಣಾ ಆಯೋಗ ಬೆಂಗಳೂರು, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ, , ಉಸ್ತುವಾರಿ ಸಚಿವರಿಗೆ, ಕೆಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದರು.
ಈ ಹಳ್ಳಿಯ ಜನರ ಸಮಸ್ಯೆಗೆ ಸ್ಪಂದಿಸಿದ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂಬಂಧ ಪಟ್ಟ ಇಲಾಖೆಗೆ ಪತ್ರ ಬರೆದು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿ ಶೀಘ್ರದಲ್ಲಿ ನಿಮ್ಮ ಸಮಸ್ಯೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಡಳ್ಳಿ ಗ್ರಾಮಸ್ಥರ ಪರವಾಗಿ ಪತ್ರ ಬರೆದ ಶ್ರೀ ಲಕ್ಷ್ಮಣ ಪಟಗಾರ ಅವರಿಗೆ ಪತ್ರದ ಮೂಲಕ ಭರವಸೆ ನೀಡಿರುತ್ತಾರೆ.
ಪ್ರಧಾನ ಮಂತ್ರಿ ಕಛೇರಿಯವರು ಒಬ್ಬ ಸಾಮಾನ್ಯ ಹಳ್ಳಿಯ ವ್ಯಕ್ತಿಯ ಪತ್ರಕ್ಕೆ ಸ್ಪಂದಿಸಿದಕ್ಕೆ ಗ್ರಾಮಸ್ಥರು ಸಂತಸ ಮತ್ತು ಹೆಮ್ಮೆ ವ್ಯಕ್ತ ಪಡಿಸಿ ಭರವಸೆಯ ಕನಸ್ಸು ಕಟ್ಟಿಕೊಂಡಿದ್ದಾರೆ.
ಅದೇ ರೀತಿ ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಶ್ರೀ ಆರ್. ವಿ. ದೇಶಪಾಂಡೆಯವರು ಸಹ ಗ್ರಾಮಸ್ಥರ ಪತ್ರಕ್ಕೆ ಸ್ಪಂದಿಸಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ರವಾನಿಸಿರುತ್ತಾರೆ. ಜಿಲ್ಲಾಧಿಕಾರಿ ಕಛೇರಿಯ ಆದೇಶದ ಮೆರೆಗೆ ಮಾನ್ಯ ತಹಶೀಲ್ದಾರರು, ಬಿ ಎಸ್ ಎನ್ ಎಲ್ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಬಂದು ಸಮಸ್ಯೆಯ ಬಗ್ಗೆ ಪರಿಶೀಲನೆ ಮಾಡಿ ವಾಸ್ತವದ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಗೆ ವರದಿ ಸಲ್ಲಿಸಿರುತ್ತಾರೆ.
ಪ್ರಧಾನ ಮಂತ್ರಿಯವರ ಕಛೇರಿಯ ಉಲ್ಲೇಖ ಪತ್ರಕ್ಕೆ ಪ್ರತಿಕ್ರಿಯಿಸಿದ ಬಿ ಎಸ್ ಎನ್ ಎಲ್ ಅಧಿಕಾರಿಗಳು ಯಾಣದಲ್ಲಿ ಈಗಾಗಲೇ ಮೊಬೈಲ್ ಟವರ್ ಇರುವುದರಿಂದ ಸಂಡಳ್ಳಿಯಲ್ಲಿ ಮೊಬೈಲ್ ಟವರ್ ಅಳವಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಗ್ರಾಮಸ್ತರು ಹೇಳುವುದೇನೆಂದರೆ ಯಾಣದಲ್ಲಿ ಇರುವ ಮೊಬೈಲ್ ಟವರ್ ಅತೀ ಚಿಕ್ಕದಾಗಿದ್ದು ಮೊದಲು ವಿಲ್ ಪೋನ್ ಗಳಿಗೆ ಅಳವಡಿಸಲು ಬಳಸುತ್ತಿದ್ದ ಕಂಬಕ್ಕೆ ಟ್ರಾನ್ಸ್‍ಮೀಟರ್‍ನ್ನು ಅಳವಡಿಸಲಾಗಿರುವುದರಿಂದ ಅದು 1 ಕಿ.ಮೀ ವ್ಯಾಪ್ತಿಯನ್ನು ಸಹ ವಿಸ್ತರಿಸುವುದಿಲ್ಲ. ಹಾಗಾಗಿ ಯಾಣದ ಟವರ್‍ನ್ನು ಉನ್ನತೀಕರಿ ಸಂಡಳ್ಳಿ ಗ್ರಾಮಕ್ಕೆ ಸಂಪೂರ್ಣ ಮೊಬೈಲ್ ಸಿಗ್ನಲ್ ಬರುವಂತೆ ಮಾಡಿ ಅಥವಾ ಕಂದಳ್ಳಿ, ಮತ್ತಳ್ಳಿ, ಮಾವಳ್ಳಿ, ಕೊಡಂಬಳ್ಳಿ, ಬೆಳ್ಳಂಗಿ ಮತ್ತು ಯಾಣ ಈ ಎಲ್ಲಾ ಗ್ರಾಮಕ್ಕೆ ಅನುಕೂಲವಾಗುವಂತೆ ಮಧ್ಯದಲ್ಲಿ ಇರುವ ಸಂಡಳ್ಳಿಯಲ್ಲಿಯೇ ಮೊಬೈಲ್ ಟವರ್ ನಿರ್ಮಿಸಿ ಎಂಬುದು ಸಂಡಳ್ಳಿ ಗ್ರಾಮದ ಹೋರಾಟಗಾರರ ಕೂಗು. ನಮ್ಮ ಸಮಸ್ಯೆಗೆ ಸ್ಪಂದಿಸದೇ ಇರುವ ಜನ ಪ್ರತಿನಿಧಿಗಳಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಮತ್ತು ಈ ಲೋಕ ಸಭಾ ಚುನಾವಣೆಯ ಒಳಗೆ ನಮ್ಮ ಸಮಸ್ಯೆಯ ಪರಿಹಾರಕ್ಕೆ ಅಧೀಕೃತ ಆದೇಶ ಬರುವವರೆಗೂ ಚುನಾವಣಾ ಬಹಿಷ್ಕಾರದ ನಿರ್ಧಾರವನ್ನು ಹಿಂದೆ ಪಡೆಯುವುದಿಲ್ಲ ಎಂದು ಗ್ರಾಮಸ್ಥರಾದ ಜೀನ ಚಂದ್ರ ಶಿವಯ್ಯ ನಾಯಕ, ಚಂದ್ರಶೇಖರ ಕುಮಟಾಕರ, ಭೈರವ ಭಾಗವತ್, ಲಕ್ಷ್ಮಣ ಪಟಗಾರ, ಗಜಾನನ ಶಾಸ್ತ್ರಿ, ಹರೀಶ್ ಭಾರದ್ವಜ, ಉಮೇಶ ಪಟಗಾರ, ಮಂಜುನಾಥ ಪಟಗಾರ, ರಾಮ ಪಟಗಾರ, ನಾರಾಯಣ ಪಟಗಾರ, ಗಜಾನನ ಹೆಗಡೆ, ಸುಬ್ರಮಣ್ಯ ಭಟ್ಟ, ವೆಂಕಟರಮಣ ಭಟ್ಟ, ಗಣೇಶ ಭಟ್ಟ್, ಶ್ರೀನಿವಾಸ ಭಟ್ಟ್, ದಿವ್ಯಾ ಭಟ್ಟ, ಗಾಯತ್ರಿ ಭಟ್ಟ, ಸುವರ್ಣ ಹೆಗಡೆ, ಭಾರತಿ ಪಟಗಾರ, ಮಂಜುಳಾ ಹೆಗಡೆ, ಮಾದೇವಿ ಪಟಗಾರ, ಸುನಿತಾ ಪಟಗಾರ, ಮಂಜುಳಾ ಪಟಗಾರ, ಸುವರ್ಣ ಶೆಟ್ಟಿ, ಸುಬ್ರಮಣ್ಯ ಶೆಟ್ಟಿ, ಗಣೇಶ ಶೆಟ್ಟಿ, ದಯಾನಂದ ಶೆಟ್ಟಿ, ಮಾದೇವ ಪಟಗಾರ, ವಿನಾಯಕ ಶೆಟ್ಟಿ, ಪ್ರಸನ್ನ ಪಟಗಾರ, ರಮೇಶ ಶಾಸ್ತ್ರಿ, ತಿಳಿಸಿರುತ್ತಾರೆ.