ನಮ್ಮೂರ ಅಗಸ್ಯಾಗ ಆಲದಮರ ಬೆಳೆದೂ ಹಾದಿಬೀದೆಲ್ಲ ತಂಪನೆರಳ,,,
ರೆಂಬಿಕೊಂಬಿಮ್ಯಾಲ ಗೂಡಕಟ್ಟತಾವ ರೆಕ್ಕಿ ಬಲಿತಹಕ್ಕಿ ಗೂಡಿನ್ಯಾಗ ಮಲಗದ ಮರಿಹಕ್ಕಿ
ದೂರದೇಶದ ವಲಸಿಗ ಹಕ್ಕಿಗೂ ಐತಿ ಜಾಗ ಜಾಗ ಒಳಗ ಬನ್ನಿರಿ ನೀವೂನಮ್ಮ ಬಳಗ..

     ದಿನದಹಾಗೆ ಶಾಲೆಯಿಂದ ಮನೆಯಕಡೆ ಬೈಕಿನಲ್ಲಿ ಹೊರಟಿದ್ದೆ .ಮನಸೇಕೋ ಚಂದ್ರಶೇಖರ ಕಂಬಾರರ ಈ ಗೀತೆಯನ್ನು ಗುನುಗಲು ಪ್ರಾರಂಭಿಸಿತು.ಆಲದಮರಕ್ಕೂ ನನ್ನ ಶಾಲಾ ಪರಿಸರಕ್ಕೂ ಬಹಳ ಅನ್ಯೋನ್ಯತೆ ಇದೆ.ಕೊಂಕಣ ಎಜ್ಯಕೇಶನ್ ಟ್ರಸ್ಟ ಇದು ಕುಮಟಾ ತಾಲೂಕಿನ ಕಲಭಾಗ ಗ್ರಾಮದ ಗುಡ್ಡದ ಮೇಲಿದೆ.ಇಲ್ಲಿಯ ಭೂಮಿ ಬಹುತೇಕ ಕಲ್ಲರೆಯಾಗಿದ್ದು .ಇದನ್ನು ವಿದ್ಯಾಗಿರಿ ಯಾಗಿಸುವ ನಿಟ್ಟಿನಲ್ಲಿ ಟ್ರಸ್ಟ್ ಅವಿರತವಾಗಿ ಶ್ರಮಿಸುತ್ತಿದೆ.ರಂಗಾದಾಸಾ ಶಾನಭಾಗ ಹೆಗಡೆಕರ್ ಬಾಲ ಮಂದಿರದಿಂದ ಹಿಡಿದು ಸರಸ್ವತಿ ಕಾಲೇಜಿನ ವರೆಗೂ ಹಲವಾರು ಶಾಖೆಗಳಿಂದ ಒಡಗೂಡಿ ಹತ್ತಿರತ್ತಿರ ಎರಡು ಸಾವಿರದಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಅನೇಕ ಬಡಪ್ರತಿಭಾವಂತರು ಉಚಿತವಾಗಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.ಆಧುನಿಕ ಯುಗದ ಭರಾಟೆಯ ನಡುವೆ ರಾಷ್ಟ್ರೀಯ ವಿಚಾರಧಾರೆಯ ತಳಹದಿಯಲ್ಲಿ ಸಂಸ್ಕಾರ ಯುತ ಶಿಕ್ಷಣ ನೀಡುವದಿಸೆಯಲ್ಲಿ ಪ್ರವಾಹದ ವಿರುದ್ಧ ಸೆಣಸಾಟ ಇಲ್ಲಿ ನೆಡಸಲಾಗುತ್ತಿದೆ.ಇವೆಲ್ಲ ಪ್ರಸ್ತಾಪ ಯಾಕೆ ಮಾಡಿದೆ ಎಂದರೆ ಕಂಬಾರರ ಈ ಗೀತೆಯ ಆಶಯದ ಹಾಗೇ ” ದೂರ ದೇಶದ ವಲಸಿಗ ಹಕ್ಕಿಗೂ ಜಾಗ ಐತಿ ಒಳಗ ಬನ್ನಿರಿ ನಾವೂ ನಿಮ್ಮ ಬಳಗ “ಅನ್ನೋ ಮಾತು ಈ ಸಂಸ್ಥೆಯ ಮಟ್ಟಿಗೆ ನೂರಕ್ಕೆ ನೂರು ಸರಿಹೊಂದುತ್ತದೆ! ಒಂದರ್ಥದಲ್ಲಿ ಟ್ರಸ್ಟ ಕೂಡ ಆಲದ ಮರದಹಾಗೆ ವಿಶಾಲಮನೋಭಾವನ್ನು ಹೊಂದಿದೆ.ಉತ್ತಮ ವಿಚಾರಗಳು ಎಲ್ಲಿಂದಲೇ ಬರಲಿ ಅದನ್ನು ತಮ್ಮದಾಗಿಸಿ ಕೊಳ್ಳಬೇಕೆಂದು ಹಂಬಲಿಸುವ ಮನೋಭಾವ ಹೊಂದಿರುವವರು ಜಿಲ್ಲೆಯ ಪ್ರಸಿದ್ಧ ಉದ್ಯಮಿಗಳು ಚಿಂತಕರೂ ಆದ ಶ್ರೀ ಮುರಳೀಧರ ಪ್ರಭು ಅವರು ಕಾರ್ಯದರ್ಶಿಗಳಾಗಿ ಸಂಸ್ಥೆಯ ಅಭ್ಯುದಯಕ್ಕೆ ಸದಾ ಹಂಬಲಿಸುವ ವಿಶ್ವಸ್ಥರುಗಳನ್ನು ಒಡಗೂಡಿ ಮುಂದುವರೆಯುತ್ತಿರುವ ಪರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.ಪ್ರತೀ ವರ್ಷವೂ ಹಲವಾರು ಕಾರ್ಯಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.ಅವೆಲ್ಲವೂ ನೆನಪಿಂದ ಮಾಸಿದರೂ ಸಂಸ್ಥೆಯು ಮಾಡುತ್ತಿರುವ ಒಂದು ಕಾರ್ಯಕ್ರಮವು ಮಾತ್ರ ಭವಿಷ್ಯದ ಜನಾಂಗಕ್ಕೆ ವರದಾನ ಆಗಿಪರಿಣಮಿಸಲಿದೆ.ಅದುವೇ  ವನಮೋತ್ಸವ.

ಸಾಮಾನ್ಯವಾಗಿ ಜೂನ್ ತಿಂಗಳು ಬಂತೆಂದರೆ ಎಲ್ಲ ಪತ್ರಿಕೆಗಳಲ್ಲಿ ಈ ಸುದ್ದಿಯನ್ನು ನಾವು ಕಾಣಬಹುದು.ಕೆಲವು ಸಂಘ ಸಂಸ್ಥೆಗಳು ಸರಕಾರದ ಕೆಲವು ಇಲಾಖೆಗಳು ವನಮಹೋತ್ಸವವನ್ನು ಆಚರಿಸಿ ಪತ್ರಿಕೆಗಳಿಗೆ ವರದಿ ನೀಡುತ್ತವೆ !  

RELATED ARTICLES  ಕುಮಟಾ ಪುರಸಭೆ : ಅಧ್ಯಕ್ಷರಾಗಿ ಮೋಹಿನಿ ಗೌಡ, ಉಪಾಧ್ಯಕ್ಷರಾಗಿ ರಾಜೇಶ್ ಪೈ ಆಯ್ಕೆ

ಕೊಂಕಣ ಸಂಸ್ಥೆಯವರೂ ಪ್ರತಿವರ್ಷವೂ ವೃಕ್ಷಾರೋಪ ಕಾರ್ಯಕ್ರಮವನ್ನು ಕೆಲವು ಸಂಘಟನೆಗಳ ಜೊತೆಸೇರಿ ಆಚರಿಸುತ್ತಾ ಬರುತ್ತಿದ್ದಾರೆ.ಸಾಮಾನ್ಯವಾಗಿ ಗಟ್ಟಿ ಮಣ್ಣಿನ ಪ್ರದೇಶದಲ್ಲಿ ಒಂದು ಒಂದುವರೆ ಅಡಿ ಹೊಂಡವನ್ನು ಬಹಳ ಪ್ರಯಾಸ ಪಟ್ಟು ತೋಡಿ ಗಿಡನೆಟ್ಟು ಅದನ್ನು ಉಳಿಸಿಕೊಳ್ಳಲು ಹರಸಾಹಸ ಪಡುವುದು,ಕೆಲವೊಮ್ಮೆ ಚಿಗುರಿದ ಗಿಡ ಸರಿಯಾದ ಗಾರ್ಡ ಇಲ್ಲದೆಯೆ ದನಗಳ ಆಹಾರವಾಗಿ ಹೋಗುವುದು ವರ್ಷದ ವಾಡಿಕೆ ಆಗಿರುವುದರಿಂದ ವನ ಮಹೋತ್ಸವ ಒಂದು ಕಾಟಾಚಾರದ ಕಾರ್ಯಕ್ರಮ ಆಗಬಾರದೆಂದು  ಹಿಂದಿನ ಅಧ್ಯಕ್ಷರಾದ ದಿ.ಕಾಶೀನಾಥ ನಾಯಕರವರು ವನಮಹೋತ್ಸವ ದಲ್ಲಿ ನೆಟ್ಟಗಿಡ ಮರವಾಗಿ ಬೆಳಯುವ ತನಕ ಅದನ್ನು ಕಾಪಿಡಬೇಕೆಂಬ ನಿರ್ಧಾರಕ್ಕೆ ಬಂದು ಇದನ್ನು ಆಡಳಿತಮಂಡಳಿಯೂ ಅನುಮೋದಿಸಿ ಆ ವರುಷವೇ ಯಂತ್ರದ ಮೂಲಕ ಗಟ್ಟಿ ಭೂಮಿಯನ್ನು ಛೇದಿಸಿ ಆರೇಳು ಅಡಿಗಳ ಬೃಹತ್ ಹೊಂಡಗಳನ್ನು ಲಕ್ಷಾಂತರ ರೂಪಾಯಿ ವ್ಯಯಿಸಿ ಸಿದ್ಧಗೊಳಿಸಿದರು.ಅದರಲ್ಲಿ ಮಣ್ಣುತುಂಬಿಸಿದರು.ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಆಲದ ಗಿಡ ನೆಡಲು ತೀರ್ಮಾನಿಸಿ ಅರಣ್ಯ ಇಲಾಖೆಯ ಮೂಲಕ ಗಿಡತರುವ ಜವಾಬ್ದಾರಿಯನ್ನು ನನ್ನ ಹಾಗೂ ದೈಹಿಕ ಶಿಕ್ಷಕ ಜಯರಾಜರ ಹೆಗಲಿಗೇರಿಸಿದರು .ಕುಮಟಾದ ಅರಣ್ಯಾಧಿಕಾರಿ ಯವರು ಆಲದ ಗಿಡತರಲು ಹಿಲ್ಲೂರಿನ ನರ್ಸರಿಗೆ ಸಂಪರ್ಕಿಸಲು ತಿಳಿಸಿದರು.ಕೂಡಲೇ ಜಯರಾಜನ ಜೊತೆ ನಮ್ಮ ಶಾಲಾ ವಾಹನ ತೆಗೆದುಕೊಂಡು ನರ್ಸರಿಗೆ ಹೋದಾಗ ನಮಗೆ ನಿರಾಸೆ ಕಾದಿತ್ತು.ಕೇವಲ ಹದಿನೈದರಷ್ಟು ಆಲದ ಗಿಡ ಲಭ್ಯ ಆಗಬಹುದು ಇನ್ನುಳಿದವು ಇಲಾಖೆಗೆ ಬೇಕು ನಿಮಗೆ ಉಳಿದ ಗಿಡಕೊಡುವ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು.


ಆದರೆ ನಮಗೇಕೋ ಹೆಚ್ಚು ಆಲದ ಗಿಡ ಒಯ್ಯಬೇಕೆಂಬ ಹಂಬಲ. ನೀವು ಹದಿನೈದು ಗಿಡ ಕೊಡಿ ನಾವು ಒಮ್ಮೆ ನಿಮ್ಮ ನರ್ಸರಿ ಸುತ್ತಾಡಿ ಬರುತ್ತೇವೆ ಎಂದು ನಮ್ಮ ಸಂಸ್ಥೆಯ ಸಸ್ಯಪಾಲಕ ರಾಮಚಂದ್ರಣ್ಣನ ಜೊತೆ ಹೋದೆವು.ಅಲ್ಲಿ ಸುಮಾರು ಒತ್ತೊತ್ತಾದ ಗಿಡಗಳ ಹಿಂಡಿನ ನಡುವೆ ಗುಪ್ಪೆಯಾಗಿರುವ ಆಲದ ಗಿಡಗಳು ನಮ್ಮ ಕಾಕದೃಷ್ಠಿಗೆ ಬಿತ್ತು!

ಜಯರಾಜ ಕೇಳಬೇಕಲ್ಲ ಸರ್ ನೋಡಿ ಇಷ್ಟೆಲ್ಲ ಇದ್ರೂ ಇಲ್ಲ ಅಂತ್ರು ಹೋಗಿ ಎಲ್ಲ ಕಿತ್ಕಂಡ ಟೆಂಪೋತುಂಬ್ವಾ ಅಂದ್ರು  ನಾನು ಬೇಡ ಅವರ ಬಳಿಯೇ ಕೇಳಿ ಕೀಳುವ ಅಂತ ಬಂದು ಆ ಗಿಡದ ಬಗ್ಗೆ ಹೇಳಿದಾಗ ಅಲ್ಲಿನ ಸಿಬ್ಬಂದಿ ಅದು ಕೊಟ್ಟೆಯಲ್ಲಿ ಹಾಕಿ ಸಿದ್ಧ ಪಡಿಸಿದ್ದಲ್ಲ ಅದಕೆ ಇನ್ನೂ ಬಹಳ ಕೆಲಸ ಎಂದು ಸಮಜಾಯಿಷಿ ನೀಡಿದರೂ ಪರವಾಗಿಲ್ಲ ನಾವು ತಕೊಂಡ ಸರಿಮಾಡಿಕೊಳ್ತೇವೆ ಎಂದು ತಡಮಾಡದೇ ಗಿಡದ ಬುಡಕ್ಕೆ ದಡದಡ ದಾಳಿಮಾಡಿ ಎಲ್ಲವನ್ನೂ ಕಿತ್ತು ಮೊದಲು ಟೆಂಪೋ ತುಂಬಿಕೊಂಡೆವು.ಜಯರಾಜರ ಮುಖದಲ್ಲಂತೂ ಓಲಂಪಿಕ್ ಪದಕ ಗಳಿಸಿದ ಸಂಭ್ರಮ! ಹೀರೇಗುತ್ತಿಗೆ ಬಂದಾಗ ಹಸಿವೆಯ ಪರಿವೆ ಆಗಿ ಗೂಡಂಗಡಿಯಲ್ಲಿ  ಮಿಸಾಳಬಾಜಿ ಪಾರ್ಟಿಯನ್ನು ಮಾಡಿ ಖುಷಿಪಟ್ಟೆವು.

RELATED ARTICLES  ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು 31 ಕರೊನಾ ಪಾಸಿಟಿವ್

ಅಂತೂ ಕನಸಿನ ಆಲದ ಗಿಡಗಳ ಜೊತೆಗೆ ಹಲಸು,ಅಶ್ವಥ್ ಗಿಡಗಳು ಕೊಂಕಣದ ಗುಡ್ಡಹತ್ತಿತು.ಬಯಸಿದಷ್ಟು ಗಿಡದೊರೆತಬಗ್ಗೆ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಸಂತಸ ಪಟ್ಟರು.


ಕಾಶೀನಾಥ ನಾಯಕರೂ ಗಿಡಗಳ ಸಂರಕ್ಷಣೆಯ ಮಹತ್ವದಬಗ್ಗೆ ಕಳಕಳಿ ವ್ಯಕ್ತಪಡಿಸಿದರು.ಆಡಳಿತ ಮಂಡಳಿಯವರು ಶಾಲಾ ವಿದ್ಯಾರ್ಥಿಗಳು. ಶಿಕ್ಷಕರು ಅರಣ್ಯ ಇಲಾಖೆಯವರುಎಲ್ಲರೂ ಸೇರಿ ಸಂಭ್ರಮದ ವನಮಹೋತ್ಸವ ಆಚರಿಸಿದೆವು.

ಕೊನೆಗೆಎಲ್ಲ ಗಿಡಗಳಿಗೂ ವಿಶ್ವಸ್ತರಾದ ಗಜಾನನ ಕಿಣಿ ಅವರ ವಿಶೇಷ ಆರೈಕೆ ,ರಕ್ಷಣಾ ಗಾರ್ಡಗಳ ವ್ಯವಸ್ಥೆ ಆಗಿ, ಅವರು ಪ್ರತೀ ದಿನ ತಮ್ಮ ಮಕ್ಕಳೊಂದಿ ಸಾಯಂಕಾಲ ಗಿಡಗಳನ್ನು ಗಮನಿಸಿ ಅವುಗಳಿಗೆ ನೀರುಗೊಬ್ಬರ ಹಾಕಿ ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ.
ಈಗ ಬಹುತೇಕ ಗಿಡಗಳು ಬದುಕಿ ಹೆಮ್ಮರವಾಗಲು ಹವಣಿಸುವಂತೆ ಕಾಣಿಸುತ್ತಲಿದೆ.ಸಾಯಂಕಾಲ ವಿಹಾರಕ್ಕೆ ಬರುವ ಅನೇಕರ ಮನಸಿಗೆ ಈ ಗಿಡಗಳು ಮುದ ನೀಡುತ್ತಿದೆ.ವಿದ್ಯಾಗಿರಿ ಹಸಿರ ಸಿರಿ ಆಗಿ ಕಂಗೊಳಿಸುವ ದಿನಗಳು ಹತ್ತಿರವಾಗುತ್ತಿದೆ. ತಂಗಾಳಿಗೆ ತಂಬೆಲರುಗಳು ತಲೆದೂಗುವಾಗ ಸದಾ ಹಸನ್ಮುಖಿ ದಿ .ಕಾಶೀನಾಥ ನಾಯಕರ ನೆನಪಾಗುತ್ತದೆ. 


ಇಷ್ಟೇ ಆದರೆ ಸಾಲದು ಬರಡು ಬೆಟ್ಟದಲ್ಲಿ ಇದೇ ರೀತಿ ವೃಕ್ಷಾರೋಪಣೆ ಹಾಗೂ ಔಷಧೀಯ ಸಸ್ಯಗಳ ವನ,ಅಪ್ಸರಕೊಂಡದ ಮಾದರಿಯಲ್ಲಿ ಕಲಭಾಗ ಬೆಟ್ಟದ ಅಭಿವೃದ್ಧಿ ಆಗಬೇಕಿದೆ. ಇದಕೆ ಬೇಕಾದ ಇಚ್ಛಾಶಕ್ತಿಯನ್ನು ಇಲಾಖೆ ಪ್ರದರ್ಶಿಸಬೇಕಿದೆ. ಇಲ್ಲ ಇದು ಸಾಧ್ಯವಿಲ್ಲ ಎಂದು ಮನಸ್ಸು ಹೇಳ ಹತ್ತಿದರೂ ಇಕ್ಕೆಲಗಳಲ್ಲಿ ಕಂಗೊಳಿಸುವ ಗಿಡಗಳು ಮಾತ್ರ.

ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನೂ ಸಲಹುವನು ಇದಕೆ ಸಂಶಯವಿಲ್ಲ ಎಂದು ಕನಕದಾಸರ ಭಜನೆ  ಮಾಡುತ್ತಿದೆ.