ಕಳೆದ ಮೂರು ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದ ಪ್ರಾಣಿ ಸಂಕುಲ ನಡುಗಿಹೋಗಿದೆ. ಅರಣ್ಯದ ಪ್ರಾಣಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ದೃಶ್ಯಗಳು ಮನಕಲಕುವಂತಿವೆ.
ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವ ಗೋಪಾಲಸ್ವಾಮಿ ಬೆಟ್ಟ ವಲಯದ ಕೆಬ್ಬೇಪುರ–ಚೌಡಹಳ್ಳಿ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಕಂಡು ಬಂದ ಬೆಂಕಿ ಸುತ್ತಮುತ್ತಲ ಪ್ರದೇಶಗಳಿಗೆ ವ್ಯಾಪಿಸಿದೆ. ನಾಗರಹೊಳೆ ಉದ್ಯಾನದ ಸೊಳ್ಳೇಪುರ ಬಳಿ ಕಾಡ್ಗಿಚ್ಚಿಗೆ 35 ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ ಎಂದು ತಿಳಿದು ಬಂದಿದೆ.
ಜಿಂಕೆ, ಮೊಲ, ಚಿಂಪಾಂಜಿ, ಹಾವುಗಳು ಹಾಗೂ ಇನ್ನಿತರೆ ವಿವಿಧ ಪ್ರಾಣಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ. ಒಂದು ಮೊಲ ಓಡುತ್ತಿರುವ ಸ್ಥಿತಿಯಲ್ಲೇ ಸುಟ್ಟು ಕಲ್ಲಿನಂತಾಗಿರುವುದನ್ನ ನೋಡಿದರೆ ಕರುಳು ಹಿಂಡಿದಂತಾಗುತ್ತೆ. ಸುಟ್ಟು ಕರಕಲಾದ ಜಿಂಕೆಗಳ ದೇಹಗಳು ರಾಶಿ ಬಿದ್ದಿವೆ. ಹಾವುಗಳು ಇದ್ದ ಸ್ಥಿತಿಯಲ್ಲೇ ಬೂದಿಯಾಗಿವೆ. ಇಡೀ ಕಾಡೇ ಹೊತ್ತಿ ಉರಿಯುವಾಗ ತಮ್ಮ ಪ್ರಾಣ ಉಳಿಸಿಕೊಳ್ಳಲು ಈ ಮೂಕಪ್ರಾಣಿಗಳು ಎಂಥ ಯಾತನೆ ಅನುಭವಿಸಿರಬಹುದು ಅನ್ನೋದನ್ನ ಕಲ್ಪನೆ ಮಾಡೋದಕ್ಕೂ ಸಹ ಸಾಧ್ಯವಿಲ್ಲ.
ಕೆಲ ದಿನಗಳಿಂದ ಹುಲಿ ಸಂರಕ್ಷಿತಾರಣ್ಯ ಬಂಡೀಪುರದಲ್ಲಿ ಬೆಂಕಿಯ ನರ್ತನ ಜೋರಾಗಿದ್ದು ಸರಿಸುಮಾರು 10 ಸಾವಿರ ಎಕರೆ ಅರಣ್ಯ ಜಮೀನು ಬೆಂಕಿಗೆ ಆಹುತಿಯಾಗಿದೆ. ಇದೀಗ ಎಚ್ಚೆತ್ತ ಸರ್ಕಾರ ಹೆಲಿಕಾಫ್ಟರ್ ಬಳಿಸಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬೇಸಿಗೆ ಶುರುವಾಗಿದ್ದರಿಂದ ಕಾಡಿನಲ್ಲಿ ಮರದ ಎಲೆಗಳು ಒಣಗಿರುವುದರಿಂದ ಬೆಂಕಿ ಜ್ವಾಲೆ ಅರಣ್ಯದಾದ್ಯಂತ ಪರರಿಸುತ್ತಿದೆ. ಇನ್ನು ತಮಿಳುನಾಡಿನ ಮುದುಮಲೈ ಅರಣ್ಯಕ್ಕೂ ಬೆಂಕಿ ಪರರಿಸಿರುವುದರಿಂದ ಸುಮಾರು 40 ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಾಗಿದೆ.