ಅಂಕೋಲಾ : ಕ್ರಿಕೆಟ್ ಮನರಂಜನೆಗಷ್ಟೇ ಸೀಮಿತ ಎಂಬ ಭಾವನೆ ಹಲವರಲ್ಲಿದೆ ಆದರೆ ಕ್ರಿಕೆಟ್‍ಗೂ ಜೀವನಕ್ಕೂ ಒಂದು ನಂಟಿದೆ, ಜೀವನದ ಪಾಠವಿದೆ ಎಂದು ನೂತನ ವಾಹಿನಿ ಸಹ ಸಂಪಾದಕ ಹಾಗೂ ಚಿತ್ರ ನಿರ್ದೇಶಕ ವಿನಾಯಕ ಬ್ರಹ್ಮೂರು ಹೇಳಿದರು.
ಅವರು ಇಲ್ಲಿಯ ಬ್ರಹ್ಮೂರಿನಲ್ಲಿ ಸ್ನೇಹಲೋಕ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ತೃತೀಯ ವರ್ಷದ ಅಂಡರ್‍ಆರ್ಮ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಕ್ರಿಕೆಟ್ ಎಂದರೆ ಮೂಗು ಮುರಿಯುವವರಿದ್ದಾರೆ. ಅಥವಾ ಅದನ್ನು ಕೆಲಸವಿಲ್ಲದವರು ಆಡುವ ಆಟ ಎಂಬ ಮನೋಭಾವ ಹೊಂದಿದÀವರಿದ್ದಾರೆ. ಆದರೆ ಇದರಲ್ಲಿ ಒಂದೊಂದು ಬಾಲನ್ನ ಹೇಗೆ ಎದುರಿಸುತ್ತೀರಿ ಅನ್ನೋದರ ಮೇಲೆ ನಿಮ್ಮ ಸೋಲು ಗೆಲುವು ಹೇಗೆ ನಿರ್ಣಯವಾಗುತ್ತದೋ ಹಾಗೇ ಬದುಕಿನ ಹಾದಿಯಲ್ಲಿ ಒಂದೊಂದು ಸವಾಲುಗಳನ್ನ ಹೇಗೆ ಎದುರಿಸುತ್ತೇವೆಯೋ ಅದರ ಮೇಲೆ ಯಶಸ್ಸು ವೈಫಲ್ಯ ಎನ್ನುವುದು ನಿರ್ಧರಿತವಾಗುತ್ತದೆ. ನಮಗೆ ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಹೇಗೆ ಮುಂದುವರಿಯಬಹುದು ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸುವ ಕಾರ್ಯ ಕ್ರೀಡೆಯಿಂದ ಸಾಧ್ಯವಿದೆ ಎಂದರು. ಸ್ನೇಹಲೋಕ ಕ್ರಿಕೆಟ್ ಕ್ಲಬ್ ಮೂರು ವರ್ಷದಿಂದ ಬೆಳೆದು ಬಂದ ರೀತಿಯನ್ನು ಶ್ಲಾಘಿಸಿದ ಅವರು ಈ ಸಂಘಟನೆ ಜಿಲ್ಲಾ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಅರ್ಚಕ ಹಾಗೂ ಊರಿನ ಹಿರಿಯ ಮುಖಂಡ ಸೀತಾರಾಮ ಪುರಾಣ ಕ ಮಾತನಾಡಿ ಸುತ್ತಮುತ್ತಲ ಊರಿನವರನ್ನು ಒಂದೆಡೆ ಸೇರಿಸಿ ಬಾಂಧವ್ಯ ವೃದ್ಧಿಸುವಂತೆ ಮಾಡುವ ಇಂತಹ ಪಂದ್ಯಾವಳಿಗಳು ಸಮಾಜದಲ್ಲಿ ಸೌಹಾರ್ದತೆಯನ್ನ ಮೂಡಿಸುತ್ತದೆ. ಹೆಸರಿಗೆ ತಕ್ಕಂತೆಯೇ ಸ್ನೇಹವನ್ನು ಎಲ್ಲೆಡೆ ಬಿತ್ತರಿಸುತ್ತಿರುವ ಸ್ನೇಹಲೋಕ ಸಂಘಟನೆ ಬಗ್ಗೆ ಅಪಾರ ಹೆಮ್ಮೆಯಿದೆ ಎಂದರು. ವೇದಿಕೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯರಾದ ಕುಮಾರ ಪಟಗಾರ, ಸ್ನೇಹಲೋಕ ಕ್ರಿಕೆಟ್ ಕ್ಲಬ್ ಅಧ್ಯಕ್ಷ ದಿನೇಶ ಪಟಗಾರ ಉಪಸ್ಥಿತರಿದ್ದರು. ವಿವೇಕ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಸುಬ್ರಾಯ ಹೆಗಡೆ ಸ್ವಾಗತಿಸಿ ವಂದಿಸಿದರು.
ಟೂರ್ನಿಯಲ್ಲಿ 10ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿದ್ದವು. ಫೈನಲ್ ಪಂದ್ಯ ರೋಚಕ ಕಾದಾಟಕ್ಕೆ ಸಾಕ್ಷಿಯಾಯಿತು. ಕೊನೆಯ ಎಸೆತದಲ್ಲಿ 3 ರನ್‍ಗಳ ಅಗತ್ಯವಿದ್ದಾಗ ಬೌಂಡರಿ ಸಿಡಿಸಿದ ವಾಸುದೇವ ಕಬಗಾಲ್ ತಂಡದ ಕೃಷ್ಣ ಹೆಗಡೆ ಗೆಲುವಿನ ರೂವಾರಿ ಎನಿಸಿದರು. ಬ್ರಹ್ಮೂರಿನ ಮೈದಾನದಲ್ಲಿ ಕಬಗಾಲ ತಂಡವು ಮೊದಲ ಬಾರಿ ಕಪ್ ಎತ್ತಿ ಹಿಡಿದು ಸಂಭ್ರಮಿಸಿತು. ಎಲ್‍ಎನ್‍ಎಸ್‍ಸಿ ಕಡಕೋಡ ತಂಡ ರನ್ನರ್ ಅಪ್‍ಗೆ ಭಾಜನವಾಯಿತು. ಸ್ನೇಹಲೋಕ ತಂಡವು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಪರ್ವತೇಶ್ವರ ತಂಡದ ದಯಾನಂದ್ ಟೂರ್ನಿಯ ಉತ್ತಮ ಬೌಲರ್, ಕಬಗಾಲ ತಂಡದ ನಾಯಕ ಸಂದೀಪ್ ಉತ್ತಮ ಬ್ಯಾಟ್ಸ್‍ಮನ್ ಹಾಗೂ ಇದೇ ತಂಡದ ಕೃಷ್ಣ ಹೆಗಡೆ ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.