ಕುಮಟಾ: ಅಘನಾಶಿನಿ ನದಿಯ ಜೀವಸಂಕುಲಗಳು ದಿನದಿಂದ ದಿನಕ್ಕೆ ಅಳಿವಿನಿ ಅಂಚಿನಲ್ಲಿದೆ. ಕಳೆದ ಎರಡು ವರ್ಷಗಳಿಂದ ಈ ನದಿಯಲ್ಲಿ ಸಿಗುತ್ತಿದ್ದ ಬಿಳಿ ಬೆಳಚು ಮತ್ತು ಕರಿ ಬೆಳಚು ಪೂರ್ತಿ ನಾಶವಾಗಿದೆ. ಕೆಲ ಮೀನಿನ ಪ್ರಬೇಧಗಳು ಕೂಡ ಕಾಣಸಿಗುತ್ತಿಲ್ಲ. ಇದು ಆತಂಕದ ಸಂಗತಿ. ಇಲ್ಲಿಯ ಬದುಕನ್ನು ಬದುಕಿಸುವ ಅಘನಾಶಿನಿಗೆ ಅಪಾಯ ಬಂದಾಗ ಎಲ್ಲರೂ ಒಂದಾಗಬೇಕು. ಈ ಜೀವನದಿಯ ಮತ್ಸ್ಯ ಸಂಪತ್ತು, ಪರಿಸರ ಎಲ್ಲವೂ ನಮ್ಮೆಲ್ಲರ ಹಕ್ಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅಭಿಪ್ರಾಯಪಟ್ಟರು.
ಅಘನಾಶಿನಿ ಗ್ರಾಮದಲ್ಲಿ ಹಮ್ಮಿಕೊಂಡ ‘ಅಘನಾಶಿನಿ ಸಾಂಸ್ಕೃತಿಕ ಹಬ್ಬದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ನದಿ ಮತ್ತು ಊರಿಗೆ ಒಂದೇ ಹೆಸರನ್ನು ಉಳಿಸಿಕೊಂಡ ಅಘನಾಶಿನಿಯ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಎಲ್ಲರ ಹೋರಾಟವಾಗಬೇಕು. ಅಘನಾಶಿನಿ ನದಿ ಸಂರಕ್ಷಣೆಯ ಕುರಿತಂತೆ ಊರಿನ ಗ್ರಾಮಸ್ಥರು ಮತ್ತು ತಜ್ಞರನ್ನೊಳಗೊಂಡ ವಿಚಾರ ಸಂಕಿರಣ ನಡೆಸಿ, ಸರಕಾರಕ್ಕೆ ವರದಿ ಮಾಡುವಂತಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಬಾರತ-ಪಾಕಿಸ್ತಾನ ಕ್ರಿಕೆಟ್ ಆಟದ ಸಂದರ್ಭದಲ್ಲಿ ಪಾಕ್ ಆಟಗಾರರು ಭಾರತ ಆಟಗಾರರ ಮೇಲೆ ಯಾವತ್ತೂ ವ್ಯಂಗ್ಯ ಪ್ರದರ್ಶಿಸುತ್ತಲೇ ಬಂದವರು. ಭಾರತ ಆಟದಲ್ಲೂ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನೇ ಕೊಟ್ಟಿದೆ ಎಂದರು. ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ಪುಲ್ವಾಮಾ ದುರ್ಘಟನೆಯಲ್ಲಿ ಪಾಕ್ ಉಗ್ರಗಾಮಿಗಳು ಭಾರತಕ್ಕೆ ಬಂದು ಸ್ಫೋಟಕ ಬಳಸಿ ಇಲ್ಲಿಯ ಸೈನಿಕರನ್ನು ಬಲಿ ತೆಗೆದುಕೊಳ್ಳುತ್ತಾರೆ ಅಂದರೆ ನಮ್ಮ ರಕ್ಷಣಾ ಮಟ್ಟ ಎಷ್ಟೊಂದು ಕಳಪೆಯಾಗಿದೆ ಎಂಬುದನ್ನು ಯೋಚಿಸಬೇಕು ಎಂದು ಹೇಳಿದರು.
ರಾಜ್ಯ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷ ಸೂರಜ್ ನಾಯ್ಕ ಸೋನಿ, ತಾಲೂಕಾ ಯುವ ಜನ ಮೇಳವು ನಿಂತಿರುವುದರಿಂದ ತಾಲೂಕಿನ ಜನಪದ ಕಲೆಗಳಿಗೆ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಿಕೊಡಬೇಕು ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರಲ್ಲಿ ಮನವಿ ಮಾಡಿದರು.
ಸ್ಥಳೀಯ ಸರಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಮಮತಾ ಪಿ. ನಾಯ್ಕ ಶುಭಾಶಯ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ರಾಜು ನಾಯ್ಕ, ಚಂದ್ರಕಾಂತ ನಾಯ್ಕ, ಪರಮೇಶ್ವರ ನಾಯ್ಕ, ಲೈಫ್ ಗಾರ್ಡ್ ನಿತ್ಯಾನಂದ ನಾಯ್ಕ, ವನ್ಯ ಜೀವಿ ಸಂರಕ್ಷಕ ಅಶೋಕ ನಾಯ್ಕ, ಪವನ ನಾಯ್ಕ, ಅಗ್ನಿಶಾಮಕ ಠಾಣೆಯ ರಾಜೇಶ ಮಡಿವಾಳ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಚಂದ್ರಕಾಂತ ಹರಿಕಾಂತ, ಅಶೋಕ ಜಿ.ನಾಯ್ಕ, ಲಕ್ಷ್ಮಣ ಹರಿಕಾಂತ, ಲಂಬೋದರ ನಾಯ್ಕ, ಉದಯ ಅಂಬಿಗ ಮುಂತಾದವರು ಉಪಸ್ಥಿತರಿದ್ದರು.
ಅಘನಾಶಿನಿ ಸಾಂಸ್ಕೃತಿಕ ಹಬ್ಬ ಸಮಿತಿಯ ಅಧ್ಯಕ್ಷ ಸಂದೀಪ ನಾಯ್ಕ ಸ್ವಾಗತಿಸಿದರು. ನಾಗರಾಜ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ವಿಷ್ಣು ನಾಯ್ಕ ವಂದಿಸಿದರು.