ಕಾರವಾರ: ಭಾರತೀಯ ವಾಯುಸೇನೆಯು ಅಂತರರಾಷ್ಟ್ರೀಯ ಗಡಿರೇಖೆ ದಾಟಿ, ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಯ ಮೇಲೆ 1000 ಕೆಜಿ ಬಾಂಬ್ ಅನ್ನು ಎಸೆದಿದೆ. ಇದರ ಬೆನ್ನಲ್ಲೇ, ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿಯೂ ಕೂಡ ಅಲರ್ಟ್ ಘೋಷಣೆ ಮಾಡಲಾಗಿದೆ.
ಏರ್‌ಸ್ಟ್ರೈಕ್ ಮಾಡಿದ ಹಿನ್ನೆಲೆಯಲ್ಲಿ, ಕರಾವಳಿಯುದ್ದಕ್ಕೂ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಉಗ್ರರು ಭಾರತದ ಮೇಲೆ ಪ್ರತಿದಾಳಿ ನಡೆಸಬಹುದಾದ ಸಾಧ್ಯತೆ ಇರೋದ್ರಿಂದ ನೇವಿ, ಕೋಸ್ಟ್‌ಗಾರ್ಡ್ಸ್, ಕೋಸ್ಟಲ್ ಪೊಲೀಸ್, ಜಿಲ್ಲಾ ಹಾಗೂ ನಗರ ಪೊಲೀಸರು ಅಲರ್ಟ್ ಆಗಿರುವಂತೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲೂ ಅಲರ್ಟ್ ಆಗಿರುವಂತೆ ಕಮಿಷನರ್, ಎಸ್ಪಿ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಕಳೆದ ರಾತ್ರಿಯಿಂದಲೇ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚುವರಿ ಪೊಲೀಸರನ್ನ ನೇಮಿಸಲಾಗಿದೆ. ರೈಲು ನಿಲ್ದಾಣ, ಏರ್‌ಪೋರ್ಟ್, ಮಾಲ್, ಮಾರುಕಟ್ಟೆ ಹಾಗೂ ಇತರ ಸಾರ್ವಜನಿಕ ಪ್ರದೇಶದ ಮೇಲೆ ಹದ್ದಿನಕಣ್ಣು ಇಡಲಾಗಿದೆ.
ಮಂಗಳೂರು, ಉಡುಪಿ ಮಾತ್ರವಲ್ಲದೇ ಕಾರವಾರ ಸೀಬರ್ಡ್ ಕದಂಬ ನೌಕಾನೆಲೆಯಲ್ಲಿ ಪ್ರಥಮ ಹಂತದ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಆಳಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆಯೂ ನೇವಿ, ಕೋಸ್ಟ್‌ಗಾರ್ಡ್ ಕಣ್ಣಿಟ್ಟಿದ್ದಾರೆ. ಸಮುದ್ರದಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡಾಮಿನರ್ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ. ಸಮುದ್ರದಲ್ಲಿ ಸಂಚರಿಸುವ ಬೋಟ್‌ಗಳ ಮೇಲೆ ನಿಗಾ ಇಡಲು ಮೀನುಗಾರಿಗೂ ಸೂಚಿಸಲಾಗಿದೆಯಂತೆ.