ಹೊನ್ನಾವರ: ಅರಣ್ಯವಾಸಿಗಳಿಗೆ ಅರಣ್ಯಭೂಮಿ ನೀಡುವುದು ಭಿಕ್ಷೆಯಾಗಲೀ, ದಾನವಾಗಲೀ ಅಲ್ಲ. ಅರಣ್ಯ ಹಕ್ಕನ್ನು ಪಡೆಯುವುದು ಕಾನೂನು ಮತ್ತು ಸಂವಿಧಾನ ಬದ್ಧವಾದ ಹಕ್ಕು. ಆಡಳಿತ ವ್ಯವಸ್ಥೆಯಲ್ಲಿ ಆಡಳಿತ ವೈಫಲ್ಯ ಹೊಂದಿರುವುದರಿಂದ ಇಂದು ಅರಣ್ಯವಾಸಿಗಳ ಭೂಮಿ ಹಕ್ಕು ಜ್ವಲಂತ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಇಂದು ಸ್ಥಳಿಯ ಪ್ರಭಾತ ನಗರದ ಮೂಡಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಮಾ.2 ರಂದು ಕುಮಟಾದಲ್ಲಿ ಜರುಗಲಿರುವ ಜಿಲ್ಲಾ ಮಟ್ಟದ ಅರಣ್ಯ ಅತಿಕ್ರಮಣದಾರರ ಜೈಲ್ ಭರೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ತಾಲೂಕಾ ಅರಣ್ಯ ಅತಿಕ್ರಮಣದಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಅರಣ್ಯವಾಸಿಗಳ ಸಮಸ್ಯೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣ ಸದೇ ಇರುವುದರಿಂದ ಸವೋಚ್ಛ ನ್ಯಾಯಾಲಯದಿಂದ ಅರಣ್ಯವಾಸಿಗಳ ಭೂಮಿ ಹಕ್ಕು ದೊರಕಿಸಿಕೊಳ್ಳಲು ವ್ಯತಿರಿಕ್ತವಾದ ಆದೇಶ ಬರಲು ಕಾರಣವಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಭಾವನೆಯಿಂದ ಅರಣ್ಯ ಅತಿಕ್ರಮಣದಾರರು ಅತಂತ್ರರಾಗುವ ಸ್ಥಿತಿಗೆ ಬಂದೊದಗಿರುವುದು ವಿಷಾದಕರ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ದಿಶೆಯಲ್ಲಿ ಸರ್ಕಾರ ಸಕಾರಾತ್ಮಕ ನಿಲುವನ್ನು ತೆಗೆದುಕೊಳ್ಳಬೇಕು ಇಲ್ಲದಿದ್ದಲ್ಲಿ ಮುಂದಾಗುವ ಗಂಭೀರ ಸಮಸ್ಯೆಗೆ ಸರ್ಕಾರವೇ ಬದ್ಧರಾಗಿರಬೇಕೆಂದು ಸರ್ಕಾರವನ್ನು ಎಚ್ಚರಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಹೊನ್ನಾವರ ತಾಲೂಕಾ ಅರಣ್ಯಭೂಮಿ ಸಾಗುವಳಿದಾರ ಹೋರಾಟಗಾರರ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಮಾತನಾಡುತ್ತಾ ಅರಣ್ಯ ಸಾಗುವಳಿ ಹಕ್ಕು ಪಡೆಯಲು ಹೋರಾಟವೇ ಸೂಕ್ತವಾದ ಮಾರ್ಗ. ಸರ್ಕಾರವನ್ನು ಎಚ್ಚರಿಸುವುದು ಮಾ.2 ರಂದು ಕುಮಟಾದಲ್ಲಿ ಜರುಗಲಿರುವ ಜೈಲ್ ಭರೋ ಕಾರ್ಯಕ್ರಮಕ್ಕೆ ಅರಣ್ಯವಾಸಿಗಳ ಜನಸಾಗರೋಪಾದಿಯಲ್ಲಿ ಹರಿದು ಬರಬೇಕು. ನಿಮ್ಮ ಭೂಮಿಗಾಗಿ ನಿಮ್ಮ ಹೋರಾಟ ಸೀಮಿತವಾಗಿರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಭಟ್ಕಳ ಹೋರಾಟ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಆರ್.ಹೆಚ.ನಾಯ್ಕ, ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ, ಸಂದಿಪ ಚಂದಾವರ, ಖರ್ವಾ ಘಟಕದ ಎಸ್.ಜಿ.ಭಟ್ಟ, ಪಿ.ಜಿ. ವಿದ್ಯಾರ್ಥಿನಿ ಶೃತಿ ಗೌಡ ಮುಂತಾದವರು ಮಾತನಾಡಿದರು.
ವೇದಿಕೆಯ ಮೇಲೆ ಸುಬ್ರಾಯ ಮೇಸ್ತ, ನೆಲ್ಸನ್, ಎಮ್.ಜಿ.ನಾಯ್ಕ ಉಪಸ್ಥಿತರಿದ್ದರು. ನಗರ ಘಟಕದ ಅಧ್ಯಕ್ಷ ಸುರೇಶ ಮೇಸ್ತ ಸ್ವಾಗತಿಸಿದರು. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ನಾಯ್ಕ ಮೂಡಕಣ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.