ಇಸ್ಲಾಮಾಬಾದ್:  ಪಾಕಿಸ್ತಾನದ ಸೇನಾ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್ ಇಂದು ಜಂಟಿ ಸಂಸತ್​ ಅಧಿವೇಶನದಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಎರಡು ದೇಶಗಳ ನಡುವೆ ಶಾಂತಿ ಸಂಕೇತವಾಗಿ ಅಭಿನಂದನ್​ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿರುವ ಅವರು, ಪರಿಸ್ಥಿತಿ ಕೈ ಮೀರದಂತೆ ಎರಡು ದೇಶಗಳು ನೋಡಿಕೊಳ್ಳಬೇಕಿದೆ ಎಂದು ಇಮ್ರಾನ್​ ಖಾನ್​ ಹೇಳಿದ್ದಾಗಿ ಪಾಕಿಸ್ತಾನದ ಡಾನ್​ ಮಾಧ್ಯಮ ಸಂಸ್ಥೆ ವರದಿ ಮಾಡಿದೆ ಎನ್ನಲಾಗಿದೆ.

ಬುಧವಾರ ಪಾಕ್ ವಾಯುಸೇನೆ ಜೊತೆಗಿನ ಹೋರಾಟದಲ್ಲಿ ಮಿಗ್ ವಿಮಾನ ಪತನಗೊಂಡಿತ್ತು. ಈ ವಿಮಾನದಲ್ಲಿ ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ನೆಲಕ್ಕೆ ಧುಮುಕಿದ್ದರು ಎಂದು ತಿಳಿದುಬಂದಿದೆ.

ಅಲ್ಲದೇ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶದಲ್ಲಿ ಬಿದ್ದಿದ್ದ ಅಭಿನಂದನ್ ಅವರನ್ನು ಪಾಕ್ ಸೇನೆ ತಮ್ಮ ಕಸ್ಟಡಿಗೆ ತೆಗೆದುಕೊಂಡಿತ್ತು. ಆದರೆ ಜಿನೀವಾ ಒಪ್ಪಂದ ಪ್ರಕಾರ ಪಾಕ್ ಸೇನೆ ಅಭಿನಂದನ್ ಅವರನ್ನು ಬಿಡುಗಡೆ ಮಾಡಲೇಬೇಕಿತ್ತು. ಹೀಗಾಗಿ ಪಾಕಿಸ್ತಾನ ನಾಳೆ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.