ಬೆಂಗಳೂರು: 2019ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದ್ದು, ಮಾರ್ಚ್ 18ರವರೆಗೂ ನಡೆಯಲಿದೆ. ಈ ವರ್ಷದ ಪರೀಕ್ಷೆಯಲ್ಲಿ 3, 38, 868 ವಿದ್ಯಾರ್ಥಿಗಳು, 3,34,738 ವಿದ್ಯಾರ್ಥಿನಿಯರೂ ಸೇರಿದಂತೆ ಒಟ್ಟು 6, 73, 606 ವಿದ್ಯಾರ್ಥಿಗಳು 1013 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 5, 60, 395 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆ ಬರೆಯಲಿದ್ದಾರೆ.
ಯಾವುದೇ ಅಡ್ಡಿ ಆತಂಕವಿಲ್ಲದೆ ನಿರಾತಂಕವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಂಡಳಿ ಎಲ್ಲ ಸಿದ್ದತೆಗಳನ್ನು ಅಂತಿಮಗೊಳಿಸಿದೆ. ಪರೀಕ್ಷಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು 2026 ವಿಶೇಷ ಮೇಲ್ವಿಚಾರಕರು, ಜಿಲ್ಲಾಮಟ್ಟದಲ್ಲಿ ಸ್ವ್ಕಾಡ್ ಗಳನ್ನು ನಿಯೋಜಿಸಲಾಗಿದೆ. ಈ ಬಾರಿ 54 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ.
ಅಲ್ಲದೇ ಇದೇ ಮೊದಲ ಬಾರಿಗೆ ಆನ್ ಲೈನ್ ಮೂಲಕ ಮೌಲ್ಯಮಾಪನ ಮಾಡಿದ ಅಂಕಗಳು ಕೇಂದ್ರದಿಂದಲೇ ನೇರವಾಗಿ ಅಪ್ ಲೋಡ್ ಆಗಲಿದೆ. ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, ಉತ್ತರ ಪತ್ರಿಕೆ ಕೊಠಡಿಗಳಿಗೆ 24 ಗಂಟೆಗಳ ಕಾಲ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.