ಕಾರವಾರ: ಶಾಸಕಿ ರೂಪಾಲಿ ನಾಯ್ಕ ತಮಗೆ ಜೀವ ಬೇದರಿಕೆ ಇರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ನವೆಂಬರ್ 30 ರಂದು ಅಂಕೋಲಾ ಸಂಭ್ರಮ ಕಾರ್ಯಕ್ರಮವನ್ನು ಮುಗಿಸಿ ವಾಪಸ್ ಬರುವಾಗ ರಾತ್ರಿ 12 ಗಂಟೆಗೆ ಡಸ್ಟರ್ ಕಾರು ಹಾಗೂ ಮಾರುತಿ ಕಂಪನಿಯ ಬ್ರೀಜಾ ಕಾರು ಹಿಂಬಾಲಿಸುತ್ತಿತ್ತು. ತಕ್ಷಣ ನೆವೆಲ್ ಗೆಟ್ ಬಳಿ ನಮ್ಮ ಕಾರನ್ನು ನಿಲ್ಲಿಸಿ ಪೊಲೀಸ್ ಭದ್ರತೆಯಲ್ಲಿ ಮನೆಗೆ ತೆರಳಿದ್ದೇನೆ. ಅಲ್ಲದೇ ತಮ್ಮ ಮನೆ ಬಳಿ ಎರಡು ಪಲ್ಸರ್ ಬೈಕ್ಗಳು ತಮ್ಮ ವಾಹನಕ್ಕೆ ದಾರಿ ನೀಡದೆ ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಮೊದಲು ಹಾಗೂ ನಂತರದ ದಿನಗಳಲ್ಲಿ ಬೆದರಿಕೆ ಕರೆಗಳು ಬರುವುದಲ್ಲದೇ ಅಪರಿಚಿತ ವಾಹನಗಳು ತಮ್ಮ ವಾಹನವನ್ನು ಹಿಂಬಾಲಿಸುತ್ತಿವೆ. ಅಲ್ಲದೆ ಮನೆಯ ಬಳಿ ಕೆಲ ವ್ಯಕ್ತಿಗಳು ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದು, ಕುಟುಂಬಸ್ಥರು ಹಾಗೂ ಸಹಚರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ನನಗೆ ಜೀವ ಬೆದರಿಕೆ ಇರುವ ಆತಂಕ ಇದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನನ್ನ ಬೆಂಗಾವಲಿಗೆ ಸಶಸ್ತ್ರ ಪೊಲೀಸ್ ಪೇದೆಯನ್ನು ನೇಮಕ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಮನವಿ ಮಾಡಿದ್ದಾರೆ.