ಕಾರವಾರ: ಅರಣ್ಯವಾಸಿಗಳ ಅರಣ್ಯಭೂಮಿ ಹಕ್ಕಿಗೆ ಹೊಸ ರಾಷ್ಟ್ರೀಯ ಅರಣ್ಯ ನೀತಿ ಜಾರಿಯನ್ನು ಆಗ್ರಹಿಸಿ ಕುಮಟಾದಲ್ಲಿ ಬೃಹತ್ ಮೆರವಣಿಗೆ ಹಾಗೂ ಜೈಲ್ ಭರೋ ಕಾರ್ಯಕ್ರಮ ಸಂಘಟಿಸಲಾಗಿತ್ತು. ಅದೇರೀತಿ ಇಂದು ಅರಣ್ಯ ಅತಿಕ್ರಮಣದಾರರ ಅರ್ಜಿ ತಿರಸ್ಕಾರ ಹಿನ್ನೆಲೆ ಅರಣ್ಯವಾಸಿಗಳಿಂದ ಬೃಹತ್ ಜೈಲ್ ಭರೋವನ್ನು ನಡೆಸಲಾಯಿತು.
3 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣಾದಾರರು ಸೇರಿ. ಅರಣ್ಯ ಅತಿಕ್ರಮಣದಾರರ ಅರ್ಜಿ ತಿರಸ್ಕಾರ ಹಿನ್ನೆಲೆ ಅರಣ್ಯವಾಸಿಗಳಿಗೆ ಪಟ್ಟಾ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಅತಿಕ್ರಮಣದಾರರು ಆಗಮಿಸಿದ್ದರು.ರ‍್ಯಾಲಿಯ ಅಂಗವಾಗಿ ಮುಂಜಾನೆ 10.30 ಕ್ಕೆ ಮಣಕಿ ಕ್ರೀಡಾಂಗಣದಲ್ಲಿ ಅರಣ್ಯವಾಸಿಗಳ ಬೃಹತ್ ಸಮಾವೇಶ ಏರ್ಪಡಿಸಲಾಗಿತ್ತು. ತದನಂತರ ಸಭೆಯು ಮೆರವಣಿಗೆಯಾಗಿ ಪರಿವರ್ತನೆಗೊಂಡು ಮಣಕಿ ಕ್ರೀಡಾಂಗಣದಿಂದ ಹಳೆ ಬಸ್ ನಿಲ್ದಾಣ -ಸುಭಾಷ ಸರ್ಕಲ್ ಮೂಲಕ ಗಿಬ್ ಹೈಸ್ಕೂಲ್ ವೃತ್ತದಿಂದ ಪುನಃ ಮಣಕಿ ಮೈದಾನ ತಲುಪಿದೆ. ನಂತರ ಮಣಕಿ ಕ್ರೀಡಾಂಗಣದಲ್ಲಿ ಜೈಲ್ ಭರೋ ಕಾರ್ಯಕ್ರಮ ನಡೆಸಲಾಯಿತು.
ಸರ್ವೋಚ್ಛ ನ್ಯಾಯಾಲಯವು ವಿಸ್ತೃತ ಅಫಿಡಾವಿಟ್ ಸಲ್ಲಿಸಲು ಜುಲೈ 10 ರಂದು ರಾಜ್ಯಕ್ಕೆ ಕಾಲಮಾನದಂಡ ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಪರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರಣ್ಯವಾಸಿಗಳ ಪರವಾಗಿ ಕ್ರಮ ಜರುಗಿಸಲು ಮತ್ತು ಪುನರ್ ಪರಿಶೀಲನೆಗೆ ಆಗ್ರಹಿಸುವುದು, ಜಿಲ್ಲಾದ್ಯಂತ ಅರಣ್ಯಾಧಿಕಾರಿಗಳ ದೌರ್ಜನ್ಯವನ್ನು ಖಂಡಿಸುವುದು ಮುಂತಾದ ಬೇಡಿಕೆಯನ್ನು ಆಗ್ರಹಿಸಿ ಸಂಘಟಿಸಲಾದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಕ್ರಮಣದಾರರು ಆಗಮಿಸಿದ್ದರು.
ಜೈಲ್ ಭರೋ ಹಿನ್ನೆಲೆ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.