ಶಿರಸಿ: ತೀವ್ರ ಮಂಗನ ಕಾಯಿಲೆ ಪೀಡಿತ ತಾಲೂಕಾಗಿರುವ ಸಿದ್ದಾಪುರ ತಾಲೂಕಿನಲ್ಲಿ ಪಲ್ಸ್ ಪೋಲಿಯೋ ಹಾಗೂ ಮಂಗನ ಕಾಯಿಲೆ ಕುರಿತಾದ ಸಭೆ ನಡೆಯಿತು.
ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲೇ 238 ಶಂಕಿತ ಮಂಗನ ಕಾಯಿಲೆ ಪ್ರಕರಣಗಳು ಕಂಡು ಬಂದಿವೆ. 9 ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ 3 ಪ್ರಕರಣಗಳು ಅರಿಶಿನಗೋಡಿನಲ್ಲಿ ಕಾಣಿಸಿಕೊಂಡಿವೆ. 3 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನಲ್ಲಿ 90 ಮಂಗಗಳು ಮೃತಪಟ್ಟಿದ್ದು, 80 ಶೇಕಡಾ ಮಂಗನ ಕಾಯಿಲೆ ಸಿದ್ದಾಪುರ ತಾಲೂಕನ್ನು ಆವರಿಸಿದೆ. 1859 ಡೋಸ್ ಲಸಿಕೆಗಳನ್ನು ಜನರಿಗೆ ಮೊದಲ ಸುತ್ತಿನಲ್ಲಿ ನೀಡಲಾಗಿದ್ದು, 1 ತಿಂಗಳಿನಲ್ಲಿ 2ನೇ ಸಲ ಕೂಡ ಲಸಿಕೆ ವಿತರಣೆಯಾಗಿದೆ. 7430 ಬಾಟಲ್ ಡಿ.ಎಂ.ಪಿ ತೈಲ ವಿತರಣೆ ಮಾಡಲಾಗಿದೆ. 5600 ಬಾಟಲ್, ಇನ್ನೆರಡು ದಿನಗಳಲ್ಲಿ ವಿತರಣೆ ಮಾಡಲಾಗುವುದು ಎಂದು ವೈದ್ಯಾಧಿಕಾರಿ ಲಕ್ಷ್ಮೀಕಾಂತ ಹೇಳಿದರು. ಇನ್ನೂ 91,000 ಡೋಸ್ ಲಸಿಕೆಗಳ ಅವಶ್ಯಕತೆಯಿದೆ. ಈ ಕುರಿತು ಸರ್ಕಾರಕ್ಕೆ ಕೇಳಿಕೊಳ್ಳಲಾಗಿದೆ. ತಾಲೂಕಿನಲ್ಲಿ ಮಂಗನಕಾಯಿಲೆ ಪೀಡಿತ ಪ್ರದೇಶಗಳಿಗೆ ಸಿಂಪಡಣೆಗಾಗಿ 175 ಕೆಜಿ ಮೇಲಾಥಿಯನ್ ಅರಣ್ಯ ಇಲಾಖೆ ಮುಖಾಂತರ ಕೊಡಲಾಗಿದೆ ಎಂಬ ವರದಿ ಈ ಸಂದರ್ಭದಲ್ಲಿ ಮಂಡನೆಯಾಯಿತು.
ಇದೇ ಸಂದರ್ಭದಲ್ಲಿ ಪಲ್ಸ್ ಪೋಲಿಯೋ ಬಗ್ಗೆ ಮಾಹಿತಿ ನೀಡಿದ ತಾಲೂಕಾ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ, 10,11,12 ರಂದು ದೇಶಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದೆ. 10ರಂದು ಬೂತ್ ಡೇ ಅಂತಾ ಆಚರಿಸಲಾಗುತ್ತಿದೆ. ಬೂತ್‌ಗಳಲ್ಲಿ ಲಸಿಕಾ ಕಾರ್ಯಕ್ರಮ ಹಾಗೂ 11,12 ರಂದು ಮನೆಗಳಿಗೆ ತೆರಳಿ 5 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದರು.
ರಜಾ ದಿನವಾದ ರವಿವಾರದಂದೂ ಕೂಡ ಸಿದ್ದಾಪುರದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಇಂದು ಟಾಸ್ಕ್ ಫೋರ್ಸ್ ಸಭೆ ನಡೆಸಿ, ಗಮನ ಸೆಳೆದರು.