ಕುಮಟಾ : ಯಕ್ಷರತ್ನ ,ಬಡಗುತಿಟ್ಟು ಯಕ್ಷಗಾನದ ಮೇರುಕಲಾವಿದ, ಅಭಿನವ ಶನೀಶ್ವರ ಖ್ಯಾತಿಯ ಜಲವಳ್ಳಿಯ ಶ್ರೀ ವೆಂಕಟೇಶರಾವ್ ಇಂದು ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಯಲ್ಲಿ ಸಂಜೆ ೬;೨೪ಕ್ಕೆ ಇಹಲೋಕ ತ್ಯಜಿಸಿದರು.

  ಯಕ್ಷಗಾನದಲ್ಲಿ ಅನೇಕ ಮೇರು ಕಲಾವಿದರೊಂದಿಗೆ ವೇದಿಕೆಯಲ್ಲಿ ಬಣ್ಣ ಹಚ್ಚಿ ರಾಜ್ಯ ರಾಷ್ಟ್ರಮಟ್ಟದ ವಿವಿಧ ವೇದಿಕೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ ಯಕ್ಷರಂಗದ ತಮ್ಮ ಅಭಿನಯವನ್ನು ಸಮಾಜಕ್ಕೆ ತೋರಿಸಿದ್ದರು. ಇವರ ಪ್ರದರ್ಶನಕ್ಕೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

೧೯೩೩ರಂದು ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ್ದರು.ಇವರ ಅಗಲುವಿಕೆಯಿಂದ ಯಕ್ಷರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಅದ್ವಿತೀಯ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಬಗ್ಗೆ ಇಲ್ಲಿದೆ ಮಾಹಿತಿ.

ಯಕ್ಷಗಾನದ ಉಭಯ ತಿಟ್ಟುಗಳಾದ ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳಲ್ಲಿ ತನ್ನದೇ ಆದ ವೈಶಿಷ್ಟ್ಯಪೂರ್ಣವಾದ ಛಾಪನ್ನು ಮೂಡಿಸಿ ಯಕ್ಷರಂಗದಲ್ಲಿ ಕೀರ್ತಿಯ ಉತ್ತುಂಗತೆಯನ್ನು ಏರಿದ ಅದ್ವಿತೀಯ ಕಲಾವಿದರು ಜಲವಳ್ಳಿ ವೆಂಕಟೇಶ ರಾವ್.

ಉಭಯತಿಟ್ಟುಗಳಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ ಈ ಅಗ್ರಮಾನ್ಯ ಕಲಾವಿದ ಜಲವಳ್ಳಿ ವೆಂಕಟೇಶ್ ರಾವ್ ಅವರು ಹೊನ್ನಾವರ ತಾಲೂಕಿನ ಜಲವಳ್ಳಿ ಎನ್ನುವ ಪುಟ್ಟ ಗ್ರಾಮದಲ್ಲಿ ಬೊಮ್ಮ ಮಡಿವಾಳ ಶ್ರೀದೇವಿ ದಂಪತಿಗಳಿಗೆ ಪುತ್ರರಾಗಿ 1-11-1933 ರಲ್ಲಿ ಜನಿಸಿದರು.

ಕಡುಬಡತನದ ಕಾರಣದಿಂದ 2 ನೆಯ ತರಗತಿಯವರೆಗೆ ಮಾತ್ರವೇ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿ ಬಳಿಕ ತನ್ನ 16 ನೆಯ ವಯಸ್ಸಿನಲ್ಲಿ ಯಕ್ಷಗಾನ ಕಲಾಲೋಕದೆಡೆಗೆ ನಡೇದರು. ಕುಂದಾಪುರ ಮರವಂತೆಯ ರಾಮನಾಗಪ್ಪ ಎನ್ನುವವರ ಭಾಗವತಿಕೆ ಮತ್ತು ಅರ್ಥಗಾರಿಕೆ ಇವರಿಗೆ ಯಕ್ಷಗಾನ ರಂಗಭೂಮಿಯೆಡೆಗೆ ಆಕರ್ಷಿತಗೊಳ್ಳಲು ಪ್ರೇರಣೆಯಾಯಿತು. ಹಡಿನಬಾಳ ಸತ್ಯನಾರಾಯಣ ಹೆಗಡೆಯವರು ಜಲವಳ್ಳಿಯವರನ್ನು ಗುಂಡಬಾಳ ಮೇಳಕ್ಕೆ ಸೇರಿಸಿದರು.

RELATED ARTICLES  ಶಿರಸಿ ಟಿ.ಎಸ್.ಎಸ್ ಸೂಪರ್ ಮಾರ್ಕೆಟ್ ನಲ್ಲಿ ಯುಗಾದಿ ಆಚರಣೆ.

ದೈವದತ್ತವಾದ ಪ್ರತಿಭೆಯನ್ನು ಅವಿರತ ಸಾಧನೆಯ ಮುಖೇನ ಮತ್ತಷ್ಟು ಪ್ರಖರಗೊಳಿಸಿದ ಜಲವಳ್ಳಿಯವರು ಯಕ್ಷಗಾನ ರಂಗದಲ್ಲಿ ತನ್ನ ಅಭೂತಪೂರ್ವ ಕಲಾವಂತಿಕೆಯಿಂದ ಮೇರು ಕಲಾವಿದರಾಗಿ ಅಪಾರವಾದ ಜನಮನ್ನಣೆಯನ್ನು ಗಳಿಸಿಕೊಂಡರು.

ಒಟ್ಟಾರೆ 64 ವರ್ಷಗಳ ಸುಧೀರ್ಘ ಸಾರ್ಥಕ ರಂಗಯಾತ್ರೆ ಜಲವಳ್ಳಿಯವರದ್ದು. ಗುಂಡಬಾಳ ಮೇಳದಲ್ಲಿ 20 ವರ್ಷಗಳು, ಇಡಗುಂಜಿ ಮೇಳದಲ್ಲಿ 2 ವರ್ಷಗಳು,ಕೊಂಡದಕುಳಿ ಮೇಳದಲ್ಲಿ 2 ವರ್ಷಗಳು, ಕೊಳಗಿಬೀಸ್ ಮೇಳದಲ್ಲಿ 2 ವರ್ಷಗಳು, ಸುರತ್ಕಲ್ ಮೇಳದಲ್ಲಿ 4 ವರ್ಷಗಳು, ಸಾಲಿಗ್ರಾಮ ಮೇಳದಲ್ಲಿ 24 ವರ್ಷಗಳು,ಪೆರ್ಡೂರು ಮೇಳದಲ್ಲಿ 6 ವರ್ಷಗಳು, ಕಮಲಶಿಲೆ ಮತ್ತು ಗೋಳಿಗರಡಿ ಮೇಳಗಳಲ್ಲಿ ತಲಾ 1 ವರ್ಷ, ಅಮೃತೇಶ್ವರಿ ಮೇಳದಲ್ಲಿ 2 ವರ್ಷಗಳು ಯಕ್ಷಗಾನ ಮೇಳ ತಿರುಗಾಟ ಮಾಡಿದ ಅಗಾಧ ಅನುಭವ ಜಲವಳ್ಳಿಯವರದ್ದು.

ಪ್ರಾರಂಭದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದವರು ಜಲವಳ್ಳಿಯವರು. ಶನೀಶ್ವರ ಮಹಾತ್ಮೆಯ ಶನೀಶ್ವರನ ಪಾತ್ರ ಜಲವಳ್ಳಿಯವರಿಗೆ ಅಪಾರ ಜನಪ್ರಿಯತೆಯನ್ನೂ,ಸಾರ್ಥಕ ಹೆಸರನ್ನೂ ತಂದುಕೊಟ್ಟ ಪಾತ್ರ. ರಂಗಸ್ಥಳದಲ್ಲಿ ’ಎರಡು ಸುತ್ತು – ಮೂರು ಗುತ್ತು’ ಎನ್ನುವ ಹಾಗಿನ ವಿಶಿಷ್ಟವಾದ ಯಕ್ಷಗಾನೀಯ ಶೈಲಿಯ ಜನಕ ಜಲವಳ್ಳಿಯವರು. ಅಸ್ಖಲಿತ ವಾಗ್ಝರಿ, ಅಗಾಧವಾದ ಭಾಷಾ ಜ್ಞಾನ, ಶಬ್ಧ ಭಂಡಾರ, ವ್ಯಾಕರಣಬದ್ಧ, ಪಾಂಡಿತ್ಯಪೂರ್ಣ ಮಾತುಗಾರಿಕೆ, ಧ್ವನಿಯನ್ನು ಪರಿಪುಷ್ಟವಾಗಿ ಬಳಸಿಕೊಳ್ಳುವ ರೀತಿ, ಪಾತ್ರಗಳ ಘನತೆ ಮತ್ತು ಗೌರವವನ್ನು ಉಳಿಸಿಕೊಂಡು ಪೌರಾಣಿಕವಾದ ಆವರಣದಲ್ಲಿ ನಿರೂಪಿಸುವ ಸಾಮರ್ಥ್ಯ ಜಲವಳ್ಳಿಯವರದ್ದು. ಭಸ್ಮಾಸುರ ಮೋಹಿನಿ ಪ್ರಸಂಗದ ಈಶ್ವರ, ಶ್ರೀ ಶನೀಶ್ವರ ಮಹಾತ್ಮೆಯ ಶನೀಶ್ವರ, ಕಂಸವಧೆಯ ಕಂಸ, ಕನಕಾಂಗಿ ಕಲ್ಯಾಣದ ವೀರ ಘಟೋತ್ಕಜ, ಭೀಷ್ಮ ವಿಜಯದ ಭೀಷ್ಮ, ಕಾರ್ತವೀರ್ಯ ಪ್ರಸಂಗದ ರಾವಣ,ಸುಭದ್ರಾ ಕಲ್ಯಾಣದ ಬಲರಾಮ, ಚಂದ್ರಹಾಸ ಚರಿತ್ರೆಯ ದುಷ್ಟಬುದ್ಧಿ, ಗದಾಯುದ್ಧದ ಭೀಮಸೇನ, ಚಿತ್ರಾಕ್ಷಿ ಪರಿಣಯದ ರಕ್ತಜಂಘ, ವಲಲ ಭೀಮ, ದಿ| ಗುಂಡ್ಮಿ ಕಾಳಿಂಗ ನಾವಡರ ನಾಗಶ್ರೀ ಪ್ರಸಂಗದ ಸುದರ್ಶನ ಮೊದಲಾದ ಪಾತ್ರಗಳನ್ನು ತನ್ನ ವಿಶಿಷ್ಟ ಪ್ರತಿಭಾ ವಿಶೇಷ ಮತ್ತು ಸಾಮರ್ಥ್ಯದಿಂದ ಅಮರಗೊಳಿಸಿದವರು ಜಲವಳ್ಳಿಯವರು.


RELATED ARTICLES  ತೊಳೆದ ಬಟ್ಟೆ ಒಣಗಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು.

ಜಲವಳ್ಳಿಯವರ ಅಗಾಧವಾದ ಕಲಾ ನೈಪುಣ್ಯತೆ, ಮೇರು ಪ್ರತಿಭೆಯನ್ನು ಗುರುತಿಸಿ ಸಂದ ಮಾನ ಸಮ್ಮಾನಗಳು ಹಲವು. ಪ್ರತಿಶ್ಠಿತ ರಾಜ್ಯ ಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬ್ರಹ್ಮಾವರದಲ್ಲಿ ಅಭಿಮಾನಿಗಳಿಂದ ಗೌರವದ ಅಭಿನಂದನೆ ಲಭಿಸಿದೆ. ಯಕ್ಷರತ್ನ ಶ್ರೀ ಜಲವಳ್ಳಿ ವೆಂಕಟೇಶ್ ರಾವ್ ಎನ್ನುವ ಅಭಿನಂದನಾ ಗ್ರಂಥವೂ ಕೂಡ ಜಲವಳ್ಳಿಯವರ ಕಲಾಬದುಕು ಮತ್ತು ಯಶೋಗಾಥೆಯನ್ನು ಸಾರುವಲ್ಲಿ ಯಶಸ್ಸನ್ನು ಗಳಿಸಿದೆ.

ಪತ್ನಿ ಕಲ್ಯಾಣಿ ಹಾಗೂ ಮಾರುತಿ, ಮಂಜುನಾಥ, ವಿದ್ಯಾಧರ ಮೂವರು ಪುತ್ರರು. ಮಾದೇವಿ ಪುತ್ರಿ. ಜಲವಳ್ಳಿಯವರ ಪುತ್ರ ವಿದ್ಯಾಧರ ಜಲವಳ್ಳಿಯವರು ತಂದೆಯ ಹಾದಿಯಲ್ಲಿಯೇ ಸಾಗುತ್ತ ಅವರ ಹೆಸರನ್ನು ಮತ್ತು ಕೀರ್ತಿಯ ಗೌರವವನ್ನು ಕಾಪಾಡುತ್ತ ಯಕ್ಷರಂಗದಲ್ಲಿ ತಮ್ಮ ತಂದೆಯವರಂತೆಯೇ ಮಿಂಚುತ್ತಿದ್ದಾರೆ. ಜಲವಳ್ಳಿ ವೆಂಕಟೇಶ ರಾವ್ ಅವರು ಸದ್ಯ ಹೊನ್ನಾವರ ತಾಲೂಕಿನ ಜಲವಳ್ಳಿಯಲ್ಲಿ ವಿಶ್ರಾಂತ ಜೀವನವನ್ನು ಸುಖದಿಂದ ಸಾಗಿಸಿದವರು.